
ಶಿಲ್ಲಾಂಗ್: ಮೇಘಾಲಯದ ‘ವಾಯ್ಸ್ ಆಫ್ ದಿ ಪೀಪಲ್ ಪಾರ್ಟಿ’ (VPP) ನಾಯಕ ಹಾಗೂ ಶಿಲ್ಲಾಂಗ್ ಲೋಕಸಭಾ ಕ್ಷೇತ್ರದ ಸಂಸದರಾದ ಡಾ. ರಿಕಿ ಎಜೆ ಸಿಂಗ್ಕೋನ್ (Ricky AJ Syngkon) ಅವರು ಗುರುವಾರ ಸಂಜೆ ಫುಟ್ಬಾಲ್ ಆಡುತ್ತಿದ್ದಾಗ ಹಠಾತ್ತನೆ ಕುಸಿದು ಬಿದ್ದು ನಿಧನರಾಗಿದ್ದಾರೆ ಈ ಅನಿರೀಕ್ಷಿತ ಘಟನೆಯು ಇಡೀ ರಾಜ್ಯದಾದ್ಯಂತ ತೀವ್ರ ಆಘಾತವನ್ನುಂಟುಮಾಡಿದೆ.
ವರದಿಗಳ ಪ್ರಕಾರ, ಸಿಂಗ್ಕೋನ್ ಅವರು ಗುರುವಾರ ಸಂಜೆ ಶಿಲ್ಲಾಂಗ್ ಸಮೀಪದ ಮೌಲೈ ಮೌಯಾಂಗ್ ಮೈದಾನದಲ್ಲಿ ಸ್ನೇಹಿತರೊಂದಿಗೆ ಫುಟ್ಬಾಲ್ ಆಡಲು ಹೋಗಿದ್ದರು. ಆಟದ ಮಧ್ಯದಲ್ಲಿ ಅವರು ಇದ್ದಕ್ಕಿದ್ದಂತೆ ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ.

ತಕ್ಷಣವೇ ಅವರ ಸ್ನೇಹಿತರು ಅವರನ್ನು ಹತ್ತಿರದ ಮೌಯಾಂಗ್ ಸಮುದಾಯ ಆರೋಗ್ಯ ಕೇಂದ್ರಕ್ಕೆ (CHC) ಕರೆದೊಯ್ದರು. ಆದರೆ, ದುರದೃಷ್ಟವಶಾತ್ ಆ ಸಮಯದಲ್ಲಿ ಅಲ್ಲಿ ವೈದ್ಯರು ಲಭ್ಯವಿರಲಿಲ್ಲ. ಹೀಗಾಗಿ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಅಲ್ಲಿಂದ ಬೇರೆ ಆಸ್ಪತ್ರೆಗೆ ರವಾನಿಸಲಾಯಿತು. ನಂತರ ಅವರನ್ನು ಜೈಯಾವ್‌ನಲ್ಲಿರುವ ಡಾ. ಹೆಚ್ ಗಾರ್ಡನ್ ರಾಬರ್ಟ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯ ವೈದ್ಯರ ತಂಡವು ಅವರನ್ನು ಉಳಿಸಿಕೊಳ್ಳಲು ಹರಸಾಹಸ ಪಟ್ಟಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ರಾತ್ರಿ ಸುಮಾರು 8:42ಕ್ಕೆ ಅವರು ನಿಧನರಾದರು ಎಂದು ಪ್ರಕಟಿಸಲಾಯಿತು.
ಗಣ್ಯರ ಸಂತಾಪ:
ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಸಿಂಗ್ಕೋನ್ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದು, “ಡಾ. ರಿಕಿ ಅವರು ತಮ್ಮ ಜನರ ಏಳಿಗೆಗಾಗಿ ಸದಾ ಶ್ರಮಿಸುತ್ತಿದ್ದ ವಿನಮ್ರ ವ್ಯಕ್ತಿತ್ವದ ನಾಯಕರಾಗಿದ್ದರು. ಅವರ ನಿಧನದಿಂದ ರಾಜ್ಯಕ್ಕೆ ದೊಡ್ಡ ನಷ್ಟವಾಗಿದೆ,” ಎಂದು ‘X’ ನಲ್ಲಿ ಬರೆದಿದ್ದಾರೆ.
ಉಪಮುಖ್ಯಮಂತ್ರಿ ಪ್ರೆಸ್ಟೋನ್ ಟೈನ್ಸಾಂಗ್, ವಿಪಿಪಿ ಅಧ್ಯಕ್ಷ ಅರ್ಡೆಂಟ್ ಮಿಲ್ಲರ್ ಬಸೈಯಾವ್ಮೊಯಿಟ್ ಸೇರಿದಂತೆ ಹಲವಾರು ಶಾಸಕರು ಮತ್ತು ರಾಜಕೀಯ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ಗೌರವ ಸಲ್ಲಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ