ಮಮತಾ ಬ್ಯಾನರ್ಜಿಯನ್ನು ಇಂಡಿಯಾ ಮೈತ್ರಿಕೂಟದ ನಾಯಕಿ ಮಾಡಿ, ರಾಹುಲ್‌ ಗಾಂಧಿ ಹಿಂದೆ ಸರಿಯಲಿ..: ಮಣಿಶಂಕರ ಅಯ್ಯರ್ ಹೇಳಿಕೆ

ಕೋಲ್ಕತ್ತಾ: ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್, ಈಗ ಮತ್ತೆ ಹೊಸ ಬಾಂಬ್ ಸಿಡಿಸಿದ್ದಾರೆ. ರಾಹುಲ್ ಗಾಂಧಿಯವರು ಇಂಡಿಯಾ (INDIA) ಮೈತ್ರಿಕೂಟದ ‘ಮುನ್ನಡೆಸುವ ಸೀಟನ್ನು’ ಪ್ರಾದೇಶಿಕ ಪಕ್ಷಗಳ ನಾಯಕರಿಗೆ ಬಿಟ್ಟುಕೊಡಬೇಕು ಎಂದು ಸಲಹೆ ನೀಡುವ ಮೂಲಕ ರಾಜಕೀಯ ವಲಯದಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ.
ಮಮತಾ ಇಲ್ಲದಿದ್ದರೆ ‘ಇಂಡಿಯಾ’ ಇಲ್ಲ!
ಕೋಲ್ಕತ್ತಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಯ್ಯರ್, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಮೈತ್ರಿಕೂಟದ ನೈಜ ನಾಯಕಿ ಎಂದು ಬಣ್ಣಿಸಿದರು. “ಮಮತಾ ಬ್ಯಾನರ್ಜಿ ಈ ಮೈತ್ರಿಕೂಟದ ನಾಯಕಿ. ಅವರ ಜೊತೆಗೆ ಈ ಸ್ಥಾನವನ್ನು ಅಲಂಕರಿಸಬಲ್ಲ ಇನ್ನೂ ಇಬ್ಬರು ಅಥವಾ ನಾಲ್ವರು ನಾಯಕರಿದ್ದಾರೆ. ಮಮತಾ ಇಲ್ಲದಿದ್ದರೆ ಇಂಡಿಯಾ (INDIA) ಮೈತ್ರಿಕೂಟದ ಅಸ್ತಿತ್ವವೇ ಇರುವುದಿಲ್ಲ,” ಎಂದು ಅವರು ಪ್ರತಿಪಾದಿಸಿದರು.

ಅಲ್ಲದೆ, “ರಾಹುಲ್ ಗಾಂಧಿ ಅವರು ತಾವೇ ಮೈತ್ರಿಯ ಮುಂಚೂಣಿಯಲ್ಲಿರಲು ಪ್ರಯತ್ನಿಸುವ ಬದಲು ಸ್ಟಾಲಿನ್, ಮಮತಾ ಬ್ಯಾನರ್ಜಿ, ಅಖಿಲೇಶ ಯಾದವ್ ಅಥವಾ ತೇಜಸ್ವಿ ಯಾದವ್ ಅವರಂತಹ ಪ್ರಾದೇಶಿಕ ನಾಯಕರಿಗೆ ಜವಾಬ್ದಾರಿ ಹಸ್ತಾಂತರಿಸಬೇಕು ಎಂದು ಅವರು ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ (TMC) ಪ್ರತಿಕ್ರಿಯೆ
ಈ ಕುರಿತು ಪ್ರತಿಕ್ರಿಯಿಸಿದ ಟಿಎಂಸಿ ನಾಯಕ ಕುನಾಲ್ ಘೋಷ್, “ನಾವು ಸದ್ಯಕ್ಕೆ ಬಂಗಾಳ ಚುನಾವಣೆಯಲ್ಲಿ ಬ್ಯುಸಿಯಾಗಿದ್ದೇವೆ. ಬಿಜೆಪಿಯನ್ನು ಸೋಲಿಸಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಾಲ್ಕನೇ ಬಾರಿಗೆ ಸರ್ಕಾರ ರಚಿಸುವುದು ನಮ್ಮ ಮೊದಲ ಆದ್ಯತೆ. ಮಣಿಶಂಕರ ಅಯ್ಯರ್ ಹಿರಿಯ ನಾಯಕರು, ಬಿಜೆಪಿಯ ವಿರುದ್ಧ ಸೈದ್ಧಾಂತಿಕ ಹೋರಾಟ ಯಾರು ಮಾಡುತ್ತಿದ್ದಾರೆ ಎಂಬುದು ದೇಶಕ್ಕೆ ತಿಳಿದಿದೆ,” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಭಾರತದ ಆಕಾಶದಲ್ಲಿಲ್ಲ ಮಳೆ ತರುವ ಮೋಡಗಳು ; ಆತಂಕಕಾರಿ ವಾಸ್ತವ ಬಿಂಬಿಸಿದ 3 ಉಪಗ್ರಹಗಳ ಚಿತ್ರಗಳು ; ಇದಕ್ಕೆ ಕಾರಣಗಳೇನು?

ಹಿಂದೆ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ರಾಹುಲ್ ಗಾಂಧಿಯವರಿಂದಲೇ ಅಮಾನತುಗೊಂಡಿದ್ದ ಮಣಿಶಂಕರ ಅಯ್ಯರ್, ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ನ ವಿರೋಧಿ ನಾಯಕರನ್ನು ಹೊಗಳುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಶ್ಲಾಘಿಸಿದ್ದರು. ಬಂಗಾಳದಲ್ಲಿ ಈ ಬಾರಿ ಕಾಂಗ್ರೆಸ್ ಯಾವುದೇ ಮೈತ್ರಿ ಇಲ್ಲದೆ (ಸಿಪಿಎಂ ಜೊತೆಗೂ ಮೈತ್ರಿ ಇಲ್ಲದೆ) ಟಿಎಂಸಿ ಮತ್ತು ಬಿಜೆಪಿ ವಿರುದ್ಧ ಚುನಾವಣಾ ಕಣಕ್ಕಿಳಿಯುತ್ತಿರುವ ಸಂದರ್ಭದಲ್ಲೇ ಈ ಹೇಳಿಕೆ ಹೊರಬಿದ್ದಿರುವುದು ಕಾಂಗ್ರೆಸ್ ಮುಜುಗರಕ್ಕೆ ಕಾರಣವಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement