ಬಿಹಾರ ರಾಜಕೀಯದಲ್ಲಿ ಮಹತ್ವದ ಬದಲಾವಣೆ : ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ ಸಿಎಂ ನಿತೀಶಕುಮಾರ…!

ಪಾಟ್ನಾ: ಬಿಹಾರದಲ್ಲಿ ಸುದೀರ್ಘ ಕಾಲ ಮುಖ್ಯಮಂತ್ರಿಯಾಗಿರುವ ಜೆಡಿಯು (JD-U) ಅಧ್ಯಕ್ಷ ನಿತೀಶಕುಮಾರ ಅವರು ಗುರುವಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸುಮಾರು ಎರಡು ದಶಕಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನಂತರ, ಅವರು ಇಂದು, ಗುರುವಾರ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಆ ಮೂಲಕ ಸಕ್ರಿಯ ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದ್ದಾರೆ.
ಅವರು ರಾಜ್ಯಸಭೆಗೆ ನಾಮಪತ್ರ ಸಲ್ಲಿಸುವ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ ಸಿನ್ಹಾ ಇದ್ದರು.
ನಾಮಪತ್ರ ಸಲ್ಲಿಕೆಯ ನಂತರ ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿರುವ ನಿತೀಶಕುಮಾರ, ತಮ್ಮ ಸುದೀರ್ಘ ರಾಜಕೀಯ ಜೀವನದ ಆಸೆಯೊಂದನ್ನು ಬಿಚ್ಚಿಟ್ಟಿದ್ದಾರೆ. “ನನ್ನ ಸಂಸದೀಯ ಪ್ರಯಾಣದ ಆರಂಭದಿಂದಲೂ ಲೋಕಸಭೆ, ವಿಧಾನಸಭೆ, ವಿಧಾನಪರಿಷತ್ ಮತ್ತು ರಾಜ್ಯಸಭೆ – ಈ ನಾಲ್ಕೂ ಸದನಗಳ ಸದಸ್ಯನಾಗಿ ಸೇವೆ ಸಲ್ಲಿಸಬೇಕೆಂಬ ಹಂಬಲವಿತ್ತು. ರಾಜ್ಯಸಭಾ ಸದಸ್ಯನಾಗುವ ಮೂಲಕ ಈ ಕನಸು ನನಸಾಗುತ್ತಿದೆ,” ಎಂದು ತಿಳಿಸಿದ್ದಾರೆ.

ಬಿಹಾರದ ಜನತೆಗೆ ಧನ್ಯವಾದ
2005ರಿಂದ ದಾಖಲೆಯ 10 ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ನಿತೀಶಕುಮಾರ, ಬಿಹಾರದ ಅಭಿವೃದ್ಧಿಗೆ ಸಹಕರಿಸಿದ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. “ಎರಡು ದಶಕಗಳ ಕಾಲ ನೀವು ನನ್ನ ಮೇಲೆ ಇಟ್ಟ ನಂಬಿಕೆಯಿಂದಲೇ ಬಿಹಾರ ಇಂದು ಅಭಿವೃದ್ಧಿಯ ಹೊಸ ಆಯಾಮ ತಲುಪಲು ಸಾಧ್ಯವಾಗಿದೆ. ಅಧಿಕಾರದಲ್ಲಿ ಇಲ್ಲದಿದ್ದರೂ ಬಿಹಾರದ ಜನರೊಂದಿಗಿನ ನನ್ನ ಸಂಬಂಧ ಮುಂದುವರಿಯುತ್ತದೆ,” ಎಂದು ಅವರು ಭಾವುಕರಾಗಿ ನುಡಿದಿದ್ದಾರೆ.
ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿರುವ ಹೊಸ ಸರ್ಕಾರಕ್ಕೆ ತಮ್ಮ ಪೂರ್ಣ ಸಹಕಾರ ಮತ್ತು ಮಾರ್ಗದರ್ಶನ ಇರಲಿದೆ ಎಂದು ನಿತೀಶ್ ಭರವಸೆ ನೀಡಿದ್ದಾರೆ.

ಬಿಜೆಪಿಗೆ ಮುಖ್ಯಮಂತ್ರಿ ಪಟ್ಟ?:
ಕಳೆದ ನವೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಜಯ ಸಾಧಿಸಿತ್ತು. ನಿತೀಶಕುಮಾರ ಅವರು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿದ ನಂತರ, ಬಿಹಾರದ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿ ನಾಯಕರೊಬ್ಬರು ಮುಖ್ಯಮಂತ್ರಿ ಪಟ್ಟ ಅಲಂಕರಿಸುವ ಸಾಧ್ಯತೆ ದಟ್ಟವಾಗಿದೆ.
ರಾಜ್ಯದ ಐದು ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ 16 ರಂದು ಚುನಾವಣೆ ನಡೆಯಲಿದ್ದು, ಸಂಖ್ಯಾಬಲದ ಆಧಾರದ ಮೇಲೆ ನಿತೀಶಕುಮಾರ ಅವರ ಆಯ್ಕೆ ಬಹುತೇಕ ಖಚಿತವಾಗಿದೆ.
ಬೆಂಬಲಿಗರ ಪ್ರತಿಭಟನೆ: ನಿತೀಶಕುಮಾರ ಅವರ ಈ ದಿಢೀರ್ ನಿರ್ಧಾರದಿಂದ ಅಸಮಾಧಾನಗೊಂಡಿರುವ ನೂರಾರು ಜೆಡಿಯು ಕಾರ್ಯಕರ್ತರು ಗುರುವಾರ ಬೆಳಿಗ್ಗೆಯಿಂದಲೇ ಮುಖ್ಯಮಂತ್ರಿಗಳ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದು, ನಿರ್ಧಾರವನ್ನು ಹಿಂಪಡೆಯುವಂತೆ ಒತ್ತಾಯಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement