ರಾಜ್ಯಸಭೆ ಚುನಾವಣೆ : 11 ಸ್ಥಾನಗಳಲ್ಲಿ 8ರಲ್ಲಿ ಎನ್‌ಡಿಎ ಗೆಲುವು ; ಬಿಜೆಡಿಗೆ ಒಂದು ಸ್ಥಾನ

ನವದೆಹಲಿ: ಮೂರು ರಾಜ್ಯಗಳಲ್ಲಿ ಸೋಮವಾರ ನಡೆದ 11 ಮೇಲ್ಮನೆ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಪ್ರಾಬಲ್ಯ ಸಾಧಿಸಿದೆ. ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಮತ್ತು ಬಿಜೆಪಿ ನೂತನ ಅಧ್ಯಕ್ಷ ನಿತಿನ್ ನಬಿನ್ ಅವರು ಬಿಹಾರದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಖಾಲಿ ಇರುವ 37 ರಾಜ್ಯಸಭಾ ಸ್ಥಾನಗಳಲ್ಲಿ, ಬಿಹಾರ, ಒಡಿಶಾ ಮತ್ತು ಹರಿಯಾಣದಲ್ಲಿ ಕೇವಲ 11 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಸಲಾಯಿತು. ಉಳಿದ ಅಭ್ಯರ್ಥಿಗಳನ್ನು ಮೊದಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎನ್‌ಡಿಎ ಎಂಟು ಸ್ಥಾನಗಳನ್ನು ಗೆದ್ದಿದೆ, ಅದರಲ್ಲಿ ಒಬ್ಬರು ಬಿಜೆಪಿ ಬೆಂಬಲಿತ ಪಕ್ಷೇತರಾಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಬಿಜು ಜನತಾದಳ (ಬಿಜೆಡಿ) ಒಂದು ಸ್ಥಾನವನ್ನು ಪಡೆದುಕೊಂಡಿದೆ. ಅಕ್ರಮಗಳ ದೂರುಗಳ ನಂತರ ಹರಿಯಾಣದಲ್ಲಿ ಎರಡು ಸ್ಥಾನಗಳ ಎಣಿಕೆಯನ್ನು ಸ್ಥಗಿತಗೊಳಿಸಲಾಗಿದೆ.
ಈ ಮೊದಲು, ಮಾರ್ಚ್ 9 ರಂದು ನಾಮಪತ್ರಗಳನ್ನು ಹಿಂತೆಗೆದುಕೊಂಡ ನಂತರ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಮತ್ತು ಕೇಂದ್ರ ಸಚಿವ ರಾಮದಾಸ ಅಠಾವಳೆ ಸೇರಿದಂತೆ 26 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ಬಿಹಾರ
ಬಿಹಾರದ ಎಲ್ಲಾ ಐದು ಸ್ಥಾನಗಳನ್ನು ಎನ್‌ಡಿಎ ಗೆದ್ದಿದೆ. ಜನತಾ ದಳ (ಯುನೈಟೆಡ್) ನಾಯಕ ನಿತೀಶಕುಮಾರಮತ್ತು ಬಿಜೆಪಿಯ ಅಧ್ಯಕ್ಷ ನಿತಿನ್ ನಬಿನ್ , ಜೆಡಿ (ಯು) ನ ಕೇಂದ್ರ ಸಚಿವ ರಾಮನಾಥ ಠಾಕೂರ್, ರಾಷ್ಟ್ರೀಯ ಲೋಕ ಮೋರ್ಚಾ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಮತ್ತು ಬಿಜೆಪಿಯ ಶಿವೇಶಕುಮಾರ ಆಯ್ಕೆಯಾಗಿದ್ದಾರೆ.
ಠಾಕೂರ್ ಮತ್ತು ಕುಶ್ವಾಹ ಹಾಲಿ ರಾಜ್ಯಸಭಾ ಸದಸ್ಯರಾಗಿದ್ದರು, ಅವರು ಮರು ಆಯ್ಕೆಯಾಗಿದ್ದಾರೆ, ಆದರೆ ಶಿವೇಶ ಕುಮಾರ ಮೊದಲ ಬಾರಿಗೆ ಮೇಲ್ಮನೆ ಪ್ರವೇಶಿಸಲಿದ್ದಾರೆ.
ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಐದು ಎಐಎಂಐಎಂ ಶಾಸಕರು ಮತ್ತು ಒಬ್ಬ ಬಿಎಸ್‌ಪಿ ಶಾಸಕರ ಬೆಂಬಲವನ್ನು ಹೊಂದಿದ್ದಾರೆಂದು ಹೇಳಿಕೊಂಡರೂ ನಿರ್ಗಮಿತ ಸದಸ್ಯ ಅಮರೇಂದ್ರ ಧಾರಿ ಸಿಂಗ್ ಚುನಾವಣೆಯಲ್ಲಿ ಸೋತರು.
ಒಡಿಶಾ
ಒಡಿಶಾದಲ್ಲಿ, ಐದು ಅಭ್ಯರ್ಥಿಗಳು ನಾಲ್ಕು ಸ್ಥಾನಗಳಿಗೆ ಸ್ಪರ್ಧಿಸಿದರು. ಅಡ್ಡ ಮತದಾನದ ವರದಿಗಳ ನಡುವೆಯೂ ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದಿತು. ಕಾಂಗ್ರೆಸ್‌ನಿಂದ ಮೂವರು ಮತ್ತು ಬಿಜೆಡಿಯ ಇಬ್ಬರು ಸೇರಿ ಕನಿಷ್ಠ ಐವರು ಶಾಸಕರು ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ದಿಲೀಪ ರೇ ಅವರಿಗೆ ಮತ ಹಾಕಿದ್ದಾರೆ ಎಂದು ವರದಿಯಾಗಿದೆ.
ಆಯ್ಕೆಯಾದವರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮನಮೋಹನ ಸಮಲ್, ಹಾಲಿ ರಾಜ್ಯಸಭಾ ಸಂಸದ ಸುಜೀತಕುಮಾರ, ಬಿಜೆಡಿಯ ಸಂತ್ರಪ್ತ ಮಿಶ್ರಾ ಮತ್ತು ದಿಲೀಪ ರೇ ಸೇರಿದ್ದಾರೆ.
ಕಾಂಗ್ರೆಸ್ ಮತ್ತು ಸಿಪಿಐ(ಎಂ) ಬೆಂಬಲಿತ ಬಿಜೆಡಿ ಅಭ್ಯರ್ಥಿ ಮತ್ತು ಮೂತ್ರಶಾಸ್ತ್ರಜ್ಞ ಡಾ. ದತ್ತೇಶ್ವರ ಹೋಟಾ ಸ್ಪರ್ಧೆಯಲ್ಲಿ ಐದನೇ ಅಭ್ಯರ್ಥಿಯಾಗಿದ್ದರು. ಅವರು ಪರಾಭವಗೊಂಡಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement