ತೈಲ ಬಿಕ್ಕಟ್ಟು: ಪಾಕಿಸ್ತಾನದಲ್ಲಿ ಶಾಲೆಗಳಿಗೆ ರಜೆ ಘೋಷಣೆ ; ಸರ್ಕಾರಿ ಕಚೇರಿಗಳು ವಾರಕ್ಕೆ 4 ದಿನ ಮಾತ್ರ ಓಪನ್…!

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂಧನ ಉಳಿತಾಯಕ್ಕಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಮುಂದಿನ ವಾರದಿಂದ ಅನ್ವಯವಾಗುವಂತೆ ಎಲ್ಲಾ ಶಾಲೆಗಳಿಗೆ ಎರಡು ವಾರಗಳ ಕಾಲ ರಜೆ ಘೋಷಿಸಲಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳು ತಕ್ಷಣದಿಂದಲೇ ಆನ್‌ಲೈನ್ ತರಗತಿಗಳಿಗೆ ಬದಲಾಗಲಿವೆ. ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದು ಹಾಗೂ ಇಂಧನ ವೆಚ್ಚ ಹೆಚ್ಚುತ್ತಿರುವುದು ಈ ನಿರ್ಧಾರಕ್ಕೆ ಕಾರಣವಾಗಿದೆ.
ಸರ್ಕಾರಿ ಕಚೇರಿಗಳು ವಾರಕ್ಕೆ 4 ದಿನ ಮಾತ್ರ ಕೆಲಸ
ಉಳಿತಾಯ ಕ್ರಮಗಳ ಭಾಗವಾಗಿ ಸರ್ಕಾರಿ ಕಚೇರಿಗಳಿಗೆ ವಾರಕ್ಕೆ ನಾಲ್ಕು ದಿನಗಳ ಕೆಲಸದ ಅವಧಿಯನ್ನು ಜಾರಿಗೆ ತರಲಾಗುತ್ತಿದೆ. ಸಂಚಾರ ವೆಚ್ಚ ಮತ್ತು ಇಂಧನ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಶೇ. 50ರಷ್ಟು ಸರ್ಕಾರಿ ನೌಕರರು ಮನೆಯಿಂದಲೇ ಕೆಲಸ (Work from home) ಮಾಡಲಿದ್ದಾರೆ.

ಪ್ರಧಾನಿ ಷರೀಫ್ ಅವರು ಇತರ ಕೆಲವು ಕಠಿಣ ಕ್ರಮಗಳನ್ನು ಘೋಷಿಸಿದ್ದಾರೆ. ಸರ್ಕಾರಿ ಇಲಾಖೆಗಳ ತೈಲ ಭತ್ಯೆಯನ್ನು ಮುಂದಿನ ಎರಡು ತಿಂಗಳವರೆಗೆ ಶೇ. 50ರಷ್ಟು ಕಡಿತಗೊಳಿಸಲಾಗಿದೆ. 3 ಲಕ್ಷ ರೂ.ಗಿಂತ ಹೆಚ್ಚು ಸಂಬಳ ಪಡೆಯುವ ಗ್ರೇಡ್-20 ಮತ್ತು ಅದಕ್ಕಿಂತ ಮೇಲ್ಪಟ್ಟ ಅಧಿಕಾರಿಗಳ ಎರಡು ದಿನಗಳ ಸಂಬಳವನ್ನು ಕಡಿತಗೊಳಿಸಲಾಗುತ್ತದೆ.
“ಮುಂದಿನ ದಿನಗಳಲ್ಲಿ ತೈಲ ಬೆಲೆಗಳು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಸಾಮಾನ್ಯ ಜನರ ಮೇಲೆ ಇದರ ಹೊರೆ ಬೀಳದಂತೆ ತಡೆಯಲು ಹಗಲು ರಾತ್ರಿ ಸಮಾಲೋಚನೆ ನಡೆಸುತ್ತಿದ್ದೇವೆ,” ಎಂದು ಷರೀಫ್ ತಿಳಿಸಿದ್ದಾರೆ.
ಗರಿಷ್ಠ ಮಟ್ಟಕ್ಕೆ ತೈಲ ಬೆಲೆ
ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಜಾಗತಿಕ ತೈಲ ಬೆಲೆಯು ಕಳೆದ ಮೂರೂವರೆ ವರ್ಷಗಳಲ್ಲಿ ಮೊದಲ ಬಾರಿಗೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಗಡಿಯನ್ನು ದಾಟಿದೆ. ಬ್ರೆಂಟ್ ಕ್ರೂಡ್ ಶೇ. 16.5 ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 107.97 ಡಾಲರ್‌ ತಲುಪಿದೆ.
ಡಬ್ಲ್ಯುಟಿಐ (ಅಮೆರಿಕ ಬೆಂಚ್‌ಮಾರ್ಕ್): ಶೇ. 16.9 ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 106.22 ಡಾಲರ್‌ ತಲುಪಿದೆ.
ವಿಶ್ವದ ಒಟ್ಟು ತೈಲ ಪೂರೈಕೆಯ ಶೇ. 20ರಷ್ಟು ಭಾಗ ಸಾಗುವ ‘ಹಾರ್ಮುಜ್ ಜಲಸಂಧಿ’ ಮಾರ್ಗದಲ್ಲಿ ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಭೀತಿ ಇರುವುದರಿಂದ ತೈಲ ರಫ್ತು ಕುಂಠಿತಗೊಂಡಿದೆ.
ರಫ್ತು ಮಾಡಲು ಸೀಮಿತ ಅವಕಾಶಗಳಿರುವುದರಿಂದ ಇರಾಕ್, ಕುವೈತ್ ಮತ್ತು ಯುಎಇ ದೇಶಗಳು ಈಗಾಗಲೇ ತೈಲ ಉತ್ಪಾದನೆಯನ್ನು ಕಡಿಮೆ ಮಾಡಿವೆ. ಮತ್ತೊಂದೆಡೆ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ದಾಳಿ-ಪ್ರತಿದಾಳಿಗಳಿಂದಾಗಿ ತೈಲ ಸಂಸ್ಕರಣಾ ಘಟಕಗಳಿಗೆ ಹಾನಿಯಾಗಿದ್ದು, ಪೂರೈಕೆಯಲ್ಲಿ ತೀವ್ರ ಅಭಾವ ಸೃಷ್ಟಿಯಾಗಿದೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದಲ್ಲಿ 100 ವರ್ಷಗಳಿಗೂ ಹಳೆಯ ಹಿಂದೂ ದೇವಾಲಯ ಧ್ವಂಸ : ವರದಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement