ವೀಡಿಯೊ…| ಆಸ್ಪತ್ರೆಯಿಂದ ಕತ್ತರಿಸಿದ ಮಾನವನ ಕಾಲು ಕಚ್ಚಿಕೊಂಡು ಓಡಿದ ಬೀದಿ ನಾಯಿ…!

ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ, ಬೀದಿ ನಾಯಿಯೊಂದು ಕತ್ತರಿಸಿದ ಮಾನವನ ಕಾಲನ್ನು ಕಚ್ಚಿಕೊಂಡು ಓಡಿರುವ ಆಘಾತಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಈ ಘಟನೆಯು ಶಿಮ್ಲಾದ ಅಟಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೂಪರ್ ಸ್ಪೆಷಾಲಿಟಿಸ್‌ ಆಸ್ಪತ್ರೆಯ ಹೊರಗಡೆ ನಡೆದಿದೆ. ನಾಯಿಯೊಂದು ಮನುಷ್ಯನ ಕತ್ತರಿಸಿದ ಕಾಲನ್ನು ಬಾಯಿಯಲ್ಲಿ ಕಚ್ಚಿಕೊಂಡು ಓಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತನಿಖೆಗೆ ಆದೇಶಿಸಿದರು.

ವರದಿಗಳ ಪ್ರಕಾರ, ಕಳೆದ ವಾರ 61 ವರ್ಷದ ರೋಗಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಿ ಅವರ ಕಾಲನ್ನು ಕತ್ತರಿಸಲಾಗಿತ್ತು. ಶಸ್ತ್ರಚಿಕಿತ್ಸೆಯ ನಂತರ, ಆ ಕಾಲನ್ನು ವೈದ್ಯಕೀಯ ತ್ಯಾಜ್ಯ ವಿಲೇವಾರಿ ನಿಯಮದಂತೆ ವಿಲೇವಾರಿ ಮಾಡಲು ಆಸ್ಪತ್ರೆಯ ಸ್ಟೋರ್‌ ರೂಮ್‌ನಲ್ಲಿ ಇರಿಸಲಾಗಿತ್ತು.
ಆದರೆ, ಫೆಬ್ರವರಿ 22 ರಂದು ಆಸ್ಪತ್ರೆಯ ಸಿಬ್ಬಂದಿ ಸ್ಟೋರ್‌ರೂಮ್‌ನ ಬಾಗಿಲನ್ನು ಲಾಕ್ ಮಾಡಲು ಮರೆತಿದ್ದರು ಎಂಬುದು ಆಂತರಿಕ ತನಿಖೆಯಿಂದ ತಿಳಿದುಬಂದಿದೆ. ಆ ಸಮಯದಲ್ಲಿ, ನಾಯಿ ಕೋಣೆಗೆ ಪ್ರವೇಶಿಸಿ, ಕತ್ತರಿಸಿದ ಅಂಗವನ್ನು ತೆಗೆದುಕೊಂಡು ಆವರಣದಿಂದ ಓಡಿಹೋಗಿದೆ ಎಂದು ನಂಬಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆ ಆಡಳಿತ ಮಂಡಳಿಯು ಸಂಬಂಧಪಟ್ಟ ಸಿಬ್ಬಂದಿಗೆ ‘ಶೋಕಾಸ್’ (ಕಾರಣ ಕೇಳಿ) ನೋಟಿಸ್ ಜಾರಿ ಮಾಡಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಮತ್ತು ಇಲಾಖಾ ಮಟ್ಟದ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಇನ್ನು ಮುಂದೆ ಬಯೋಮೆಡಿಕಲ್ ತ್ಯಾಜ್ಯ ನಿರ್ವಹಣೆಯಲ್ಲಿ ಇಂತಹ ಲೋಪಗಳು ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯು ಆಸ್ಪತ್ರೆಯ ಸುರಕ್ಷತಾ ಮಾನದಂಡಗಳು ಮತ್ತು ವೈದ್ಯಕೀಯ ತ್ಯಾಜ್ಯ ವಿಲೇವಾರಿ ನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement