ಶಿರಸಿ : ಮಲೆನಾಡಿನ ಪಾರಂಪರಿಕ ಆಹಾರ ಪದ್ಧತಿ ನಶಿಸುತ್ತಿರುವ ಈ ಸಂದರ್ಭದಲ್ಲಿ ಎಥ್ನಿಕ್ ಫುಡ್ ಪ್ರವಾಸೋದ್ಯಮ (ethnic Tourism) ಪ್ರಚುರಪಡಿಸುವ ಮೂಲಕ ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಿದೆ ಎಂದು ಕದಂಬ ಮಾರ್ಕೆಟಿಂಗ್ ಸಹಕಾರಿ ಸಂಘದ ಸಲಹೆಗಾರ ವಿಶ್ವೇಶ್ವರ ಭಟ್ ಕೋಟೆಮನೆ ಹೇಳಿದ್ದಾರೆ.
ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ತೋಟಗಾರಿಕಾ ಇಲಾಖೆ ಸಭಾಭವನದಲ್ಲಿ ಸೋಮವಾರ ವನಸ್ತ್ರೀ ಸಂಘಟನೆಯಿಂದ ಆಯೋಜಿಸಲಾಗಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ʼಹಿತ್ತಲ ಸುತ್ತಲೂʼ ಹಾಗೂ ಡಾ. ಕೇಶವ ಕೊರ್ಸೆ ಅವರ ʼನೆಲ ಮುಗಿಲ ಮಾತುʼ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕೃಷಿ, ಇಕೋ ಪ್ರವಾಸೋದ್ಯಮದಂತೆ ಇಲ್ಲಿನ ಈ ಭಾಗದ ಆಹಾರ ಸಂಸ್ಕೃತಿಯನ್ನು ಜಗತ್ತಿಗೆ ತಿಳಿಸುವ ಪ್ರವಾಸೋದ್ಯಮ ಮಾಡಬೇಕು. ಇದು ಇಂದಿನ ಅಗತ್ಯವೂ ಆಗಿದೆ. ಆಹಾರ ಪದಾರ್ಥಗಳು ಕಲಬೆರಕೆ, ವಿಷಯುಕ್ತ ಆಗುತ್ತಿವೆ. ಆದರೆ ಪಾರಂಪರಿಕ ಕೃಷಿ ಹಾಗೂ ಆಹಾರ ಪದ್ಧತಿಯಿಂದ ಇದನ್ನು ಕಡಿಮೆಮಾಡಬಹುದು ಎಂದರು.
ಪಾರಂಪರಿಕ ಪದ್ಧತಿಯಲ್ಲಿ ಸಂಸ್ಕರಿಸುವ ಉತ್ಪನ್ನಗಳನ್ನು ತಯಾರಿಸುವ ಗೃಹೋದ್ಯಮಗಳನ್ನು ನಡೆಸಬೇಕು. ಆಗ ಗ್ರಾಹಕರಿಗೆ ನೈಜ ಉತ್ಪನ್ನಗಳನ್ನು ಒದಗಿಸಲು, ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆಯಲು ಸಾಧ್ಯ ಎಂದರು. ಮಲೆನಾಡಿನ ತಂಬುಳಿ, ಕೋಕಂ, ಹಲಸು ಮುಂತಾದವುಗಳ ಮೂಲಕ ಗೃಹೋದ್ಯಮ ನಡೆಸಬಹುದು. ಅವುಗಳನ್ನು ಮಾರುಕಟ್ಟೆಗೆ ತಂದು ಬದುಕು ಕಟ್ಟಿಕೊಳ್ಳಬೇಕು ಎಂದರು.
ಈ ಭಾಗದ ಆಹಾರ ಪದ್ಧತಿ ಉಳಿಯಬೇಕಾದರೆ ಇಲ್ಲಿನ ಕಾಳುಮೆಣಸು, ಭತ್ತದ ತಳಿಗಳು, ಇನ್ನಿತರ ಆಹಾರ ಧಾನ್ಯಗಳ ತಳಿಗಳ ರಕ್ಷಣೆಯೂ ನಡೆಯಬೇಕು. ಇವುಗಳನ್ನುಹೆಚ್ಚಿನ ಪ್ರಮಾಣದಲ್ಲಿ ಬೆಳೆಸುವುದಕ್ಕೆ ಪ್ರೋತ್ಸಾಹಿಸಬೇಕು ಎಂದರು.
ಸಂರಕ್ಷಣಾ ಜೀವಶಾಸ್ತ್ರಜ್ಞ ಡಾ. ಕೇಶವ ಕೊರ್ಸೆ ಮಾತನಾಡಿ, ಇದು ಮಾರುಕಟ್ಟೆ ಯುಗ. ಅದಕ್ಕೆ ನಾವು ಸಿದ್ಧರಾಗಲೇಬೇಕು. ಮಲೆನಾಡಿನ ಮಹಿಳೆಯರಿಗೆ ತಾವು ಉತ್ಪಾದಿಸಿದ ಬೆಳೆ, ಗೃಹ ಉತ್ಪನ್ನಗಳನ್ನು ಮಾರಾಟ ಮಾಡಲು ಏನೋ ಹಿಂಜರಿಕೆ. ಆದರೆ ನಾವು ಈ ಮಾರುಕಟ್ಟೆ ಯುಗದಲ್ಲಿ ನಮ್ಮ ಉತ್ಪನ್ನಗಳ ಮಾರ್ಕೆಟ್ ಮಾಡಲು ಸಿದ್ಧರಾಗಬೇಕು ಎಂದರು.
ಕೈದೋಟ, ಹೂಗಿಡಗಳು, ತರಕಾರಿ, ಔಷಧಿ ಗಿಡಗಳನ್ನು ಬೆಳೆಸುವ ಕಲ್ಪನೆ ಮತ್ತೆ ಪುನರುಜ್ಜೀವನಗೊಳ್ಳಬೇಕು. ಬೀಜ ಸಂಗ್ರಹ ಇನ್ನಷ್ಟು ಹೆಚ್ಚಬೇಕು. ಕೃಷಿಯಲ್ಲಿ ಜೈವಿಕ ವಿಧಾನವನ್ನು ಬಳಸಬೇಕು. ವೆಚ್ಚದಾಯಕವಾಗುವ ವಿಧಾನವನ್ನು ಕಡಿಮೆ ಮಾಡಿ, ಲಾಭದಾಯಕವಾಗುವ ಕೃಷಿ ವಿಧಾನ ಅಳವಡಿಸಿಕೊಳ್ಳಬೇಕು ಎಂದರು.
ವನಸ್ತ್ರೀ ಸ್ಥಾಪಕ ಟ್ರಸ್ಟಿ ಸುನೀತಾ ರಾವ್ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಟ್ರಸ್ಟಿ ಶ್ಯಾಮಲಾ ಉಪಸ್ಥಿತರಿದ್ದರು. ಶೈಲಜಾ ಗೋರ್ನಮನೆ ಸ್ವಾಗತಿಸಿದರು. ನಂದನಾ ಜೋಶಿ ನಿರೂಪಿಸಿದರು. ರೇವತಿ ಭಟ್ ಹೊಸಳ್ಳಿ ವಂದಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ