ಉತ್ತರ ಕೊರಿಯಾ ಚುನಾವಣೆ : 99.93% ಮತಗಳಿಂದ ಕಿಮ್‌ಗೆ ಜಯ ; ಗಮನ ಸೆಳೆದದ್ದು ಮಾತ್ರ ಶೇ. 0.07 ಮತದಾರರು ತೋರಿದ ಧೈರ್ಯ, ಯಾಕೆ ಗೊತ್ತೆ ?

ವಿಶ್ವದ ಅತ್ಯಂತ ನಿಗೂಢ ರಾಷ್ಟ್ರ ಉತ್ತರ ಕೊರಿಯಾದಲ್ಲಿ ಮತ್ತೊಮ್ಮೆ ‘ಕಿಮ್ ಯುಗ’ ಸಾಬೀತಾಗಿದೆ. ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ನೇತೃತ್ವದ ‘ವರ್ಕರ್ಸ್ ಪಾರ್ಟಿ’ ಚುನಾವಣೆಯಲ್ಲಿ ಅಕ್ಷರಶಃ ಕ್ಲೀನ್ ಸ್ವೀಪ್ ಮಾಡಿದೆ. ಆದರೆ, ಈ ಬಾರಿಯ ಫಲಿತಾಂಶದಲ್ಲಿ ದಶಕಗಳ ಕಾಲ ಕಾಣದ ಒಂದು ಸಣ್ಣ ‘ಬದಲಾವಣೆ’ ಜಗತ್ತಿನ ಗಮನ ಸೆಳೆದಿದೆ!
ಮಾರ್ಚ್ 15 ರಂದು ನಡೆದ 15ನೇ ‘ಸುಪ್ರೀಂ ಪೀಪಲ್ಸ್ ಅಸೆಂಬ್ಲಿ’ (SPA) ಚುನಾವಣೆಯಲ್ಲಿ ಕಿಮ್ ನೇತೃತ್ವದ ‘ವರ್ಕರ್ಸ್ ಪಾರ್ಟಿ ಆಫ್ ಕೊರಿಯಾ’ ಮತ್ತು ಅದರ ಮಿತ್ರಪಕ್ಷಗಳು ಭರ್ಜರಿ ಜಯಭೇರಿ ಬಾರಿಸಿವೆ.
ಕಿಮ್ ಅವರ ಆಡಳಿತ ಪಕ್ಷಕ್ಕೆ ಬರೋಬ್ಬರಿ 99.93% ಮತಗಳು ಲಭಿಸಿವೆ ಎಂದು ಅಧಿಕೃತ ಅಂಕಿಅಂಶಗಳು ತಿಳಿಸಿವೆ. (ಕೆಲವು ಸರ್ಕಾರಿ ಮಾಧ್ಯಮಗಳ ಪ್ರಕಾರ ಇದು 99.97%). ದೇಶದ ಒಟ್ಟು ಮತದಾರರಲ್ಲಿ 99.99% ಜನರು ಮತ ಚಲಾಯಿಸುವ ಮೂಲಕ ವಿಶ್ವ ದಾಖಲೆಯನ್ನೇ ಬರೆದಿದ್ದಾರೆ.
ವಿದೇಶದಲ್ಲಿದ್ದವರು ಅಥವಾ ಸಮುದ್ರದಲ್ಲಿ ಕೆಲಸ ಮಾಡುತ್ತಿದ್ದ ಕೇವಲ 0.0037% ಜನರಿಗೆ ಮಾತ್ರ ಮತ ಹಾಕಲು ಸಾಧ್ಯವಾಗಿಲ್ಲ. ಇನ್ನು ಮತದಾನದಿಂದ ದೂರ ಉಳಿದವರ ಸಂಖ್ಯೆ ಕೇವಲ 0.00003% ಮಾತ್ರ!
ಯಾರು ಆ 0.07% ಮತದಾರರು?: 
ಈ ಚುನಾವಣೆಯಲ್ಲಿ ಯಾವುದೇ ಪ್ರತಿಪಕ್ಷಗಳಿರಲಿಲ್ಲ. ಪ್ರತಿ ಕ್ಷೇತ್ರದಲ್ಲಿ ಕಿಮ್ ಸರ್ಕಾರ ಅನುಮೋದಿಸಿದ ಒಬ್ಬನೇ ಅಭ್ಯರ್ಥಿ ಇರುತ್ತಾನೆ. ಮತದಾರರು ಆತನನ್ನು ಒಪ್ಪಬೇಕು ಅಥವಾ ತಿರಸ್ಕರಿಸಬೇಕು. ಅಂದರೆ ಮತದಾರರಿಗೆ ಇರುವುದು ಎರಡೇ ಆಯ್ಕೆ: ‘ಬೇಕು’ ಅಥವಾ ‘ಬೇಡ’. ಈ ಬಾರಿ ಅಚ್ಚರಿಯೆಂಬಂತೆ 0.07% ಜನರು ಅಭ್ಯರ್ಥಿಯ ವಿರುದ್ಧ ಅಂದರೆ “ಬೇಡ” (No) ಎಂದು ಮತ ಹಾಕಿದ್ದಾರೆ. ಇದು ಜಗತ್ತಿನ ಗಮನಸೆಳೆದ ಸಂಗತಿಯಾಗಿದೆ.
ಉತ್ತರ ಕೊರಿಯಾದ ಇತಿಹಾಸದಲ್ಲಿ ‘ವಿರೋಧದ ಮತ’ಗಳನ್ನು ಬಹಿರಂಗವಾಗಿ ಒಪ್ಪಿಕೊಂಡಿರುವುದು ಇದೇ ಮೊದಲು. 1957ರ ನಂತರ ಇದೇ ಮೊದಲ ಬಾರಿಗೆ ಸರ್ಕಾರಿ ಮಾಧ್ಯಮಗಳು ‘ನೋ’ (No) ವೋಟ್‌ಗಳ ಬಗ್ಗೆ ಮಾಹಿತಿ ನೀಡಿವೆ. ಪ್ರತಿಪಕ್ಷಗಳೇ ಇಲ್ಲದ ಈ ವ್ಯವಸ್ಥೆಯಲ್ಲಿ ಈ 0.07% ಮತಗಳು ಕಿಮ್ ವಿರೋಧಿಗಳಿಗೆ ಹೋಗಿಲ್ಲ, ಬದಲಿಗೆ ಅಧಿಕೃತ ಅಭ್ಯರ್ಥಿಯನ್ನು ತಿರಸ್ಕರಿಸಿದ ಜನರ ಧ್ವನಿಯಾಗಿದೆ.
ಆಡಳಿತದ ಸ್ವರೂಪ ಹೇಗಿದೆ?
 ಒಟ್ಟು 687 ಪ್ರತಿನಿಧಿಗಳು ಸುಪ್ರೀಂ ಪೀಪಲ್ಸ್ ಅಸೆಂಬ್ಲಿಗೆ ಆಯ್ಕೆಯಾಗಿದ್ದಾರೆ. ಇದರಲ್ಲಿ ಕಾರ್ಮಿಕರು, ರೈತರು, ಬುದ್ಧಿಜೀವಿಗಳು ಮತ್ತು ಮಿಲಿಟರಿ ಅಧಿಕಾರಿಗಳು ಸೇರಿದ್ದಾರೆ.
2011ರಲ್ಲಿ ತಂದೆ ಕಿಮ್ ಜೊಂಗ್ ಇಲ್ ನಿಧನದ ನಂತರ ಅಧಿಕಾರ ವಹಿಸಿಕೊಂಡ ಕಿಮ್, 2019ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ತಮ್ಮ ಅಧಿಕಾರವನ್ನು ಯಾರೂ ಅಲುಗಾಡಿಸದಂತೆ ಗಟ್ಟಿಗೊಳಿಸಿಕೊಂಡಿದ್ದಾರೆ. ಸರ್ಕಾರ, ಮಿಲಿಟರಿ ಮತ್ತು ಎಲ್ಲಾ ಸಂಸ್ಥೆಗಳ ಮೇಲೆ ಕಿಮ್ ಅವರದ್ದೇ ಅಂತಿಮ ನಿರ್ಧಾರ. ಉತ್ತರ ಕೊರಿಯಾದಲ್ಲಿ ಚುನಾವಣೆ ಎಂದರೆ ಅದು ಕೇವಲ ಕಿಮ್ ಅವರ ಅಧಿಕಾರವನ್ನು ಜಗತ್ತಿಗೆ ಪ್ರದರ್ಶಿಸುವ ಒಂದು ಪ್ರಕ್ರಿಯೆಯಷ್ಟೇ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement