ಇಸ್ಲಾಮಾಬಾದ್: ಪಾಕಿಸ್ತಾನ್ ಸೂಪರ್ ಲೀಗ್ (PSL) 2026ರ ಆವೃತ್ತಿಯ ಭವಿಷ್ಯ ಈಗ ಅತಂತ್ರ ಸ್ಥಿತಿಯಲ್ಲಿದೆ. ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯು (PCB) ಕೇವಲ ಎರಡು ನಗರಗಳಲ್ಲಿ ಮತ್ತು ಪ್ರೇಕ್ಷಕರಿಗೆ ಮುಕ್ತ ಪ್ರವೇಶವಿಲ್ಲದೆ (Closed doors) ಪಂದ್ಯಾವಳಿಯನ್ನು ನಡೆಸಲು ನಿರ್ಧರಿಸಿದ್ದರೂ ಸಹ, ಟೂರ್ನಿಯ ಮೇಲೆ ಭೀತಿಯ ನೆರಳು ಆವರಿಸಿದೆ.
ಕಳೆದ ಭಾನುವಾರ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು ಸರ್ಕಾರದ ಈ ನಿರ್ದೇಶನವನ್ನು ಖಚಿತಪಡಿಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಮತ್ತು ತೈಲ ಬೆಲೆಗಳ ಏರಿಕೆಯನ್ನು ಈ ನಿರ್ಧಾರಕ್ಕೆ ಪ್ರಾಥಮಿಕ ಕಾರಣಗಳೆಂದು ಅವರು ಉಲ್ಲೇಖಿಸಿದ್ದಾರೆ. ಆದರೆ, ಈ ಬೆಳವಣಿಗೆಯ ಹಿಂದೆ ಕೇವಲ ಆರ್ಥಿಕ ಕಾರಣಗಳಷ್ಟೇ ಅಲ್ಲದೆ ಗಂಭೀರವಾದ ಭದ್ರತಾ ಕಾರಣಗಳೂ ಇವೆ ಎಂದು ವರದಿಯಾಗಿದೆ.
ಪಾಕಿಸ್ತಾನದ ಸಶಸ್ತ್ರ ಗುಂಪಾದ ‘ಜಮಾತ್-ಉಲ್-ಅಹ್ರಾರ್’ ವಿದೇಶಿ ಆಟಗಾರರಿಗೆ ಬಹಿರಂಗವಾಗಿಯೇ ಬೆದರಿಕೆ ಹಾಕಿದೆ. ಆಸ್ಟ್ರೇಲಿಯಾದ ಸ್ಟಾರ್ ಆಟಗಾರರಾದ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಮತ್ತು ನ್ಯೂಜಿಲೆಂಡ್ನ ಡ್ಯಾರಿಲ್ ಮಿಚೆಲ್ ಅವರಂತಹ ಆಟಗಾರರು ಈ ಕೂಡಲೇ ಟೂರ್ನಿಯಿಂದ ಹಿಂದೆ ಸರಿಯಬೇಕು, ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅದು ಎಚ್ಚರಿಸಿದೆ.
“ಒಂದು ವೇಳೆ ಈ ಆಟಗಾರರು ಪಾಕಿಸ್ತಾನಕ್ಕೆ ಬಂದರೆ ಅವರ ಸುರಕ್ಷತೆಗೆ ನಾವು ಗ್ಯಾರಂಟಿ ನೀಡುವುದಿಲ್ಲ. ಸಂಬಂಧಿತ ಕ್ರಿಕೆಟ್ ಮಂಡಳಿಗಳು ತಮ್ಮ ಆಟಗಾರರನ್ನು ಇಲ್ಲಿಗೆ ಕಳಿಸಬೇಡಿ ಎಂದು ನಾವು ಸಲಹೆ ನೀಡುತ್ತೇವೆ. ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ನಾವು ಜವಾಬ್ದಾರರಲ್ಲ,” ಎಂದು ಜಮಾತ್-ಉಲ್-ಅಹ್ರಾರ್ ಸಂಘಟನೆಯ ಕಮಾಂಡರ್ ಒಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಕ್ರಿಕೆಟ್ ವಿರುದ್ಧವಲ್ಲ, ಆದರೆ ಟೂರ್ನಿಗೆ ಅಡ್ಡಿ ಖಚಿತ
ತಮಗೆ ಕ್ರಿಕೆಟ್ ಕ್ರೀಡೆಯ ವಿರುದ್ಧ ಯಾವುದೇ ವಿರೋಧವಿಲ್ಲ ಎಂದು ಹೇಳಿಕೊಂಡಿರುವ ಈ ಗುಂಪು, ಪ್ರಸ್ತುತ ಪಾಕಿಸ್ತಾನದಲ್ಲಿರುವ ಭದ್ರತಾ ವ್ಯವಸ್ಥೆಯು ಅಂತಾರಾಷ್ಟ್ರೀಯ ಆಟಗಾರರು ಭಾಗವಹಿಸುವ ಇಂತಹ ಹೈ-ಪ್ರೊಫೈಲ್ ಟೂರ್ನಿಗೆ ಸೂಕ್ತವಾಗಿಲ್ಲ ಎಂದು ಪ್ರತಿಪಾದಿಸಿದೆ. “ಒಂದು ವೇಳೆ ಆಟಗಾರರು ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಬಂದರೆ, ಪಂದ್ಯಗಳು ನಡೆಯದಂತೆ ತಡೆಯಲು ನಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ. ಮೈದಾನಕ್ಕಿಳಿಯದಂತೆ ಅಡ್ಡಿಪಡಿಸುತ್ತೇವೆ,” ಎಂದು ಸಂಘಟನೆಯು ಉಗ್ರ ರೂಪದ ಎಚ್ಚರಿಕೆ ನೀಡಿದೆ.
ಮಾರ್ಚ್ 26 ರಿಂದ ಆರಂಭವಾಗಲಿರುವ ಈ ಟೂರ್ನಿಯಲ್ಲಿ ಪ್ರಮುಖ ಅಂತಾರಾಷ್ಟ್ರೀಯ ಆಟಗಾರರಾದ ಆಸ್ಟ್ರೇಲಿಯಾದ ಆಟಗಾರರಾದ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಆಡಮ್ ಜಂಪಾ, ಇಂಗ್ಲೆಂಡಿನ ಮೊಯೀನ್ ಅಲಿ, ನ್ಯೂಜಿಲೆಂಡಿನ ಡೆವೊನ್ ಕಾನ್ವೇ ಅವರು ಪಾಲ್ಗೊಳ್ಳಲಿದ್ದಾರೆ.
ಪಿಸಿಬಿ ಈಗಾಗಲೇ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದರೂ, ಈಗಿನ ಬದಲಾದ ವೇಳಾಪಟ್ಟಿ ಮತ್ತು ಸ್ವರೂಪಕ್ಕೆ ಈ ಬೆದರಿಕೆಗಳೇ ನೇರ ಕಾರಣವೇ ಎಂಬ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ, ಅಂತಾರಾಷ್ಟ್ರೀಯ ಆಟಗಾರರು ಮತ್ತು ಅವರ ಕ್ರಿಕೆಟ್ ಮಂಡಳಿಗಳು ಈ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಲಿವೆ ಎಂಬುದು ಮಹತ್ವ ಪಡೆದಿದೆ.


ನಿಮ್ಮ ಕಾಮೆಂಟ್ ಬರೆಯಿರಿ