ಬೆಂಗಳೂರು : ಅಂತಾರಾಜ್ಯ ಮಾದಕವಸ್ತು ಜಾಲದ ವಿರುದ್ಧ ಕೇರಳ ಪೊಲೀಸರು ಬೆಂಗಳೂರಿನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ ಅಸ್ಸಾಂ ಮೂಲದ ಪೆಡ್ಲರ್ ಧೀರೇಶ ಕುಟುಮ್ (27) ಎಂಬಾತನನ್ನು ಬಂಧಿಸಿದ್ದಾರೆ.
ಕೇರಳದ ಮಾದಕವಸ್ತು ನಿಗ್ರಹ ದಳದ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಬಂಧಿತನಿಂದ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಎಂಡಿಎಂಎ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಟ್ಟು 9 ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಧೀರೇಶ ತಂಗಿಯ ಪತಿ ನೈಜೀರಿಯಾ ಮೂಲದವನಾಗಿದ್ದು, ಆತನ ಮೂಲಕ ಅಸ್ಸಾಂಗೆ ಎಂಡಿಎಂಎ ರವಾನೆಯಾಗುತ್ತಿತ್ತು. ಬಳಿಕ ಅಸ್ಸಾಂನಲ್ಲಿದ್ದ ತಂಗಿ ಮೂಲಕ ಕೇರಳ ಮತ್ತು ಕರ್ನಾಟಕಕ್ಕೆ ಮಾದಕ ವಸ್ತು ಸಾಗಾಟ ಮಾಡಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಸೆರೆಲಾಕ್ ಪ್ಯಾಕೆಟ್‌ಗಳಲ್ಲಿ ಎಂಡಿಎಂಎ ಅಡಗಿಸಿ ಮಾರಾಟ ಮಾಡಲಾಗುತ್ತಿತ್ತು. ಆನ್‌ಲೈನ್ ಆಹಾರ ವಿತರಕರಂತೆ ನಟಿಸಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಜಾಲದ ಬಗ್ಗೆ ಖಚಿತ ಮಾಹಿತಿ ಪಡೆದ ಕೇರಳ ಪೊಲೀಸರು ಎಲೆಕ್ಟ್ರಾನಿಕ್ ಸಿಟಿ ಸಮೀಪದ ಮೈಲಸಂದ್ರದಲ್ಲಿರುವ ರಮೇಶ ರೆಡ್ಡಿ ಬಡಾವಣೆಯ ನಿವಾಸದ ಮೇಲೆ ದಾಳಿ ನಡೆಸಿದರು. ದಾಳಿಯ ವೇಳೆ 15ಕ್ಕೂ ಹೆಚ್ಚು ಖಾಲಿ ಸೆರೆಲಾಕ್ ಪ್ಯಾಕೆಟ್‌ಗಳು ಪತ್ತೆಯಾಗಿದ್ದು, ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಇದಕ್ಕೂ ವಾರದ ಹಿಂದೆ ಕೇರಳದ ಮಲಪುರಂನಲ್ಲಿ 1 ಕೆಜಿ ಎಂಡಿಎಂಎ ಸಹಿತ ಧೀರೇಶ ಸಹಚರರು ಸಿಕ್ಕಿಬಿದ್ದಿದ್ದರು. ಆ ವೇಳೆ 8 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ವಿಚಾರಣೆಯಲ್ಲೇ ಕಿಂಗ್‌ಪಿನ್ ಧೀರೇಶ ಕುಟುಮ್ ಕುರಿತು ಮಾಹಿತಿ ಲಭಿಸಿದ್ದು, ಅದರಂತೆ ಇದೀಗ ಆತನನ್ನು ಬಂಧಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ