ಕುವೈತ್ : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆ ಕುವೈತ್‌ನಲ್ಲಿ ಪತನಗೊಂಡ ಅಮೆರಿಕದ ಮೂರು F-15E ಸ್ಟ್ರೈಕ್ ಈಗಲ್ (Strike Eagles) ಯುದ್ಧ ವಿಮಾನಗಳನ್ನು ತಪ್ಪಾಗಿ ಗ್ರಹಿಸಿ ಕುವೈತ್‌ನ ವಾಯು ರಕ್ಷಣಾ ವ್ಯವಸ್ಥೆ ಹೊಡೆದು ಉರುಳಿಸಿದೆ ಎಂದು ಸೋಮವಾರ ಅಮೆರಿಕದ ಮಿಲಿಟರಿ ತಿಳಿಸಿದೆ. ಆದಾಗ್ಯೂ, ವಿಮಾನದಲ್ಲಿದ್ದ ಎಲ್ಲಾ ಆರು ಸಿಬ್ಬಂದಿ ಸುರಕ್ಷಿತವಾಗಿ ಹೊರಬಂದಿದ್ದು (Eject), ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.
ತನ್ನ ಹೇಳಿಕೆಯಲ್ಲಿ ಅಮೆರಿಕದ ಸೆಂಟ್ರಲ್ ಕಮಾಂಡ್ (US Central Command), ಈ ‘ಫ್ರೆಂಡ್ಲಿ ಫೈರ್’ (ಸ್ನೇಹಿ ಪಡೆಗಳ ನಡುವಿನ ಗುಂಡಿನ ಚಕಮಕಿ) ಘಟನೆಗೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ ಮತ್ತು ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ.
ಇರಾನ್ ವಿರುದ್ಧದ ‘ಆಪರೇಷನ್ ಎಪಿಕ್ ಫ್ಯೂರಿ’ (Operation Epic Fury) ಸಂದರ್ಭದಲ್ಲಿ ಈ ಘಟನೆಯನ್ನು ಒಪ್ಪಿಕೊಂಡಿದ್ದಕ್ಕಾಗಿ ಮತ್ತು ನೀಡಿದ ಬೆಂಬಲಕ್ಕಾಗಿ ಕುವೈತ್ ಮಿಲಿಟರಿಗೆ ಅಮೆರಿಕ ಧನ್ಯವಾದ ಅರ್ಪಿಸಿದೆ.
“ಇರಾನ್‌ನ ವಿಮಾನಗಳು, ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ದಾಳಿಯನ್ನು ಒಳಗೊಂಡ ಸಕ್ರಿಯ ಯುದ್ಧದ ಸಮಯದಲ್ಲಿ, ಅಮೆರಿಕದ ಏರ್ ಫೋರ್ಸ್‌ನ ಯುದ್ಧ ವಿಮಾನಗಳನ್ನು ಕುವೈತ್ ವಾಯು ರಕ್ಷಣಾ ವ್ಯವಸ್ಥೆಯು ತಪ್ಪಾಗಿ ಹೊಡೆದು ಉರುಳಿಸಿದೆ” ಎಂದು ಹೇಳಿಕೆ ತಿಳಿಸಿದೆ.
“ಎಲ್ಲಾ ಆರು ಏರ್‌ಕ್ರೂ ಸದಸ್ಯರು ಸುರಕ್ಷಿತವಾಗಿ ಹೊರಬಂದಿದ್ದಾರೆ, ಅವರನ್ನು ರಕ್ಷಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಕುವೈತ್ ಈ ಘಟನೆಯನ್ನು ಒಪ್ಪಿಕೊಂಡಿದೆ. ಕುವೈತ್ ರಕ್ಷಣಾ ಪಡೆಗಳ ಪ್ರಯತ್ನಗಳು ಮತ್ತು ಈ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಅವರ ಬೆಂಬಲಕ್ಕಾಗಿ ನಾವು ಕೃತಜ್ಞರಾಗಿದ್ದೇವೆ” ಎಂದು ಅದು ಹೇಳಿದೆ.
ಪತನಗೊಂಡ F-15 ವಿಮಾನಗಳ ವಿಡಿಯೋ ವೈರಲ್
ಕುವೈತ್‌ನಲ್ಲಿ F-15 ಯುದ್ಧ ವಿಮಾನಗಳು ಪತನಗೊಂಡಿರುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವೈರಲ್ ಆದ ಒಂದು ವಿಡಿಯೋದಲ್ಲಿ, ವಿಮಾನ ಪತನಗೊಳ್ಳುವ ಕೆಲವೇ ಕ್ಷಣಗಳ ಮೊದಲು ಪೈಲಟ್ ವಿಮಾನದಿಂದ ಸುರಕ್ಷಿತವಾಗಿ ಹೊರಬರುವುದನ್ನು ಕಾಣಬಹುದು. ಮತ್ತೊಂದು ವಿಡಿಯೋದಲ್ಲಿ, ವಿಮಾನ ಪತನದ ನಂತರ ಪೈಲಟ್ ಅನ್ನು ಸ್ಥಳೀಯರು ಮತ್ತು ಕುವೈತ್ ಅಧಿಕಾರಿಗಳು ರಕ್ಷಿಸುತ್ತಿರುವುದು ಕಂಡುಬಂದಿದೆ.
F-15 ವಿಮಾನಗಳ ಬಗ್ಗೆ…
F-15 ಸ್ಟ್ರೈಕ್ ಈಗಲ್ 4.5 ತಲೆಮಾರಿನ (4.5 generation) ಯುದ್ಧ ವಿಮಾನವಾಗಿದ್ದು, ಇದನ್ನು ವಾಯು ಶ್ರೇಷ್ಠತೆ ಮತ್ತು ದಾಳಿ ಕಾರ್ಯಾಚರಣೆಗಳಿಗಾಗಿ ಬಳಸಲಾಗುತ್ತದೆ. ಸದ್ಯಕ್ಕೆ, ಅಮೆರಿಕವು ಸುಮಾರು 334ರಷ್ಟು F-15 ಯುದ್ಧ ವಿಮಾನಗಳನ್ನು ಹೊಂದಿದ್ದು, ಅವುಗಳನ್ನು ವಿಶ್ವದಾದ್ಯಂತ ಇರುವ ತನ್ನ ನೆಲೆಗಳಲ್ಲಿ ನಿಯೋಜಿಸಿದೆ.
ವಿಮಾನಗಳ ವಿವರ:
F-15C ಈಗಲ್: 108 ವಿಮಾನಗಳು (ಏರ್ ನ್ಯಾಷನಲ್ ಗಾರ್ಡ್)
F-15D ಈಗಲ್: 8 ವಿಮಾನಗಳು
F-15E ಸ್ಟ್ರೈಕ್ ಈಗಲ್: 218 ವಿಮಾನಗಳು (ಸಕ್ರಿಯ ಸೇವೆ)
F-15EX ಈಗಲ್ II: ಸದ್ಯ 8 ವಿಮಾನಗಳು ಸೇವೆಯಲ್ಲಿವೆ (ಇನ್ನೂ ಹೆಚ್ಚಿನವುಗಳಿಗೆ ಆದೇಶ ನೀಡಲಾಗಿದೆ)
ಒಟ್ಟು: 334 (ಸಕ್ರಿಯ ಸೇವೆಯಲ್ಲಿರುವ F-15 ವಿಮಾನಗಳು)
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ
ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಸಾವಿಗೀಡಾದ ನಂತರ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿರುವ ವೇಳೆ ಈ F-15 ವಿಮಾನಗಳ ಪತನ ಸಂಭವಿಸಿದೆ. ಖಮೇನಿ ಸಾವಿಗೆ ಸೇಡು ತೀರಿಸಿಕೊಳ್ಳುವುದಾಗಿ ಪಣತೊಟ್ಟಿರುವ ಇರಾನ್, ಈಗ ಈ ಪ್ರದೇಶದಾದ್ಯಂತ ಇರುವ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ. ಹಾಗೂ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸದಂತೆ ಅಮೆರಿಕ ಮತ್ತು ಇಸ್ರೇಲ್ ಇರಾನ್‌ಗೆ ಎಚ್ಚರಿಕೆ ನೀಡಿವೆ.


ನಿಮ್ಮ ಕಾಮೆಂಟ್ ಬರೆಯಿರಿ