
ಚೆನ್ನೈ: ಫೆಬ್ರವರಿ 25, ಬುಧವಾರ ಚೆನ್ನೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತದ ಬ್ಯಾಟಿಂಗ್ ಕೋಚ್ ನೀಡಿದ ಮಾಹಿತಿ ಪ್ರಕಾರ, ರಿಂಕು ಸಿಂಗ್ ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತ ತಂಡವನ್ನು ಮತ್ತೆ ಸೇರಿಕೊಳ್ಳಲಿದ್ದಾರೆ. ಗುರುವಾರ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಸೂಪರ್ 8 ಪಂದ್ಯಕ್ಕೂ ಮುನ್ನ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಕುಟುಂಬದ ತುರ್ತು ಪರಿಸ್ಥಿತಿಯ ಕಾರಣದಿಂದಾಗಿ ರಿಂಕು ಸಿಂಗ್ ತಾತ್ಕಾಲಿಕವಾಗಿ ಮನೆಗೆ ತೆರಳಿದ್ದರು. ಅವರ ತಂದೆ ಖಾಂಚಂದ್ ಸಿಂಗ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಗ್ರೇಟರ್ ನೋಯ್ಡಾದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವರದಿಗಳಿದ್ದವು. ಸೋಮವಾರ (ಫೆಬ್ರವರಿ 23) ಭಾರತ ತಂಡ ಚೆನ್ನೈಗೆ ಪ್ರಯಾಣಿಸಿದಾಗ ರಿಂಕು ಕೂಡ ಜೊತೆಯಲ್ಲಿದ್ದರು.

ಈ ಬಗ್ಗೆ ಮಾತನಾಡಿದ ಕೋಚ್ ಸೀತಾಂಶು ಕೊಟಕ್ , “ರಿಂಕು ಅವರ ತಂದೆಗೆ ಆರೋಗ್ಯ ಸರಿ ಇರಲಿಲ್ಲ, ಹಾಗಾಗಿ ಅವರು ಮನೆಗೆ ಹೋಗಿದ್ದರು. ಅವರು ಜಿಂಬಾವ್ವೆ ಪಂದ್ಯದ ಒಳಗೆ ಮರಳಲಿದ್ದಾರೆ ಎಂದು ನಾನು ಭಾವಿಸುತ್ತೇನೆ,” ಎಂದು ತಿಳಿಸಿದರು.
ರಿಂಕು ಈ ಟೂರ್ನಿಯಲ್ಲಿ ಇದುವರೆಗೆ ಭಾರತದ ಪರ 5 ಪಂದ್ಯಗಳನ್ನು ಆಡಿದ್ದು, ಕೇವಲ 24 ರನ್ ಗಳಿಸಿದ್ದಾರೆ.ಅಹಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ನಂತರ, ಭಾರತ ತಂಡ ಪುಟಿದೇಳಲು ರಿಂಕು ಅವರ ಫಾರ್ಮ್ ಮುಖ್ಯವಾಗಿದೆ. ಆದಾಗ್ಯೂ, ಜಿಂಬಾಬ್ವೆ ಪಂದ್ಯಕ್ಕೂ ಮುನ್ನ ನಡೆದ ನಾಲ್ಕು ಗಂಟೆಗಳ ಅಭ್ಯಾಸ ಅವಧಿಯಲ್ಲಿ ರಿಂಕು ಬ್ಯಾಟಿಂಗ್ ಮಾಡಿಲ್ಲ. ಇದು ಅವರು ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುತ್ತಾರೆಯೇ ಎಂಬ ಬಗ್ಗೆ ಅನುಮಾನ ಮೂಡಿಸಿದೆ.
ಭಾರತದ ಆಟದ ಶೈಲಿಯಲ್ಲಿ ಬದಲಾವಣೆ ಇಲ್ಲ
ದಕ್ಷಿಣ ಆಫ್ರಿಕಾ ವಿರುದ್ಧ ಸೋತರೂ ಸಹ, ಭಾರತ ತನ್ನ ಆಕ್ರಮಣಕಾರಿ ಆಟದ ಶೈಲಿಯನ್ನು ಬದಲಾಯಿಸುವುದಿಲ್ಲ ಎಂದು ಕೋಟಕ್ ಸ್ಪಷ್ಟಪಡಿಸಿದ್ದಾರೆ. “ನಾವು ಅದೇ ರೀತಿಯ ಧೈರ್ಯದ ಕ್ರಿಕೆಟ್ ಆಡುವುದನ್ನು ಮುಂದುವರಿಸುತ್ತೇವೆ. ಕೆಲವೊಮ್ಮೆ ವಿಕೆಟ್‌ಗಳು ಬೀಳುತ್ತವೆ ಅಥವಾ ಶಾಟ್ ಹೊಡೆಯುವಲ್ಲಿ ತಪ್ಪುಗಳಾಗಬಹುದು. ಆದರೆ ಟಿ20 ಕ್ರಿಕೆಟ್‌ನಲ್ಲಿ ಸಕಾರಾತ್ಮಕವಾಗಿ ಇರುವುದು ಮುಖ್ಯ. ನಮಗೆ ಯಶಸ್ಸು ತಂದುಕೊಟ್ಟ ಅದೇ ಶೈಲಿಯ ಆಟ ಮುಂದುವರಿಯಲಿದೆ,” ಎಂದು ಅವರು ಹೇಳಿದರು.
ಟಿ20 ವಿಶ್ವಕಪ್‌ನ ಸೆಮಿಫೈನಲ್ ಪ್ರವೇಶಿಸಲು ಭಾರತವು ತನ್ನ ಉಳಿದ ಎರಡು ಗುಂಪು ಹಂತದ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ