ಕಾರವಾರ : ಸಚಿವ-ಶಾಸಕರ ನಡುವೆ ವಾಗ್ವಾದ ; ಕೆಡಿಪಿ ಸಭೆಯಿಂದ ಹೊರನಡೆದ ಸತೀಶ ಸೈಲ್

ಕಾರವಾರ: ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಸಭೆಯಲ್ಲಿ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮತ್ತು ಕಾಂಗ್ರೆಸ್‌ ಶಾಸಕ ಸತೀಶ ಸೈಲ್ ನಡುವೆ ನಡೆದ ವಾಗ್ವಾದ ನಡೆದು, ಸೈಲ್ ಸಭೆಯ ಮಧ್ಯದಲ್ಲೇ ಹೊರನಡೆದ ಘಟನೆ ನಡೆದಿದೆ. ಇಬ್ಬರೂ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು ಎಂಬುದು ಗಮನಿಸಬೇಕಾದ ಸಂಗತಿ.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲೆಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆಯಂತಹ ಗಂಭೀರ ಆರೋಗ್ಯ ಸಮಸ್ಯೆಗಳ ಕುರಿತು ಚರ್ಚೆ ನಡೆದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಹಾಗೂ ಅಧಿಕಾರಿಗಳು ನೀಡುತ್ತಿರುವ ತಪ್ಪು ಮಾಹಿತಿಗೆ ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್ ಅಸಮಾಧಾನ ವ್ಯಕ್ತಪಡಿಸಿದರು. ಆರೋಗ್ಯ ಇಲಾಖೆಯ ಅಧಿಕಾರಿಗಳು, ಜಿಲ್ಲೆಯ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆಯಿಲ್ಲ, ಪೂರ್ಣ ಪ್ರಮಾಣದ ದಾಸ್ತಾನು ಇದೆ ಎಂದು ವರದಿ ನೀಡಿದರು.

ಈ ಮಾತಿನಿಂದ ಅಸಮಾಧಾನಗೊಂಡ ಆಡಳಿತ ಪಕ್ಷದ ಶಾಸಕರೇ ಆದ ಸೈಲ್, ಕಾರವಾರ ತಾಲೂಕಿನ ಹಳಗಾದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇಲ್ಲ. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲದಿರುವಾಗ, ಆ ಔಷಧಿಗಳನ್ನು ರೋಗಿಗಳಿಗೆ ಯಾರು ಕೊಡುತ್ತಾರೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಮಂಕಾಳ ವೈದ್ಯ, ವೈದ್ಯರ ಕೊರತೆ ಇದ್ದರೆ ನೀವೇ ಕರೆತರಬೇಕು ಎಂದರಲ್ಲದೆ,, ತಾಲೂಕು ಮಟ್ಟದ ವಿಚಾರಗಳನ್ನು ಇಲ್ಲಿ ಚರ್ಚಿಸಬೇಡಿ ಎಂದು ಸೂಚಿಸಿದರು. ಸಚಿವರ ಈ ಮಾತಿನಿಂದ ಮತ್ತಷ್ಟು ಕೆರಳಿದ ಶಾಸಕ ಸೈಲ್, ಅಧಿಕಾರಿಗಳು ಹೇಳಿದ್ದನ್ನೆಲ್ಲ ತಲೆ ಅಲ್ಲಾಡಿಸಿಕೊಂಡು ಕೇಳಲು ನಾವೇನು ಅಂಗೂಟಾ ಛಾಪ್ (ಹೆಬ್ಬೆಟ್ಟು ಗಿರಾಕಿ) ಅಲ್ಲ. ಜನರ ಸಮಸ್ಯೆಗಳಿಗೆ ನಾವು ಉತ್ತರ ಕೊಡಬೇಕಾಗುತ್ತದೆ ಎಂದು ಸಚಿವರಿಗೆ ತಿರುಗೇಟು ನೀಡಿದರು. ಈ ರೀತಿ ಸಭೆಯಲ್ಲಿ ನಾನು ಕೂರುವುದಿಲ್ಲ ಎಂದು ಹೇಳಿ ಸಭೆಯಿಂದ ಎದ್ದು ಹೊರನಡೆದರು. ಸೈಲ್ ಹೊರನಡೆದಾಗ, ಸಚಿವ ವೈದ್ಯ ಅವರನ್ನು ಹೊರಹೋಗದಂತೆ ತಡೆಯುವ ಯಾವುದೇ ಪ್ರಯತ್ನ ಮಾಡಲಿಲ್ಲ.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸತೀಶ್ ಸೈಲ್, ಹಳಗಾ, ಕೈಗಾ ಹಾಗೂ ಮಲ್ಲಾಪುರ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೇ ಇಲ್ಲ. ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ಕೋಟ್ಯಂತರ ಮೌಲ್ಯದ ಎಂಆರ್‌ಐ ಯಂತ್ರವಿದ್ದರೂ ಅದನ್ನು ನಿರ್ವಹಿಸಲು ಟೆಕ್ನಿಷಿಯನ್ ಇಲ್ಲ. ಸಭೆಯ ನಿರ್ಣಯಗಳ ಬಗ್ಗೆ ಫಾಲೋ-ಅಪ್ ಮಾಡುವ ಕೆಲಸ ಜಿಲ್ಲಾಡಳಿತದಿಂದ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲು ಸಾಧ್ಯವಾಗದಿದ್ದಲ್ಲಿ ನಾವು ಅಧಿಕಾರದಲ್ಲಿದ್ದು ಏನು ಪ್ರಯೋಜನ ಎಂದು ಪ್ರಶ್ನಿಸಿದ ಶಾಸಕ ಸೈಲ್, ಹೆಚ್ಚು ಹೇಳಿದರೆ ನಮ್ಮದೇ ಸರ್ಕಾರದ ವಿರುದ್ಧ ಮಾತನಾಡಿದಂತಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಭೆಯಲ್ಲಿ ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಲೀಶ್ ಶಶಿ ಮತ್ತು ಇತರ ಹಲವಾರು ಹಿರಿಯ ಅಧಿಕಾರಿಗಳು ಇದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement