
ಕೊಲಂಬೊ : ಶ್ರೀಲಂಕಾದ ಪಲ್ಲೆಕೆಲೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 5 ರನ್ಗಳ ರೋಚಕ ಜಯ ಸಾಧಿಸಿದರೂ ಸಹ, ನಿವ್ವಳ ರನ್ ದರ (Net Run Rate) ಆಧಾರದ ಮೇಲೆ ಟಿ20 ವಿಶ್ವಕಪ್ನಿಂದ ಹೊರಬಿದ್ದಿದೆ. ಹಾಗೂ ಸೂಪರ್ 8ರ ಗುಂಪು 2ರಿಂದ ನ್ಯೂಜಿಲೆಂಡ್ ತಂಡವು ಸೆಮಿ ಫೈನಲ್ ಪ್ರವೇಶಿಸಿದ ಎರಡನೇ ತಂಡವಾಯಿತು. ನೆಟ್ ರನ್ ರೇಟ್ ಆಧಾರದಲ್ಲಿ ನ್ಯೂಜಿಲೆಂಡ್ ತಂಡವು ಸೆಮಿ ಫೈನಲ್ಗೆ ಅರ್ಹತೆ ಪಡೆಯಿತು.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನಕ್ಕೆ ಸಾಹಿಬ್ಜಾದ ಫರ್ಹಾನ್ ಮತ್ತು ಫಖರ್ ಜಮಾನ್ ಸ್ಫೋಟಕ ಆರಂಭ ನೀಡಿದರು. ಇವರಿಬ್ಬರು ಮೊದಲ ವಿಕೆಟ್ಗೆ 176 ರನ್ಗಳ ಬೃಹತ್ ಜೊತೆಯಾಟವಾಡಿದರು, ಇದು ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯಧಿಕ ಆರಂಭಿಕ ಜೊತೆಯಾಟ ಎಂಬ ದಾಖಲೆ ನಿರ್ಮಿಸಿತು. ಸಾಹಿಬ್ಜಾದ ಫರ್ಹಾನ್ 60 ಎಸೆತಗಳಲ್ಲಿ 100 ರನ್ ಗಳಿಸಿ, ಒಂದೇ ವಿಶ್ವಕಪ್ನಲ್ಲಿ ಎರಡು ಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು. ಈ ಮೂಲಕ ಅವರು ವಿರಾಟ್ ಕೊಹ್ಲಿ ಅವರ ಒಂದೇ ವಿಶ್ವಕಪ್ನಲ್ಲಿ ಗಳಿಸಿದ್ದ 319 ರನ್ ಗಳ ದಾಖಲೆಯನ್ನು ಮುರಿದರು.ಫಖರ್ ಜಮಾನ್ 42 ಎಸೆತಗಳಲ್ಲಿ 84 ರನ್ ಸಿಡಿಸಿ ಪಾಕಿಸ್ತಾನ ಬೃಹತ್ ಮೊತ್ತ ಪೇರಿಸಲು ನೆರವಾದರು.

ಅಂತಿಮ ಹಂತದ ಕುಸಿತ:
ಒಂದು ಹಂತದಲ್ಲಿ 230-240 ರನ್ ಗಳಿಸುವ ಸೂಚನೆ ನೀಡಿದ್ದ ಪಾಕಿಸ್ತಾನ, ಕೊನೆಯ 5 ಓವರ್ಗಳಲ್ಲಿ ದಿಢೀರ್ ವಿಕೆಟ್ ಕಳೆದುಕೊಂಡಿತು. 176/0 ಇದ್ದ ಪಾಕಿಸ್ತಾನ ತಂಡವು 212 ರನ್ ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿತು. ಇದು ಪಾಕಿಸ್ತಾನದ ರನ್ ವೇಗಕ್ಕೆ ಕಡಿವಾಣ ಹಾಕಿತು.
ಶ್ರೀಲಂಕಾ ನಾಯಕನ ಕೆಚ್ಚೆದೆಯ ಹೋರಾಟ:
213 ರನ್ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ಪರ ನಾಯಕ ದಸುನ್ ಶಾನಕ ಕೇವಲ 31 ಎಸೆತಗಳಲ್ಲಿ ಅಜೇಯ 76 ರನ್ ಸಿಡಿಸಿ ಪಾಕಿಸ್ತಾನದ ಬೌಲರ್ಗಳನ್ನು ಬೆಚ್ಚಿಬೀಳಿಸಿದರು. ಅದರಲ್ಲೂ ಶಾಹೀನ್ ಅಫ್ರಿದಿ ಎಸೆದ ಅಂತಿಮ ಓವರ್ನಲ್ಲಿ ಸತತ ಮೂರು ಸಿಕ್ಸರ್ ಸಿಡಿಸಿ ಗೆಲುವಿನ ಹತ್ತಿರ ತಂದರೂ ಸಹ 5 ರನ್ ಅಂತರದ ಸೋಲು ಅನುಭವಿಸಬೇಕಾಯಿತು.
ಪಾಕಿಸ್ತಾನದ ನಿರ್ಗಮನಕ್ಕೆ ಕಾರಣವೇನು?
ಪಾಕಿಸ್ತಾನ ಸೆಮಿಫೈನಲ್ಗೆ ಅರ್ಹತೆ ಪಡೆಯಬೇಕಿದ್ದರೆ ಅದು 64 ರನ್ಗಳಿಂದ ಶ್ರೀಲಂಕಾವನ್ನು ಸೋಲಿಸಬೇಕಿತ್ತು. ಅಂದರೆ ಶ್ರೀಲಂಕಾವನ್ನು 147 ರನ್ ಅಥವಾ ಅದಕ್ಕಿಂತ ಕಡಿಮೆ ಮೊತ್ತಕ್ಕೆ ನಿಯಂತ್ರಿಸಬೇಕಿತ್ತು. ಆದರೆ ಶ್ರೀಲಂಕಾ ತಂಡ 148 ರನ್ ದಾಟುತ್ತಿದ್ದಂತೆಯೇ ಪಾಕಿಸ್ತಾನದ ವಿಶ್ವಕಪ್ ಕನಸು ಭಗ್ನಗೊಂಡಿತು.
ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಲಾ 3 ಅಂಕಗಳನ್ನು ಹೊಂದಿದ್ದರೂ, ಉತ್ತಮ ರನ್ ದರ ಹೊಂದಿದ್ದ ನ್ಯೂಜಿಲೆಂಡ್ ಸೆಮಿಫೈನಲ್ಗೆ ಪ್ರವೇಶ ಪಡೆಯಿತು.
ಸಲ್ಮಾನ್ ಆಘಾ ನೇತೃತ್ವದ ಪಾಕಿಸ್ತಾನ ತಂಡಕ್ಕೆ ಇದು ಒಂದು ರೀತಿಯಲ್ಲಿ ‘ಸಿಹಿ-ಕಹಿ’ ಅನುಭವದ ಪಂದ್ಯ. ವೈಯಕ್ತಿಕ ದಾಖಲೆಗಳು ಮತ್ತು ಪಂದ್ಯದ ಗೆಲುವು ಸಿಕ್ಕರೂ, ಟೂರ್ನಿಯಿಂದ ಹೊರಬಿದ್ದಿರುವುದು ಅಭಿಮಾನಿಗಳಿಗೆ ನಿರಾಸೆ ತಂದಿದೆ. ಶ್ರೀಲಂಕಾದ ದಸುನ್ ಶಾನಕ ಅವರ ಸ್ಫೋಟಕ ಬ್ಯಾಟಿಂಗ್ ಪಾಕಿಸ್ತಾನದ ಸೆಮಿಫೈನಲ್ ಹಾದಿಗೆ ತಣ್ಣೀರು ಎರಚಿತು.


ನಿಮ್ಮ ಕಾಮೆಂಟ್ ಬರೆಯಿರಿ