ವೀಡಿಯೊಗಳು | ಆಲಿಕಲ್ಲು ಮಳೆಯ ಅಬ್ಬರಕ್ಕೆ ಹಿಮಚ್ಛಾದಿತ ಕಾಶ್ಮೀರದಂತೆ ಕಂಡ ಕಲಘಟಗಿ…!

ಧಾರವಾಡ: ಜಿಲ್ಲೆಯ ಕಲಘಟಗಿ ತಾಲೂಕಿನ ಹಲವಡೆ ಮಂಗಳವಾರ ಅಪರಾಹ್ನದ ನಂತರ ಸುರಿದ ಭೀಕರ ಆಲಿಕಲ್ಲು ಮಳೆಯಿಂದಾಗಿ ಸಂಪೂರ್ಣವಾಗಿ ‘ಹಿಮಲೋಕ’ವಾಗಿ ಪರಿವರ್ತನೆಗೊಂಡಿತ್ತು.
ಮಧ್ಯಾಹ್ನದ ನಂತರ ಹವಾಮಾನ ಬದಲಾಗಿದ್ದು, ಕಲಘಟಗಿ ಪಟ್ಟಣ, ಬೆಲವಂತರ, ಮಾಚಾಪುರ, ಸೋಮನಕೊಪ್ಪ ಮೊದಲಾದ ಗ್ರಾಮಗಳಲ್ಲಿ ಆರಂಭದಲ್ಲಿ ಸಾಧಾರಣವಾಗಿ ಸುರಿಯುತ್ತಿದ್ದ ಮಳೆ ನೋಡನೋಡುತ್ತಿದ್ದಂತೆ ಭೀಕರ ಆಲಿಕಲ್ಲು ಮಳೆಯ ರೂಪ ತಾಳಿತು. ಮಧ್ಯಾಹ್ನ 3ರ ನಂತರ ಆಲಿಕಲ್ಲು ಮಳೆ ಜೋರಾಗಿ ಜನರು ಪರದಾಡಿದರು.

ಸಂತೆಯ ದಿನವಾಗಿದ್ದರಿಂದ ಸಂತೆಗೆ ಬಂದವರು ಒಮ್ಮೆಲೇ ಸುರಿದ ಆಲಿಕಲ್ಲು ಮಳೆಯಿಂದ ತೊಂದರೆಗೆ ಒಳಗಾದರು. ವಾಹನ ಸಂಚಾರಕ್ಕೆ ತೊಂದರೆಯಾಯಿತು. ಸತತವಾಗಿ ಸುರಿದ ಆಲಿಕಲ್ಲು ಮಳೆಯಿಂದಾಗಿ ಕಲಘಟಗಿಯ ರಸ್ತೆಗಳು, ಗಲ್ಲಿಗಳು ಹಾಗೂ ಖಾಲಿ ಮೈದಾನಗಳು ದಪ್ಪನೆಯ ಮಂಜುಗಡ್ಡೆ(ಹಿಮ)ಯ ಪದರದಿಂದ ಆವೃತವಾದವು. ರಸ್ತೆಗಳು ಬಿಳಿ ಬಣ್ಣಕ್ಕೆ ತಿರುಗಿದ್ದು, ಕಾಶ್ಮೀರದ ಹಿಮಪಾತದ ದೃಶ್ಯವನ್ನು ನೆನಪಿಸುವಂತಿದ್ದವು.

ಜನಜೀವನ ಅಸ್ತವ್ಯಸ್ತ:
ಈ ಅನಿರೀಕ್ಷಿತ ಹವಾಮಾನ ವೈಪರೀತ್ಯದಿಂದಾಗಿ ಜನಜೀವನ ಸಂಪೂರ್ಣ ಸ್ಥಗಿತಗೊಂಡಿದೆ. ರಸ್ತೆಗಳ ಮೇಲೆ ಐಸ್ ಶೇಖರಣೆಯಾದ ಕಾರಣ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಸಾರ್ವಜನಿಕರು ಹಾಗೂ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯ ಅಬ್ಬರಕ್ಕೆ ದೈನಂದಿನ ಚಟುವಟಿಕೆಗಳು ಕೂಡ ಸ್ಥಗಿತಗೊಂಡಿವೆ.
ಕಲಘಟಗಿ ಭಾಗದಲ್ಲಿ ಹಿಮದಂತೆ ಕಾಣುವ ಈ ಅಪರೂಪದ ದೃಶ್ಯವು ಕುತೂಹಲ ಮೂಡಿಸಿದೆಯಾದರೂ, ಅಕಾಲಿಕ ಮಳೆಯಿಂದ ಬೆಳೆಗಳಿಗೆ ಆಗಿರುವ ಹಾನಿಯ ಬಗ್ಗೆ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ಇಂದು ಸಿಎಂ ಆಗಿ ಡಿಕೆ ಶಿವಕುಮಾರ ಪ್ರಮಾಣ ವಚನ: ಪರಮೇಶ್ವರ ಡಿಸಿಎಂ ; 13 ಶಾಸಕರಿಗೆ ಸಚಿವ ಸ್ಥಾನ ; ಪಟ್ಟಿ ಇಲ್ಲಿದೆ

ಇದಲ್ಲದೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಟದೂರು ಪ್ರದೇಶದಲ್ಲಿಯೂ ಆಲಿಕಲ್ಲು ಮಳೆಯಾದ ವರದಿಯಾಗಿದೆ. ಅಲ್ಲದೆ ಅಣ್ಣಿಗೇರಿಯಲ್ಲಿಯೂ ಮಳೆ ಜೊತೆ ಆಲಿಕಲ್ಲು ಬಿದ್ದಿದೆ. ಇದಲ್ಲದೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಸುತ್ತಮುತ್ತ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಸುತ್ತಮುತ್ತ, ಬಾಗಲಕೋಟೆ ಜಿಲ್ಲೆಯ ಕೆಲವಡೆ ಹಾಗೂ ಗದಗ ಜಿಲ್ಲೆಯ ರೋಣದಲ್ಲೂ ಆಲಿಕಲ್ಲು ಮಳೆಯಾದ ವರದಿಯಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement