ಶಿವಮೊಗ್ಗ: ಶಿವಮೊಗ್ಗದ ಹೊರವಲಯದ ಸೂಳೆಬೈಲು ಪ್ರದೇಶದಲ್ಲಿ 15 ವರ್ಷದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯನ್ನು ಆತನ ಸಹಪಾಠಿಗಳೇ ಬರ್ಬರವಾಗಿ ಹೊಡೆದು ಕೊಂದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸೋಮವಾರ ರಾತ್ರಿ ವಿಶೇಷ ತರಗತಿ ಮುಗಿಸಿ ವಿದ್ಯಾರ್ಥಿಗಳು ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ಮೃತ ವಿದ್ಯಾರ್ಥಿಯನ್ನು ಸಂಕೇತ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ (SSLC Exam) ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸ್ಪೆಶಲ್ ಕ್ಲಾಸ್ ತೆಗೆದುಕೊಳ್ಳಲಾಗುತ್ತಿತ್ತು. ಸೂಳೆಬೈಲು ಬಡಾವಣೆಯ ಸಂಕೇತ ಕ್ಲಾಸ್ ಮುಗಿಸಿಕೊಂಡು ವಾಪಸ್ ಮನೆಯತ್ತ ಹೋಗುವಾಗ ಸ್ನೇಹಿತ ಗಿರೀಶ್ ಮೇಲೆ ಅದೇ ಬಡಾವಣೆಯ ಐವರು ಬಾಲಕರು ಹಲ್ಲೆ ಮಾಡುತ್ತಿದ್ದುದನ್ನು ಕಂಡಿದ್ದಾನೆ. ಆತನ ಮೇಲೆ ನಡೆಯುತ್ತಿದ್ದ ಹಲ್ಲೆ ತಡೆಯಲು ಮುಂದಾಗಿದ್ದಾನೆ. ಆಗ ಇನ್ನೊಂದು ಸಮುದಾಯದ ನಾಲ್ಕೈದು ಅಪ್ರಾಪ್ತರು ಸಂಕೇತ್ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಇದರಿಂದ ಸಂಕೇತ್ ಅಲ್ಲಿಯೇ ಕುಸಿದು ಬಿದ್ದಿದ್ದಾನೆ.
ಮಾಹಿತಿ ತಿಳಿದ ತಕ್ಷಣ ಅಕ್ಕಪಕ್ಕದವರು ಅಲ್ಲಿಗೆ ಹೋಗಿ ನೋಡಿದಾಗ ಹಲ್ಲೆಗೊಳಗಾದ ಸಂಕೇತ್ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ಕೆರೆದುಕೊಂಡು ಹೋದರೂ ಪ್ರಯೋಜನವಾಗಲಿಲ್ಲ, ಅಷ್ಟರಲ್ಲಿಯೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ಹೇಳಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ತುಂಗಾ ನಗರ ಪೊಲೀಸರು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ಕಾರಣವಾದ ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತನಿಖೆಯು ಚುರುಕುಗೊಂಡಿದೆ.
ಎಸ್‌ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ವಿದ್ಯಾರ್ಥಿ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಮೆಗ್ಗಾನ್ ಆಸ್ಪತ್ರೆ ಹಾಗೂ ಸ್ಥಳಕ್ಕೆ ಭೇಟಿ ನೀಡಿದರು. ಈ ಘಟನೆಯ ನಂತರ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗುವ ಸಾಧ್ಯತೆ ಇರುವುದರಿಂದ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ