ಗಯಾ: ಮಗ್ಗಗಳಿಗೆ ಹೆಸರಾದ ಬಿಹಾರದ ಗಯಾ ಜಿಲ್ಲೆಯ ‘ಪಟ್ವಾ ಟೋಲಿ’ ಎಂಬ ಸಣ್ಣ ನೇಯ್ಗೆಯ ಓಣಿ ಇತ್ತೀಚೆಗೆ ಐತಿಹಾಸಿಕ ಕ್ಷಣವೊಂದು ದಾಖಲಾಗಿದೆ. ಕಳೆದ ಸುಮಾರು 85 ವರ್ಷಗಳಿಂದ ಮದುವೆಯ ಮೆರವಣಿಗೆಯನ್ನೇ ನಡೆಸದ ಕುಟುಂಬವೊಂದು, ಈ ತಿಂಗಳು ಆ ಹಳೆಯ ಸಂಪ್ರದಾಯವನ್ನು ಮುರಿದು ಅದ್ಧೂರಿಯಾಗಿ ಮದುವೆ ಆಚರಿಸಿದೆ.
ಈ ವಿಚಿತ್ರ ಸಂಪ್ರದಾಯದ ಹಿಂದೆ ಒಂದು ಕಣ್ಣೀರಿನ ಕಥೆಯಿದೆ. 1940ರಲ್ಲಿ ಈ ಕುಟುಂಬದ ಹಿರಿಯರಾದ ಜಾನಕಿ ಪ್ರಸಾದ ಅವರ ಮದುವೆ ನಿಶ್ಚಯವಾಗಿತ್ತು. ಮೆರವಣಿಗೆಯ ಮೂಲಕ ವರನು ವಧುವಿನ ಮನೆಗೆ ತಲುಪಿದ್ದನು. ಆದರೆ, ಮದುವೆಯ ಧಾರೆ ಎರೆಯುವ ಮುನ್ನವೇ, ಅಂದರೆ ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ಜಾನಕಿ ಪ್ರಸಾದ ಅವರ ಅಣ್ಣ ನತೂ ಪಟ್ವಾ ಹಠಾತ್ತನೆ ನಿಧನರಾದರು. ಈ ಆಘಾತದಿಂದ ಮದುವೆ ಅರ್ಧಕ್ಕೇ ನಿಂತು, ಮೆರವಣಿಗೆ ಶೋಕತಪ್ತವಾಗಿ ಮನೆಗೆ ಮರಳಿತು.
ಕೆಲವು ವರ್ಷಗಳ ನಂತರ ಜಾನಕಿ ಪ್ರಸಾದ ಅದೇ ಹುಡುಗಿಯನ್ನು ವಿವಾಹವಾದರಾದರೂ, ಯಾವುದೇ ಮೆರವಣಿಗೆ ಅಥವಾ ಸಂಭ್ರಮವಿಲ್ಲದೆ ಸರಳವಾಗಿ ಮದುವೆ ನಡೆಯಿತು.
ಅಂದಿನಿಂದ, ಈ ಕುಟುಂಬದಲ್ಲಿ ಮದುವೆಯ ಮೆರವಣಿಗೆ (ಬರಾತ್) ಹೊರಡುವುದು ಅಶುಭ ಎಂಬ ನಂಬಿಕೆ ಮನೆಮಾಡಿತು. ಕಾಲಾನಂತರದಲ್ಲಿ, ಅನೌಪಚಾರಿಕವಾದ ಆದರೆ ದೃಢವಾದ ನಿಯಮವು ಜಾರಿಗೆ ಬಂದಿತು. ಮದುವೆಯ ಅವಧಿಯಲ್ಲಿ ಮನೆಯಲ್ಲಿ ಮಗು ಜನಿಸದ ಹೊರತು ಕುಟುಂಬದಿಂದ ಯಾವುದೇ ವರನು ಕುದುರೆ ಸವಾರಿ ಮಾಡುವುದಿಲ್ಲ ಅಥವಾ ವಧುವಿನ ಮನೆಗೆ ಮೆರವಣಿಗೆಯನ್ನು ತೆಗೆದುಕೊಂಡು ಹೋಗುವುದಿಲ್ಲ, ಇದು ದುರದೃಷ್ಟಕ್ಕೆ ಕಾರಣವಾಗುತ್ತದೆ ಎಂದು ಅವರು ನಂಬಿದ್ದರು.
ವಿಚಿತ್ರ ನಿಯಮ
ಕುಟುಂಬದ ಹಿರಿಯರು ಒಂದು ಕಟ್ಟುನಿಟ್ಟಾದ ನಿಯಮ ಮಾಡಿಕೊಂಡಿದ್ದರು: “ಮದುವೆಯ ಸಮಯದಲ್ಲಿ ಕುಟುಂಬದಲ್ಲಿ ಮಗುವಿನ ಜನನವಾದರೆ ಮಾತ್ರ ಈ ಅಶುಭ ನಂಬಿಕೆ ದೂರವಾಗುತ್ತದೆ, ಅಲ್ಲಿಯವರೆಗೆ ಯಾರೂ ಮೆರವಣಿಗೆ ಮಾಡುವಂತಿಲ್ಲ.” ಈ ಕಾರಣದಿಂದಾಗಿ ಕಳೆದ 85 ವರ್ಷಗಳಲ್ಲಿ ಜಾನಕಿ ಪ್ರಸಾದ ಅವರ ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಸುಮಾರು 16-17 ಸದಸ್ಯರ ಮದುವೆಗಳು ಯಾವುದೇ ಬ್ಯಾಂಡ್-ಮದುವೆ ಮೆರವಣಿಗೆ ಇಲ್ಲದೆ, ಅತ್ಯಂತ ಸರಳವಾಗಿ ದೇವಸ್ಥಾನಗಳಲ್ಲಿ ನಡೆದಿದ್ದವು.
ಬದಲಾದ ಅದೃಷ್ಟ
ಜಾನಕಿ ಪ್ರಸಾದ ಅವರ ಮೊಮ್ಮಗ ರಾಜು ಪಟ್ವಾ ಅವರ ಮದುವೆ ಕೂಡ ಮೊದಲು ಸರಳವಾಗಿಯೇ ನಿಶ್ಚಯವಾಗಿತ್ತು. ಆದರೆ, ಮದುವೆಗೆ ಕೇವಲ ಎರಡು ದಿನಗಳಿರುವಾಗ ಅವರ ವಿಸ್ತೃತ ಕುಟುಂಬದಲ್ಲಿ ಮಗುವೊಂದು ಜನಿಸಿತು! ಇದನ್ನು ಶುಭ ಶಕುನವೆಂದು ಪರಿಗಣಿಸಿದ ಹಿರಿಯರು, ತಕ್ಷಣವೇ 85 ವರ್ಷಗಳ ಹಳೆಯ ನಿಷೇಧವನ್ನು ಮುಕ್ತಾಯಗೊಳಿಸಲು ನಿರ್ಧರಿಸಿದರು.
ಕುದುರೆಯನ್ನೇರಿದ ವರ ರಾಜು ಪಟ್ವಾ ಅವರ ಮೆರವಣಿಗೆ ಇಡೀ ಪಟ್ವಾ ಟೋಲಿಯಲ್ಲಿ ಸಂಚರಿಸಿತು. ಇದನ್ನು ನೋಡಲು ನೆರೆಹೊರೆಯವರು ಸಾಲುಗಟ್ಟಿ ನಿಂತಿದ್ದರು. ಮಗುವಿನ ಜನನವು ಒಂದು ಕುಟುಂಬದ ದಶಕಗಳ ಕಾಲದ ಮೌಢ್ಯ ಅಥವಾ ಸಂಪ್ರದಾಯಕ್ಕೆ ಮಂಗಳ ಹಾಡಲು ದಾರಿಯಾಯಿತು.


ನಿಮ್ಮ ಕಾಮೆಂಟ್ ಬರೆಯಿರಿ