ಇರಾನ್ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿಗೆ ಗಂಭೀರ ಗಾಯ ; ಅಮೆರಿಕ ರಕ್ಷಣಾ ಸಚಿವ

ವಾಷಿಂಗ್ಟನ್: ಇರಾನ್‌ನ ನೂತನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಅವರು ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ವಿರೂಪಗೊಂಡಿರುವ ಸಾಧ್ಯತೆಯಿದೆ ಎಂದು ಅಮೆರಿಕದ ರಕ್ಷಣಾ ಸಚಿವ (Secretary of War) ಪೀಟ್ ಹೆಗ್ಸೆತ್ ಶುಕ್ರವಾರ ತಿಳಿಸಿದ್ದಾರೆ.
ಇರಾನ್ ಮತ್ತು ಅಮೆರಿಕದ ಜಂಟಿ ವೈಮಾನಿಕ ದಾಳಿಯಲ್ಲಿ ತಮ್ಮ ತಂದೆ ಅಲಿ ಖಮೇನಿ ನಿಧನದ ನಂತರ ಮೊಜ್ತಬಾ ಅಧಿಕಾರ ವಹಿಸಿಕೊಂಡಿದ್ದರು. ಅಧಿಕಾರ ಸ್ವೀಕರಿಸಿದ ನಂತರ ಅವರು ಮೊದಲ ಹೇಳಿಕೆ ಬಿಡುಗಡೆ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹೆಗ್ಸೆತ್, “ಇರಾನ್‌ನ ಈ ನೂತನ ‘ಸೋ-ಕಾಲ್ಡ್’ ನಾಯಕ ಗಾಯಗೊಂಡಿದ್ದಾರೆ ಎಂಬ ಮಾಹಿತಿ ನಮಗಿದೆ. ನಿನ್ನೆ ಅವರು ಹೇಳಿಕೆಯನ್ನೇನೋ ಬಿಡುಗಡೆ ಮಾಡಿದ್ದಾರೆ, ಆದರೆ ಅದರಲ್ಲಿ ಅವರ ಧ್ವನಿ ಅಥವಾ ವಿಡಿಯೋ ಯಾವುದೂ ಇರಲಿಲ್ಲ. ಕೇವಲ ಲಿಖಿತ ಪತ್ರವನ್ನಷ್ಟೇ ಹಂಚಿಕೊಳ್ಳಲಾಗಿದೆ. ಇರಾನ್‌ನಲ್ಲಿ ಸಾಕಷ್ಟು ಕ್ಯಾಮೆರಾ ಮತ್ತು ವಾಯ್ಸ್ ರೆಕಾರ್ಡರ್‌ಗಳಿ ಇವೆ, ಆದರೂ ಕೇವಲ ಲಿಖಿತ ಸಂದೇಶವನ್ನೇಕೆ ನೀಡಲಾಗಿದೆ? ಬಹುಶಃ ಅವರು ಭಯಭೀತರಾಗಿದ್ದಾರೆ, ಗಾಯಗೊಂಡಿದ್ದಾರೆ ಮತ್ತು ತಲೆಮರೆಸಿಕೊಂಡಿದ್ದಾರೆ,” ಎಂದು ಹೇಳಿದರು.

ಪ್ರಮುಖ ಸುದ್ದಿ :-   ಕ್ರಿಕೆಟ್ ದಂತಕತೆ ಸರ್ ಗ್ಯಾರಿ ಸೋಬರ್ಸ್ ನಿಧನ

https://twitter.com/i/broadcasts/1DxleEjvOWzKL

ಇರಾನ್ ಮೇಲೆ ಅಮೆರಿಕದ ಭೀಕರ ದಾಳಿ
ಅಮೆರಿಕವು ಇರಾನ್‌ನ ಮಿಲಿಟರಿ ಸಾಮರ್ಥ್ಯವನ್ನು ನಾಶಪಡಿಸಲು ಜಗತ್ತು ಹಿಂದೆಂದೂ ಕಾಣದ ವೇಗದಲ್ಲಿ ದಾಳಿಗಳನ್ನು ನಡೆಸುತ್ತಿದೆ ಎಂದು ಹೆಗ್ಸೆತ್ ಘೋಷಿಸಿದರು. “ಇಂದು ಟೆಹ್ರಾನ್ ಮತ್ತು ಇರಾನ್‌ನ ವಾಯುಪ್ರದೇಶದಲ್ಲಿ ಅಮೆರಿಕವು ಅತಿ ಹೆಚ್ಚು ಪ್ರಮಾಣದ ದಾಳಿಗಳನ್ನು ನಡೆಸಲಿದೆ. ಯುದ್ಧದ ಉದ್ದೇಶಗಳನ್ನು ಸಾಧಿಸುವಲ್ಲಿ ನಾವು ಯಶಸ್ವಿಯಾಗುತ್ತಿದ್ದೇವೆ,” ಎಂದು ಅವರು ತಿಳಿಸಿದರು.
ಹಾರ್ಮುಜ್ ಜಲಸಂಧಿಯನ್ನು ಇರಾನ್ ದಶಕಗಳಿಂದ ಒತ್ತೆ ಇರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ಸದ್ಯಕ್ಕೆ ಈ ಜಲಮಾರ್ಗ ಮುಕ್ತವಾಗಿದೆ ಎಂದು ಹೆಗ್ಸೆತ್ ಸ್ಪಷ್ಟಪಡಿಸಿದರು.
ಮಿನಾಬ್ ಶಾಲೆಯ ಮೇಲೆ ನಡೆದ ದಾಳಿಯಲ್ಲಿ ವಿದ್ಯಾರ್ಥಿಗಳು ಸಾವಿಗೀಡಾದ ಕುರಿತು ಪ್ರತಿಕ್ರಿಯಿಸಿದ ಅವರು, “ನಾವು ನಾಗರಿಕರನ್ನು ಗುರಿಯಾಗಿಸುವುದಿಲ್ಲ. ಈ ಘಟನೆಯ ಬಗ್ಗೆ ನಾವು ತನಿಖೆ ನಡೆಸಲಿದ್ದೇವೆ ಮತ್ತು ಸತ್ಯವನ್ನು ಶೀಘ್ರದಲ್ಲೇ ಬಹಿರಂಗಪಡಿಸಲಿದ್ದೇವೆ,” ಎಂದರು.
ಇರಾನ್ ಸದ್ಯ ನಾಯಕತ್ವದ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ದೇಶದಲ್ಲಿ ಅವ್ಯವಸ್ಥೆಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement