
ಕಿಶ್ತ್ವಾರ : ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರದ ಛಾತ್ರು ಎಂಬ ದುರ್ಗಮ ಪ್ರದೇಶದ ಕಡಿದಾದ ಬೆಟ್ಟಗಳಲ್ಲಿ ಅಡಗಿದ್ದ ಉಗ್ರರನ್ನು ಸದೆಬಡಿಯಲು ಭಾರತೀಯ ಸೇನೆಯು ‘ಆಪರೇಷನ್ ಟ್ರಾಶಿ-1’ (Operation Trashi-I) ಎಂಬ ಬೃಹತ್ ಕಾರ್ಯಾಚರಣೆ ಕೈಗೊಂಡಿದ್ದು, ಈ ಕಾರ್ಯಾಚರಣೆಯಲ್ಲಿ ಜೀವದ ಹಂಗು ತೊರೆದು ಖತರ್ನಾಕ್ ಭಯೋತ್ಪಾದಕರು ಎಲ್ಲಿದ್ದಾರೆಂದು ಪತ್ತೆ ಹಚ್ಚಿ ಅವರ ಸಾವಿಗೆ ಕಾರಣವಾದ ಸೇನೆಯ ಹೆಮ್ಮೆಯ ನಾಯಿ ‘ಟೈಸನ್’ ಈಗ ಎಲ್ಲರ ಹೀರೋ ಆಗಿದೆ.
ಜೈಶ್-ಎ-ಮೊಹಮ್ಮದ್ ಸಂಘಟನೆಯ ಅಪಾಯಕಾರಿ ಉಗ್ರರು ಗುಹೆಯಂತಹ ಅಡಗುದಾಣದಲ್ಲಿ ಅವಿತು ಕುಳಿತಿದ್ದರು. ಅವರ ಅಡಗುದಾಣವನ್ನು ಪತ್ತೆಹಚ್ಚುವುದು ಅಷ್ಟು ಸುಲಭವಾಗಿರಲಿಲ್ಲ. ಅಂತಹ ಸಂದರ್ಭದಲ್ಲಿ 2 ಪ್ಯಾರಾ (ಸ್ಪೆಷಲ್ ಫೋರ್ಸಸ್) ವಿಭಾಗದ ಗಣ್ಯ ಜರ್ಮನ್ ಶೆಫರ್ಡ್ ಶ್ವಾನ ಟೈಸನ್ ತನ್ನ ಪ್ರಾಣದ ಹಂಗು ತೊರೆದು ಆ ಕಡಿದಾದ ಕಂದಕದೊಳಗೆ ತೆವಳುತ್ತಾ ಸಾಗಿತು.

ತಮ್ಮ ಅಡಗುದಾಣಕ್ಕೆ ಟೈಸನ್ ಹತ್ತಿರವಾಗುತ್ತಿರುವದನ್ನು ಕಂಡ ಉಗ್ರರು ಅದರ ಮೇಲೆ ಮನಬಂದಂತೆ ಗುಂಡಿನ ಮಳೆಗರೆದರು. ಒಂದು ಗುಂಡು ಟೈಸನ್ ಕಾಲಿಗೆ ತಗುಲಿತು. ರಕ್ತ ಸುರಿಯುತ್ತಿದ್ದರೂ, ಅಸಹನೀಯ ನೋವಿದ್ದರೂ ಈ ಮೂಕ ಸೈನಿಕ ಕಿಂಚಿತ್ತೂ ಹಿಂದೆ ಸರಿಯಲಿಲ್ಲ. ತನ್ನ ಗುರಿ ತಲುಪುವವರೆಗೆ ಮುನ್ನುಗ್ಗಿದ ಟೈಸನ್, ಉಗ್ರರ ನಿಖರ ಅಡಗು ತಾಣವನ್ನು ಸೇನೆಗೆ ತೋರಿಸಿಕೊಟ್ಟಿತು. ಮುಂದಿನ ಕೆಲಸವನ್ನು ಸೈನಿಕರು ಮಾಡಿದರು, ಮೂವರು ಉಗ್ರರನ್ನೂ ಹೊಡೆದುರುಳಿಸಿದರು.
ಉಗ್ರ ಸೈಫುಲ್ಲಾ 20 ಬಾರಿ ತಪ್ಪಿಸಿಕೊಂಡಿದ್ದ…
ಟೈಸನ್ ನೀಡಿದ ನಿಖರ ಸುಳಿವಿನಿಂದ ಎಚ್ಚೆತ್ತ ರಾಜ್ಯ ಪೊಲೀಸ್, ಸಿಆರ್‌ಪಿಎಫ್ (CRPF) ಮತ್ತು ವಿಶೇಷ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ಮೂವರು ಉಗ್ರರನ್ನು ಹೊಡೆದುರುಳಿಸಿದರು. ಇವರಲ್ಲಿ ಪ್ರಮುಖನಾದವನು ಸೈಫುಲ್ಲಾ. ಕಳೆದ ಎರಡು ವರ್ಷಗಳಿಂದ ಸೇನೆಯ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಈತ, ಬರೋಬ್ಬರಿ 20 ಬಾರಿ ಸಾವಿನಿಂದ ಪಾರಾಗಿದ್ದ. ಆದರೆ ಟೈಸನ್ ಮುಂದೆ ಈತನ ಆಟ ನಡೆಯಲಿಲ್ಲ. ಅದು ಆತನಿಗೆ ತಪ್ಪಿಸಿಕೊಳ್ಳಲು ಅವಕಾಶ ನೀಡದೆ, ಆತ ಅಡಗಿದ್ದ ತಾಣವನ್ನು ನಿಖರವಾಗಿ ತೋರಿಸಿತು.
ಸ್ಥಳದಲ್ಲಿ ಎರಡು AK-47 ರೈಫಲ್‌ಗಳು ಸೇರಿದಂತೆ ಭಾರಿ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗಾಯಗೊಂಡ ಟೈಸನ್ ನಾಯಿಯನ್ನು ಕೂಡಲೇ ವಿಮಾನದ ಮೂಲಕ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲಾಗಿದ್ದು, ಸದ್ಯ ಅದು ಚೇತರಿಸಿಕೊಳ್ಳುತ್ತಿದೆ. ಕಿಶ್ತ್ವಾರದ ಜನರು ಈ ಉಗ್ರರ ಸಂಹಾರದಿಂದ ನಿಟ್ಟುಸಿರು ಬಿಟ್ಟಿದ್ದಾರೆ.
ನೆನಪಾದ ‘ಫ್ಯಾಂಟಮ್’ ಬಲಿದಾನ
ಟೈಸನ್‌ನ ಈ ಸಾಹಸವು ಅಕ್ಟೋಬರ್ 2024ರಲ್ಲಿ ಹುತಾತ್ಮನಾದ ‘ಫ್ಯಾಂಟಮ್’ ಎಂಬ ಶ್ವಾನದ ನೆನಪನ್ನು ಮರುಕಳಿಸುವಂತೆ ಮಾಡಿದೆ. ಅಂದು ಫ್ಯಾಂಟಮ್ ತನ್ನ ಹ್ಯಾಂಡ್ಲರ್ ಮತ್ತು ಉಳಿದ ಸೈನಿಕರ ಪ್ರಾಣ ಉಳಿಸಲು ತನ್ನ ಪ್ರಾಣವನ್ನೇ ಅರ್ಪಿಸಿತ್ತು. ಫ್ಯಾಂಟಮ್ ತ್ಯಾಗವು ಭದ್ರತಾ ಪಡೆಗಳು ಸ್ಥಳದಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕರನ್ನು ಹೊಡೆದುರುಳಿಸಲು ಸಹಾಯ ಮಾಡಿತು. ಈಗ ಟೈಸನ್ ಕೂಡ ಅಷ್ಟೇ ಧೈರ್ಯ ತೋರಿ, ಗಾಯಗೊಂಡಿದ್ದರೂ ತನ್ನ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿ ಮರಳಿದೆ.


ನಿಮ್ಮ ಕಾಮೆಂಟ್ ಬರೆಯಿರಿ