ಟ್ರಂಪ್‌ ತೆರಿಗೆಗಳ ವಿರುದ್ಧ ಅಮೆರಿಕ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿ ಗೆದ್ದ ಭಾರತೀಯ ಮೂಲದ ವಕೀಲ…!

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಧಿಸಿದ್ದ ವ್ಯಾಪಕ ಆಮದು ಸುಂಕಗಳನ್ನು (Tariffs) ರದ್ದುಗೊಳಿಸಿರುವ ಅಮೆರಿಕ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪಿನ ಹಿಂದೆ ಭಾರತೀಯ ಮೂಲದ ಖ್ಯಾತ ವಕೀಲ ನೀಲ್ ಕಾತ್ಯಾಲ್ ಅವರ ಶ್ರಮ ಎದ್ದು ಕಾಣುತ್ತಿದೆ. ಒಮ್ಮೆ ಅಮೆರಿಕ ಸರ್ಕಾರದ ಪರ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸುತ್ತಿದ್ದ ಈ ‘ಭಾರತದ ಸುಪುತ್ರ’, ಈಗ ಟ್ರಂಪ್ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧದ ಹೋರಾಟದ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
1977ರ ‘ಇಂಟರ್ನ್ಯಾಷನಲ್ ಎಮರ್ಜೆನ್ಸಿ ಎಕನಾಮಿಕ್ ಪವರ್ಸ್ ಆಕ್ಟ್’ (IEEPA) ಅನ್ನು ಬಳಸಿಕೊಂಡು ಟ್ರಂಪ್ ಅವರು ಬಹುತೇಕ ಎಲ್ಲಾ ವ್ಯಾಪಾರ ಪಾಲುದಾರ ರಾಷ್ಟ್ರಗಳ ಮೇಲೆ ವಿಧಿಸಿದ್ದ ಸುಂಕಗಳನ್ನು ಕಾತ್ಯಾಲ್ ಅವರು “ಅನ್ಯಾಯದ ಮತ್ತು ಅಸಂವಿಧಾನಿಕ ತೆರಿಗೆಗಳು” ಎಂದು ಕರೆದಿದ್ದರು.
ತೀರ್ಪಿನ ನಂತರ ಮಾತನಾಡಿದ ಕಾತ್ಯಾಲ್, ” ಸುಪ್ರೀಂ ಕೋರ್ಟ್ ಕಾನೂನಿನ ನಿಯಮಕ್ಕಾಗಿ ಮತ್ತು ಎಲ್ಲೆಡೆ ಅಮೆರಿಕನ್ನರ ಪರವಾಗಿ ನಿಂತಿದೆ. ಅಧ್ಯಕ್ಷರು ಶಕ್ತಿಶಾಲಿಗಳಾಗಿರಬಹುದು, ಆದರೆ ನಮ್ಮ ಸಂವಿಧಾನ ಅವರಿಗಿಂತ ಹೆಚ್ಚು ಶಕ್ತಿಶಾಲಿ. ಅಮೆರಿಕದಲ್ಲಿ ಜನ ಸಾಮಾನ್ಯರ ಮೇಲೆ ತೆರಿಗೆ ವಿಧಿಸುವ ಅಧಿಕಾರ ಕೇವಲ ಸಂಸತ್ತಿಗೆ (Congress) ಮಾತ್ರ ಇದೆ,” ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಕರಣದ ಹಿನ್ನೆಲೆ ಮತ್ತು ತೀರ್ಪು
ಅಮೆರಿಕದ ಸಣ್ಣ ಉದ್ಯಮಿಗಳು ಈ ಮೊಕದ್ದಮೆ ಹೂಡಿದ್ದರು, ಅವರಿಗೆ ‘ಲಿಬರ್ಟಿ ಜಸ್ಟಿಸ್ ಸೆಂಟರ್’ ಬೆಂಬಲ ನೀಡಿತ್ತು. ರಾಷ್ಟ್ರೀಯ ಭದ್ರತೆ, ವ್ಯಾಪಾರ ಕೊರತೆ ಮತ್ತು ಫೆಂಟಾನಿಲ್ ಮಾದಕ ದ್ರವ್ಯದ ಸಮಸ್ಯೆಯನ್ನು ‘ರಾಷ್ಟ್ರೀಯ ತುರ್ತು ಪರಿಸ್ಥಿತಿ’ ಎಂದು ಕರೆದಿದ್ದ ಟ್ರಂಪ್, ಸುಂಕ ವಿಧಿಸುವುದನ್ನು ಸಮರ್ಥಿಸಿಕೊಂಡಿದ್ದರು.
ಸಂಸತ್ತಿನ ಸ್ಪಷ್ಟ ಅನುಮತಿಯಿಲ್ಲದೆ ಅಧ್ಯಕ್ಷರು ತುರ್ತು ಅಧಿಕಾರ ಬಳಸಿ ಇಂತಹ ಸುಂಕ ವಿಧಿಸುವಂತಿಲ್ಲ ಎಂದು ಕೋರ್ಟ್ ಮಿತಿ ಹೇರಿದೆ. ಆರು ನ್ಯಾಯಾಧೀಶರ ಪರವಾಗಿ ಮುಖ್ಯ ನ್ಯಾಯಮೂರ್ತಿಗಳು ನೀಡಿದ ತೀರ್ಪಿನಲ್ಲಿ “ಸುಂಕ ಎನ್ನುವುದು ಒಂದು ರೀತಿಯ ತೆರಿಗೆ, ಅದನ್ನು ವಿಧಿಸಲು ಸಂಸತ್ತಿಗೆ ಮಾತ್ರ ಅಧಿಕಾರವಿದೆ” ಎಂದು ಸ್ಪಷ್ಟಪಡಿಸಲಾಗಿದೆ.
ಕಟ್ಯಾಲ್ ಅವರು, ಈ ತೀರ್ಪನ್ನು ಸಾಂವಿಧಾನಿಕ ಮೈಲಿಗಲ್ಲು ಎಂದು ಕರೆದರು “ನಮ್ಮ ಕಾನೂನು ಪ್ರಕರಣದಲ್ಲಿ ನಾವು ಕೇಳಿದ ಎಲ್ಲವನ್ನೂ ಅಮೆರಿಕ ಸುಪ್ರೀಂ ಕೋರ್ಟ್ ನಮಗೆ ನೀಡಿದೆ. ಎಲ್ಲವೂ,” ಎಂದು ಅವರು ಹೇಳಿದರು.
ಈ ತೀರ್ಪಿನಿಂದಾಗಿ ಟ್ರಂಪ್ ಅವರ ಆರ್ಥಿಕ ನೀತಿಗಳಿಗೆ ಭಾರಿ ಪೆಟ್ಟು ಬಿದ್ದಂತಾಗಿದ್ದು, ಅಂತಾರಾಷ್ಟ್ರೀಯ ವ್ಯಾಪಾರ ಮಾತುಕತೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

ಯಾರು ಈ ನೀಲ್ ಕಾತ್ಯಾಲ್?
ಅಮೆರಿಕದ ಚಿಕಾಗೋದಲ್ಲಿ ನೆಲೆಸಿದ್ದ ಭಾರತೀಯ ವಲಸೆ ದಂಪತಿ (ತಾಯಿ ವೈದ್ಯೆ ಮತ್ತು ತಂದೆ ಇಂಜಿನಿಯರ್) ಪುತ್ರನಾಗಿ ಜನಿಸಿದ ಕಾತ್ಯಾಲ್, ಅಮೆರಿಕದ ಕಾನೂನು ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅವರು ಡಾರ್ಟ್‌ಮೌತ್ ಕಾಲೇಜು ಮತ್ತು ಯೇಲ್ ಲಾ ಸ್ಕೂಲ್ ಪದವೀಧರರು. 2010ರಲ್ಲಿ ಬರಾಕ್ ಒಬಾಮಾ ಅವರಿಂದ ಅಮೆರಿಕದ ‘ಆಕ್ಟಿಂಗ್ ಸಾಲಿಸಿಟರ್ ಜನರಲ್’ ಆಗಿ ನೇಮಕಗೊಂಡಿದ್ದರು.
ಅಮೆರಿಕದ ಸುಪ್ರೀಂ ಕೋರ್ಟ್‌ನಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳನ್ನು ವಾದಿಸಿದ ದಾಖಲೆ ಇವರ ಹೆಸರಲ್ಲಿದೆ. ಇವರಿಗೆ ಅಮೆರಿಕದ ನ್ಯಾಯಾಂಗ ಇಲಾಖೆಯ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಎಡ್ಮಂಡ್ ರಾಂಡೋಲ್ಫ್ ಪ್ರಶಸ್ತಿ’ ಸಂದಿದೆ. 2017 ಮತ್ತು 2023ರಲ್ಲಿ ‘ಲಿಟಿಗೇಟರ್ ಆಫ್ ದಿ ಇಯರ್’ ಆಗಿ ಆಯ್ಕೆಯಾಗಿದ್ದರು.
ವ್ಯವಸ್ಥೆಯ ವಿಜಯ
ತಮ್ಮ ಜಯದ ಕುರಿತು ಭಾವುಕರಾಗಿ ಮಾತನಾಡಿದ ಕಾತ್ಯಾಲ್, “ಒಬ್ಬ ವಲಸಿಗನ ಮಗ ನ್ಯಾಯಾಲಯಕ್ಕೆ ಹೋಗಿ, ಈ ದೇಶದ ಅಧ್ಯಕ್ಷರು ಮಾಡುತ್ತಿರುವುದು ಕಾನೂನುಬಾಹಿರ ಎಂದು ಹೇಳಲು ಸಾಧ್ಯವಾಯಿತು. ನೀವು ವಿಶ್ವದ ಅತ್ಯಂತ ಶಕ್ತಿಶಾಲಿ ವ್ಯಕ್ತಿಯಾಗಿರಬಹುದು, ಆದರೆ ಸಂವಿಧಾನವನ್ನು ಮೀರುವಂತಿಲ್ಲ ಎಂಬುದೇ ಈ ದೇಶದ ವಿಶೇಷತೆ,” ಎಂದಿದ್ದಾರೆ.

ಪ್ರಮುಖ ಸುದ್ದಿ :-   ತೃಣಮೂಲ ಬಂಡಾಯ ಸಂಸದರನ್ನು ಯಾಕೆ ಆಹ್ವಾನಿಸಿದ್ದೀರಿ ? : ಸರ್ವಪಕ್ಷ ಸಭೆಗೆ ಕೆಲಕಾಲ ಬಹಿಷ್ಕರಿಸಿದ ವಿಪಕ್ಷಗಳು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement