ದೇಶಕ್ಕೆ ಅವಮಾನ : ಎಐ ಸಮ್ಮಿಟ್‌ನಲ್ಲಿ ಯುವ ಕಾಂಗ್ರೆಸ್ ‘ಶರ್ಟ್‌ಲೆಸ್’ ಪ್ರತಿಭಟನೆಗೆ ವಿಪಕ್ಷಗಳಿಂದಲೇ ಅಸಮಾಧಾನ

ನವದೆಹಲಿ/ಝಾನ್ಸಿ: ಭಾರತ ಮಂಟಪದಲ್ಲಿ ನಡೆದ ‘ಎಐ (AI) ಇಂಪ್ಯಾಕ್ಟ್ ಸಮ್ಮಿಟ್’ನಲ್ಲಿ ಭಾರತೀಯ ಯೂತ್ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ  ಶರ್ಟ್‌ಲೆಸ್‌  ಪ್ರತಿಭಟನೆಯನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಇಂಡಿಯಾ (INDIA) ಮೈತ್ರಿಕೂಟದ ಮಿತ್ರ ಪಕ್ಷದ ನಾಯಕ ಅಖಿಲೇಶ ಯಾದವ್ ತೀವ್ರವಾಗಿ ಟೀಕಿಸಿದ್ದಾರೆ. ಈ ಘಟನೆಯು ದೇಶಕ್ಕೆ “ಅವಮಾನ” ತಂದಿದೆ ಎಂದು ಅವರು ಶನಿವಾರ ಹೇಳಿದ್ದಾರೆ.
ಝಾನ್ಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ ಯಾದವ್, “ನಮ್ಮ ನಡುವೆ ಆಂತರಿಕ ಭಿನ್ನಾಭಿಪ್ರಾಯಗಳಿರಬಹುದು, ಬಿಜೆಪಿ ಸುಳ್ಳು ಹೇಳುತ್ತಿದೆ ಎಂಬುದು ಇಡೀ ದೇಶಕ್ಕೆ ತಿಳಿದಿದೆ. ಆದರೆ ವಿದೇಶಿ ಗಣ್ಯರು ಮತ್ತು ವಿಶ್ವದ ಪ್ರತಿನಿಧಿಗಳ ಮುಂದೆ ದೇಶಕ್ಕೆ ಮುಜುಗರ ತರುವಂತಹ ಕೃತ್ಯಗಳಿಂದ ಕಾಂಗ್ರೆಸ್ ದೂರ ಇರಬೇಕಿತ್ತು” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ ಕೂಡ ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಜಗತ್ತಿಗೆ ಒಗ್ಗಟ್ಟಿನ ಮುಖವನ್ನು ಪ್ರಸ್ತುತಪಡಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ.
“ಎಐ ಶೃಂಗಸಭೆಯಲ್ಲಿ, ಯುವ ಕಾಂಗ್ರೆಸ್ ನಮ್ಮೆಲ್ಲರನ್ನೂ ನಾಚಿಕೆಪಡುವಂತೆ ಮಾಡಿತು. ನಮ್ಮ ರಾಜಕೀಯ ಎಲ್ಲಿಗೆ ಹೋಗುತ್ತಿದೆ! ಯಾರೂ ನಮ್ಮ ದೇಶವನ್ನು ಎಂದಿಗೂ ಕೀಳಾಗಿ ನೋಡಬಾರದು. ನಮ್ಮ ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಲಿ, ನಾವು ಯಾವಾಗಲೂ ಜಗತ್ತಿಗೆ ಒಗ್ಗಟ್ಟಿನ ಮುಖವನ್ನು ಪ್ರಸ್ತುತಪಡಿಸಬೇಕು” ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

ಈ ಘಟನೆಯನ್ನು ಅತ್ಯಂತ ಆಕ್ಷೇಪಾರ್ಹ ಎಂದು ಕರೆದ ಬಿಎಸ್​ಪಿ ನಾಯಕಿ ಮಾಯಾವತಿ, “ನವದೆಹಲಿಯಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆಗೆ ವಿದೇಶಗಳಿಂದ ಅನೇಕ ಗಣ್ಯರನ್ನು ಆಹ್ವಾನಿಸಲಾಗಿತ್ತು. ಇದು ಅಂತಾರಾಷ್ಟ್ರೀಯ ಗಮನ ಸೆಳೆದ ಕಾರ್ಯಕ್ರಮವಾಗಿದ್ದರಿಂದ ಕಾಂಗ್ರೆಸ್ ಯುವ ಕಾರ್ಯಕರ್ತರು ಈ ವೇಳೆ ಶೃಂಗಸಭೆಯ ಆವರಣದೊಳಗೆ ಅರೆನಗ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿರುವುದು ಅತ್ಯಂತ ಅಸಭ್ಯ ಮತ್ತು ಖಂಡನೀಯ ಎಂದು ಹೇಳಿದ್ದಾರೆ.
ಈ ಶೃಂಗಸಭೆಯು ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮವಾಗದೇ ಇದ್ದಿದ್ದರೆ ವಿಷಯ ವಿಭಿನ್ನವಾಗಿರುತ್ತಿತ್ತು. ಆದರೆ, ಅಂತಾರಾಷ್ಟ್ರೀಯ ಶೃಂಗಸಭೆಯ ಸಮಯದಲ್ಲಿ ಇಂತಹ ನಡವಳಿಕೆಯು ಕಳವಳಕಾರಿ. ಇಂತಹ ಶೃಂಗಸಭೆಗಳಲ್ಲಿ ದೇಶದ ಘನತೆ ಮತ್ತು ವರ್ಚಸ್ಸಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ” ಎಂದು ಅವರು ಹೇಳಿದ್ದಾರೆ.

ಶುಕ್ರವಾರ ನಡೆದ ಸಮಾವೇಶದಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳಿದ್ದ ಟೀ ಶರ್ಟ್‌ಗಳನ್ನು ಪ್ರದರ್ಶಿಸುತ್ತಾ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದರು. ಈ ಘಟನೆಯು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದ್ದು, ಪುದುಚೇರಿ ಮತ್ತು ಇಂದೋರ್‌ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆಗಳೂ ನಡೆದಿವೆ.
ಘಟನೆಗೆ ಸಂಬಂಧಿಸಿದಂತೆ ಬಂಧಿತರಾದ ನಾಲ್ವರು ಯೂತ್ ಕಾಂಗ್ರೆಸ್ ಕಾರ್ಯಕರ್ತರ ಜಾಮೀನು ಅರ್ಜಿಯನ್ನು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಶನಿವಾರ ತಿರಸ್ಕರಿಸಿದೆ. ಆರೋಪಿಗಳನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಪ್ರಮುಖ ಸುದ್ದಿ :-   ಉದ್ಧವ್‌ಗೆ ಭಾರಿ ಹಿನ್ನಡೆ ; ಶಿಂಧೆ ಬಣದ ಜೊತೆ ಶಿವಸೇನೆ(ಯುಬಿಟಿ) 6 ಸಂಸದರ ವಿಲೀನಕ್ಕೆ ಲೋಕಸಭೆ ಸ್ಪೀಕರ್ ಅನುಮೋದನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement