ವೀಡಿಯೊ | ನೆಲದಿಂದ ಕೆಲವೇ ಇಂಚುಗಳ ಎತ್ತರದಲ್ಲಿ ನಿಯಂತ್ರಣ ತಪ್ಪಿ ಅಪ್ಪಳಿಸಿದ ಹೆಲಿಕಾಪ್ಟರ್‌

ಕಠ್ಮಂಡು: ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಖೋಟಾಂಗ್ ಜಿಲ್ಲೆಗೆ ಶವವೊಂದನ್ನು ಹೊತ್ತು ಸಾಗುತ್ತಿದ್ದ ಏರ್ ಡೈನಾಸ್ಟಿ ಸಂಸ್ಥೆಯ ಹೆಲಿಕಾಪ್ಟರ್ ಬುಧವಾರ ಇಳಿಯುವ ಸಂದರ್ಭದಲ್ಲಿ ಅಪಘಾತಕ್ಕೀಡಾಗಿದೆ.
ಖೋಟಾಂಗ್ ಜಿಲ್ಲೆಯ ಬಾಲಬೇಸಿ ಎಂಬಲ್ಲಿನ ಕೃಷಿ ಭೂಮಿಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ಕಾಲಮಾನ ಸುಮಾರು ಬೆಳಿಗ್ಗೆ 11:51 ಕ್ಕೆ ಈ ಅಪಘಾತ ಸಂಭವಿಸಿದ್ದು, ಈ ವೇಳೆ ಹೆಲಿಕಾಪ್ಟರ್‌ನಲ್ಲಿ ಐವರು ಪ್ರಯಾಣಿಕರಿದ್ದರು. ಒಬ್ಬ ಪ್ರಯಾಣಿಕನ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಉಳಿದ ಪ್ರಯಾಣಿಕರು ಮತ್ತು ಪೈಲಟ್ ಸುರಕ್ಷಿತವಾಗಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಅತಿಯಾದ ಗಾಳಿ ಅಥವಾ ಲ್ಯಾಂಡಿಂಗ್ ಸಮಯದಲ್ಲಿ ಎದ್ದ ಧೂಳಿನಿಂದಾಗಿ ಪೈಲಟ್ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಹೆಲಿಕಾಪ್ಟರ್ ಬೆಟ್ಟದ ಇಳಿಜಾರಿನಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದಾಗ ಹಠಾತ್ತಾಗಿ ಪಲ್ಟಿಯಾಗಿ ಉರುಳುವ ದೃಶ್ಯಗಳು ವೈರಲ್ ಆಗಿವೆ. ಅಪ್ಪಳಿಸಿದ ರಭಸಕ್ಕೆ ಹೆಲಿಕಾಪ್ಟರ್‌ನ ಬಾಲದ ಭಾಗವು ಗುಡ್ಡದ ಗೋಡೆಗೆ ಬಡಿದು ಸಂಪೂರ್ಣವಾಗಿ ಜಖಂಗೊಂಡಿದೆ.
ಗಾಯಗೊಂಡ ಪ್ರಯಾಣಿಕನನ್ನು ಮತ್ತೊಂದು ಹೆಲಿಕಾಪ್ಟರ್ (ನೋಂದಣಿ ಸಂಖ್ಯೆ 9N-ANA) ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಕಠ್ಮಂಡುವಿಗೆ ಕರೆದೊಯ್ಯಲಾಗಿದೆ.
“ಹೆಲಿಕಾಪ್ಟರ್ ಕೃಷಿ ಭೂಮಿಯಲ್ಲಿ ಇಳಿಯುವಾಗ ಪಲ್ಟಿಯಾಗಿದೆ. ಯಾವುದೇ ಸಾವು-ನೋವು ಸಂಭವಿಸಿಲ್ಲ” ಎಂದು ಖೋಟಾಂಗ್ ಜಿಲ್ಲೆಯ ಮುಖ್ಯ ಜಿಲ್ಲಾಧಿಕಾರಿ ರೇಖಾ ಕಂಡೇಲ್ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement