ಇರಾನಿನ ನೂತನ ಸರ್ವೋಚ್ಚ ನಾಯಕನಾಗಿ ಅಯತೊಲ್ಲಾ ಅಲಿ ಖಮೇನಿ ಪುತ್ರ ಮೊಜ್ತಬಾ ನೇಮಕ : ವರದಿ

ತೆಹ್ರಾನ್: ಇಸ್ರೇಲ್ ಮತ್ತು ಅಮೆರಿಕಾದ ಜಂಟಿ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತರಾದ ಬೆನ್ನಲ್ಲೇ, ಅವರ ಪುತ್ರ ಮೊಜ್ತಬಾ ಹೊಸೈನಿ ಖಮೇನಿ ಅವರು ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ.
ದಶಕಗಳ ಕಾಲ ತೆರೆಯ ಮರೆಯಲ್ಲಿದ್ದುಕೊಂಡು ದೇಶದ ರಾಜಕೀಯ ಗತಿವಿಧಿಗಳನ್ನು ನಿಯಂತ್ರಿಸುತ್ತಿದ್ದ ಮೊಜ್ತಬಾ ಅವರನ್ನು ಈಗ ಇರಾನ್‌ನ ಸರ್ವೋಚ್ಚ ನಾಯಕರಾಗಿ ಆಯ್ಕೆ ಮಾಡಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇರಾನ್ ಇಂಟರ್ನ್ಯಾಷನಲ್ ವರದಿ ಮಾಡಿದೆ.
ಇರಾನ್‌ನ ತಜ್ಞರ ಮಂಡಳಿ(Assembly of Experts) ಅವರನ್ನು ಖಮೇನಿಯವರ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದೆ ಎಂದು ವರದಿ ತಿಳಿಸಿವೆ. ಇದು ದೃಢಪಟ್ಟರೆ, ಇಸ್ಲಾಮಿಕ್ ಗಣರಾಜ್ಯದ 47 ವರ್ಷಗಳ ಇತಿಹಾಸದಲ್ಲಿ ತಜ್ಞರ ಮಂಡಳಿಯು ಸರ್ವೋಚ್ಚ ನಾಯಕನನ್ನು ನೇಮಿಸಿದ ಎರಡನೇ ನಿದರ್ಶನ ಇದಾಗಲಿದೆ.

36 ವರ್ಷಗಳ ಕಾಲ ದೇಶವನ್ನು ಆಳಿದ ಅಯತೊಲ್ಲಾ ಅಲಿ ಖಮೇನಿ, ಫೆಬ್ರವರಿ 28 ರಂದು ತಮ್ಮ ಕಚೇರಿಯ ಆವರಣದಲ್ಲಿದ್ದಾಗ ಅಮೆರಿಕ-ಇಸ್ರೇಲಿ ಜಂಟಿ ದಾಳಿಯಲ್ಲಿ ಕೊಲ್ಲಲ್ಪಟ್ಟರು. ಅವರೊಂದಿಗೆ, ಅವರ ಮಗಳು, ಅಳಿಯ ಮತ್ತು ಮೊಮ್ಮಗಳು ಕೊಲ್ಲಲ್ಪಟ್ಟರು. ಖಮೇನಿಯವರ ಪತ್ನಿ ಮನ್ಸೌರೆ ಖೋಜಸ್ತೆ ಬಗರ್ಜಾದೆ ಕೂಡ ದಾಳಿಯ ಸಮಯದಲ್ಲಿ ಉಂಟಾದ ಗಾಯಗಳಿಂದ ನಂತರ ಮೃತಪಟ್ಟಿದ್ದಾರೆ.
1969ರಲ್ಲಿ ಇರಾನ್‌ನ ಮಶಾದ್ ನಗರದಲ್ಲಿ ಜನಿಸಿದ ಮೊಜ್ತಬಾ, ಇರಾನ್‌ನ ಕೊನೆಯ ಶಾ ಮೊಹಮ್ಮದ್ ರೆಜಾ ಪಹ್ಲವಿ ಆಡಳಿತದ ವಿರುದ್ಧ ತಮ್ಮ ತಂದೆ ಪ್ರಮುಖ ಧರ್ಮಗುರುವಾಗಿ ಹೋರಾಟ ನಡೆಸುತ್ತಿದ್ದ ಕಾಲದಲ್ಲೇ ಬೆಳೆದವರು. 1979ರ ಇಸ್ಲಾಮಿಕ್ ಕ್ರಾಂತಿಯು ದೇಶದ ಸ್ವರೂಪವನ್ನೇ ಬದಲಿಸಿತು ಮತ್ತು ಖಮೇನಿ ಕುಟುಂಬವನ್ನು ಈ ಹೊಸ ವ್ಯವಸ್ಥೆಯ ಕೇಂದ್ರಬಿಂದುವನ್ನಾಗಿ ಮಾಡಿತು. ಮೊಜ್ತಬಾ ಅವರು ಇರಾನ್‌ನ ಅತ್ಯಂತ ಪ್ರಮುಖ ಶಿಯಾ ಧಾರ್ಮಿಕ ಕೇಂದ್ರವಾದ ‘ಕೋಮ್’ನ (Qom) ಸೆಮಿನರಿಗಳಲ್ಲಿ ಧಾರ್ಮಿಕ ಶಿಕ್ಷಣವನ್ನು ಪೂರೈಸಿದರು. ಪ್ರಸ್ತುತ ಅವರು ‘ಹೊಜ್ತತುಲೆಸ್ಲಾಮ್’ ಎಂಬ ಧಾರ್ಮಿಕ ಪದವಿಯನ್ನು ಹೊಂದಿದ್ದು, ಅತ್ಯುನ್ನತ ಮಟ್ಟದ ‘ಅಯತೊಲ್ಲಾ’ ಎಂಬ ಬಿರುದು ಹೊಂದಿಲ್ಲದಿದ್ದರೂ, ಸರ್ವೋಚ್ಚ ನಾಯಕನ ಕಚೇರಿಯಲ್ಲಿ ನಿರಂತರವಾಗಿ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಂಡಿದ್ದಾರೆ.
ಸೇನಾ ಬಲ ಮತ್ತು ರಾಜಕೀಯ ಪ್ರಭಾವ
ತಾವು ಯುವಕರಾಗಿದ್ದಾಗ ಮೊಜ್ತಬಾ ಅವರು ಇರಾನ್-ಇರಾಕ್ ಯುದ್ಧದ ಸಮಯದಲ್ಲಿ ಸೇವೆ ಸಲ್ಲಿಸಿದ್ದರು. ಈ ಅನುಭವವು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಸೇರಿದಂತೆ ಇರಾನ್‌ನ ಪ್ರಬಲ ಭದ್ರತಾ ಪಡೆಗಳೊಂದಿಗೆ ಅವರಿಗೆ ನಿಕಟ ಸಂಬಂಧವನ್ನು ಕಲ್ಪಿಸಿಕೊಟ್ಟಿತು. ವಿಶ್ಲೇಷಕರ ಪ್ರಕಾರ, ಮೊಜ್ತಬಾ ಅವರು ಸಂಪ್ರದಾಯವಾದಿ ಬಣಗಳು ಮತ್ತು ಗಾರ್ಡ್‌ಗಳ ಪರಮಾಪ್ತ ಒಕ್ಕೂಟದ ಭಾಗವಾಗಿದ್ದಾರೆ. ಸಾರ್ವಜನಿಕವಾಗಿ ಭಾಷಣ ಅಥವಾ ಅಧಿಕೃತ ಹುದ್ದೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದಿದ್ದರೂ, ತೆರೆಯ ಹಿಂದಿನಿಂದಲೇ ರಾಜಕೀಯ ನೇಮಕಾತಿಗಳು, ಚುನಾವಣಾ ತಂತ್ರಗಳು ಮತ್ತು ದೇಶದ ಕಾರ್ಯತಂತ್ರದ ನಿರ್ಧಾರಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದರು ಎಂದು ನಂಬಲಾಗಿದೆ.
ಆಯ್ಕೆಯ ಪ್ರಕ್ರಿಯೆ ಮತ್ತು ಸಾಂವಿಧಾನಿಕ ಸವಾಲು
ಇರಾನ್ ಸಂವಿಧಾನದ ಪ್ರಕಾರ, ಸರ್ವೋಚ್ಚ ನಾಯಕನನ್ನು ‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್’ (ತಜ್ಞರ ಮಂಡಳಿ) ಎಂಬ ಧಾರ್ಮಿಕ ಮಂಡಳಿಯು ಆಯ್ಕೆ ಮಾಡುತ್ತದೆ. ವರದಿಗಳ ಪ್ರಕಾರ, ಅಲಿ ಖಮೇನಿ ಅವರ ನಿಧನದ ಬೆನ್ನಲ್ಲೇ ಸಭೆ ಸೇರಿದ ಈ ಮಂಡಳಿಯು ಮೊಜ್ತಬಾ ಅವರ ಹೆಸರನ್ನು ಅನುಮೋದಿಸಿದೆ. ಆದರೆ, ಈ ಆಯ್ಕೆಯು ತೀವ್ರ ವಿವಾದಕ್ಕೆ ಕಾರಣವಾಗಿದೆ. ರಾಜಪ್ರಭುತ್ವದ ವಿರುದ್ಧದ ಹೋರಾಟದಿಂದ ಅಸ್ತಿತ್ವಕ್ಕೆ ಬಂದ ಗಣರಾಜ್ಯದಲ್ಲಿ, ತಂದೆಯ ನಂತರ ಮಗನೇ ಅಧಿಕಾರಕ್ಕೆ ಬರುವುದು ವಂಶಾಡಳಿತದ ಸಂಪ್ರದಾಯಕ್ಕೆ ನಾಂದಿ ಹಾಡಬಹುದು ಎಂಬುದು ಟೀಕಾಕಾರರ ವಾದವಾಗಿದೆ. ಇದರೊಂದಿಗೆ, ಅವರ ಧಾರ್ಮಿಕ ಅರ್ಹತೆಗಳು ಇರಾನ್‌ನ ಅತ್ಯುನ್ನತ ಧಾರ್ಮಿಕ ಸ್ಥಾನಕ್ಕೆ ಸರಿಹೊಂದುವುದಿಲ್ಲ ಎಂಬ ಪ್ರಶ್ನೆಗಳೂ ಎದ್ದಿವೆ.
ವೈಯಕ್ತಿಕ ಜೀವನ ಮತ್ತು ಭವಿಷ್ಯದ ಹಾದಿ
ವೈಯಕ್ತಿಕವಾಗಿ ಮೊಜ್ತಬಾ ಅವರು ಪ್ರಮುಖ ಸಂಪ್ರದಾಯವಾದಿ ರಾಜಕಾರಣಿಯ ಮಗಳಾದ ಜಹ್ರಾ ಹದ್ದಾದ್-ಅಡೆಲ್ ಅವರನ್ನು ವಿವಾಹವಾಗಿದ್ದು, ಈ ಮೂಲಕ ಇರಾನ್‌ನ ಪ್ರಭಾವಿ ಗಣ್ಯರೊಂದಿಗೆ ತಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದಾರೆ. ಸದ್ಯಕ್ಕೆ ಅವರು ತಮ್ಮ ವೈಯಕ್ತಿಕ ಜೀವನವನ್ನು ಸಾರ್ವಜನಿಕ ಚರ್ಚೆಯಿಂದ ದೂರವೇ ಇಟ್ಟಿದ್ದಾರೆ.
ಇರಾನ್‌ನ ಕ್ರಾಂತಿಯ ನಂತರದ ಇತಿಹಾಸದಲ್ಲಿ ಇದೊಂದು ಅತ್ಯಂತ ನಿರ್ಣಾಯಕ ತಿರುವು. ಮೊಜ್ತಬಾ ಅವರು ತಮ್ಮ ತಂದೆಯ ಕಟ್ಟುನಿಟ್ಟಾದ ಪರಂಪರೆಯನ್ನು ಮುಂದುವರಿಸುತ್ತಾರೆಯೇ ಅಥವಾ ಹೊಸ ಹಾದಿಯನ್ನು ತುಳಿಯುತ್ತಾರೆಯೇ ಎಂಬುದು ಮುಂಬರುವ ದಿನಗಳಲ್ಲಿ ಇಸ್ಲಾಮಿಕ್ ಗಣರಾಜ್ಯದ ಭವಿಷ್ಯವನ್ನು ನಿರ್ಧರಿಸಲಿದೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement