ಟಿ20 ವಿಶ್ವಕಪ್‌ : ತಂಡಕ್ಕೆ ಮರಳಿದ್ದ ಮರುದಿನವೇ ರಿಂಕು ಸಿಂಗ್ ತಂದೆ ನಿಧನ

ನವದೆಹಲಿ : ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ರಿಂಕು ಸಿಂಗ್ ಅವರ ತಂದೆ ಖಾಂಚಂದ್ ಸಿಂಗ್ (61) ಅವರು ನಾಲ್ಕನೇ ಹಂತದ ಕ್ಯಾನ್ಸರ್‌ನಿಂದಾಗಿ ಶುಕ್ರವಾರ ಮೃತಪಟ್ಟಿದ್ದಾರೆ. ಗ್ರೇಟರ್ ನೋಯ್ಡಾದ ಯಥಾರ್ಥ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯ ಸ್ಥಿತಿ ಕಳೆದ ಕೆಲವು ದಿನಗಳಿಂದ ಕ್ಷೀಣಿಸಿತ್ತು.
ಪ್ರಸ್ತುತ ಟಿ20 ವಿಶ್ವಕಪ್‌ಗಾಗಿ ತಂಡದೊಂದಿಗೆ ಇರುವ ರಿಂಕು ಸಿಂಗ್, ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮೊದಲು ತಂದೆಯನ್ನು ನೋಡಲು ಆಸ್ಪತ್ರೆಗೆ ತೆರಳಿದ್ದರು. ತಂದೆಯ ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ತಂದೆಯ ಅನಾರೋಗ್ಯದ ನಡುವೆಯೂ ವೃತ್ತಿಧರ್ಮ ಮೆರೆದ ರಿಂಕು, ಪಂದ್ಯದ ಸಮಯಕ್ಕೆ ತಂಡವನ್ನು ಕೂಡಿಕೊಂಡರು. ಆ ಪಂದ್ಯದಲ್ಲಿ ಅವರಿಗೆ ಆಡುವ 11ರ ಬಳಗದಲ್ಲಿ ಸ್ಥಾನ ಸಿಗದಿದ್ದರೂ ಸಬ್‌ಸ್ಟಿಟ್ಯೂಟ್ ಫೀಲ್ಡರ್ ಆಗಿ ಮೈದಾನಕ್ಕಿಳಿದಿದ್ದರು.

ಸಿಲಿಂಡರ್ ವಿತರಿಸುತ್ತಲೇ ಮಗನನ್ನು ಬೆಳೆಸಿದ್ದ ತಂದೆ
ರಿಂಕು ಸಿಂಗ್ ಅವರ ಯಶಸ್ಸಿನ ಹಿಂದೆ ತಂದೆ ಖಾಂಚಂದ್ ಅವರ ದೊಡ್ಡ ಶ್ರಮವಿದೆ. ಅಲಿಗಢದಲ್ಲಿ ಎಲ್‌ಪಿಜಿ ಸಿಲಿಂಡರ್ ವಿತರಿಸುವ (deliveryman) ಕೆಲಸ ಮಾಡುತ್ತಿದ್ದ ಅವರು, ಬಡತನದ ನಡುವೆಯೂ ಮಗನ ಕ್ರಿಕೆಟ್ ಕನಸಿಗೆ ಎಂದಿಗೂ ಅಡ್ಡಿಯಾಗಲಿಲ್ಲ. ರಿಂಕು ಭಾರತ ತಂಡದ ಸ್ಟಾರ್ ಆಟಗಾರನಾಗಿ ಬೆಳೆಯುವಲ್ಲಿ ಅವರ ಬೆಂಬಲ ಅಪಾರವಾಗಿತ್ತು.
ಟೀಮ್ ಇಂಡಿಯಾ ಈಗ ಕೋಲ್ಕತ್ತಾಗೆ ಪ್ರಯಾಣಿಸಲಿದ್ದು, ವೆಸ್ಟ್ ಇಂಡೀಸ್ ವಿರುದ್ಧ ತನ್ನ ಅಂತಿಮ ‘ಸೂಪರ್ 8’ ಪಂದ್ಯವನ್ನು ಮಾರ್ಚ್‌ ೧ರಂದು ಆಡಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ವಿಂಡೀಸ್ ಸೋತಿರುವುದರಿಂದ ಮತ್ತು ಜಿಂಬಾಬ್ವೆ ವಿರುದ್ಧ ಭಾರತ ಗೆದ್ದಿರುವುದರಿಂದ, ಈ ಪಂದ್ಯವು ಸೆಮಿಫೈನಲ್ ಪ್ರವೇಶಿಸಲು ‘ಕ್ವಾರ್ಟರ್ ಫೈನಲ್’ ನಂತೆ ನಿರ್ಣಾಯಕವಾಗಲಿದೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement