ನವದೆಹಲಿ: ಚೀನಾಗೆ ತೆರಳುತ್ತಿದ್ದ ರಷ್ಯಾದ ಕಚ್ಚಾ ತೈಲ ಹೊತ್ತ ಹಡಗುಗಳು ಈಗ ಅರ್ಧ ದಾರಿಯಲ್ಲೇ ಮಾರ್ಗ ಬದಲಿಸಿ ಭಾರತದತ್ತ ಧಾವಿಸುತ್ತಿವೆ. ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಉಂಟಾಗಿರುವ ಜಾಗತಿಕ ತೈಲ ಬಿಕ್ಕಟ್ಟಿನ ನಡುವೆ, ಭಾರತವು ರಷ್ಯಾದಿಂದ ತನ್ನ ತೈಲ ಆಮದನ್ನು ದುಪ್ಪಟ್ಟುಗೊಳಿಸಿರುವುದು ಇದಕ್ಕೆ ಕಾರಣವಾಗಿದೆ.
ಮಾರ್ಗ ಬದಲಿಸಿದ ‘ಅಕ್ವಾ ಟೈಟಾನ್’ (Aqua Titan) ಎಂಬ ಹಡಗು ಬಾಲ್ಟಿಕ್ ಸಮುದ್ರದಿಂದ ಚೀನಾದ ರಿಜಾವೊ ಬಂದರಿಗೆ ತೆರಳಬೇಕಿತ್ತು. ಆದರೆ ಈ ಬೃಹತ್ ಹಡಗು ದಕ್ಷಿಣ ಚೀನಾ ಸಮುದ್ರದಲ್ಲಿ ಇದ್ದಕ್ಕಿದ್ದಂತೆ ಮಾರ್ಗ ಬದಲಿಸಿದ್ದು, ಮಾರ್ಚ್ 21ರಂದು ಇದು ಕರ್ನಾಟಕದ ನವ ಮಂಗಳೂರು ಬಂದರಿಗೆ (NMPT) ತಲುಪುವ ನಿರೀಕ್ಷೆಯಿದೆ.
ಕೇವಲ ಒಂದು ವಾರದಲ್ಲಿ ಭಾರತೀಯ ತೈಲ ಕಂಪನಿಗಳು ಸುಮಾರು 3 ಕೋಟಿ ಬ್ಯಾರೆಲ್ ರಷ್ಯಾದ ತೈಲವನ್ನು ಖರೀದಿಸಿವೆ.
ಇರಾನ್‌ನಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಭಾರತಕ್ಕೆ ಸಿಗುತ್ತಿದ್ದ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದನ್ನು ಸರಿದೂಗಿಸಲು ಭಾರತ ರಷ್ಯಾದ ಮೊರೆ ಹೋಗಿದೆ.
ಏಳು ಹಡಗುಗಳ ದಿಕ್ಕು ಬದಲಾವಣೆ:
ಕೇವಲ ಅಕ್ವಾ ಟೈಟಾನ್ ಮಾತ್ರವಲ್ಲದೆ, ಚೀನಾಗೆ ಹೋಗಬೇಕಿದ್ದ ಕನಿಷ್ಠ ಏಳು ತೈಲ ಟ್ಯಾಂಕರ್‌ಗಳು ಈಗ ಭಾರತದತ್ತ ಮುಖ ಮಾಡಿವೆ ಎಂದು ಶಿಪ್-ಟ್ರ್ಯಾಕಿಂಗ್ ಅಂಕಿಅಂಶಗಳು ತಿಳಿಸಿವೆ. ಮಾಹಿತಿ ಪ್ರಕಾರ, ರಷ್ಯಾದ ತೈಲವನ್ನು ಸಾಗಿಸುವ 7 ಟ್ಯಾಂಕರ್‌ಗಳು ಚೀನಾದ ಕಡೆ ಹೋಗುತ್ತಿತ್ತು. ಈಗ ಮಾರ್ಗ ಬದಲಿಸಿ ಭಾರತಕ್ಕೆ ಆಗಮಿಸುತ್ತಿವೆ.
ಭಾರತದ ಜೊತೆಗೆ ಜಪಾನ್ ಮತ್ತು ದಕ್ಷಿಣ ಕೊರಿಯಾಗಳು ಕೂಡ ರಷ್ಯಾದಿಂದ ತೈಲ ಖರೀದಿಸಲು ಆರಂಭಿಸಿರುವುದರಿಂದ, ಮುಂದಿನ ದಿನಗಳಲ್ಲಿ ತೈಲ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.
ಮತ್ತೊಂದು ಹಡಗು ‘ಸಿಕ್ಕಾ’ ಬಂದರಿಗೆ:
ಕಝಾಕಿಸ್ತಾನ್‌ನ ಕಚ್ಚಾ ತೈಲ ಹೊತ್ತ ‘ಝೌಝೌ ಎನ್’ (Zouzou N.) ಎಂಬ ಮತ್ತೊಂದು ಹಡಗು ಕೂಡ ಮಾರ್ಚ್ 25 ರಂದು ಗುಜರಾತ್‌ನ ಸಿಕ್ಕಾ ಬಂದರನ್ನು ತಲುಪಲಿದೆ. ಇದು ಕೂಡ ಮೊದಲು ಚೀನಾಗೆ ತೆರಳುತ್ತಿತ್ತು ಎಂಬುದು ಗಮನಾರ್ಹ.


ನಿಮ್ಮ ಕಾಮೆಂಟ್ ಬರೆಯಿರಿ