ನವದೆಹಲಿ: ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಕೇವಲ ಮೈದಾನದಲ್ಲಿ ಮಾತ್ರವಲ್ಲ, ವ್ಯವಹಾರದಲ್ಲೂ ಚಾಣಾಕ್ಷ ಎನ್ನುವುದು ಈಗ ಸಾಬೀತಾಗಿದೆ. 2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭವಾದಾಗ ರಾಜಸ್ಥಾನ್ ರಾಯಲ್ಸ್ ತಂಡದೊಂದಿಗೆ ಅವರು ಮಾಡಿಕೊಂಡಿದ್ದ ಒಂದು ವಿಶೇಷ ಒಪ್ಪಂದವು, ಈಗ ಅವರ ಕುಟುಂಬಕ್ಕೆ ಸುಮಾರು 450 ರಿಂದ 460 ಕೋಟಿ ರೂಪಾಯಿಗಳ ಬಂಪರ್ ಲಾಭವನ್ನು ತಂದುಕೊಡಲಿದೆ ಎಂದು ವರದಿಯಾಗಿದೆ.
2008ರಲ್ಲಿ ಐಪಿಎಲ್ನ ಚೊಚ್ಚಲ ಸೀಸನ್ ಆರಂಭವಾದಾಗ, ರಾಜಸ್ಥಾನ್ ರಾಯಲ್ಸ್ ತಂಡವು ವಾರ್ನ್ ಅವರನ್ನು ನಾಯಕ ಹಾಗೂ ಕೋಚ್ ಆಗಿ ನೇಮಿಸಿಕೊಂಡಿತ್ತು. ಆಗ ಅವರು ತಮ್ಮ ಒಪ್ಪಂದದಲ್ಲಿ ಒಂದು ವಿಶಿಷ್ಟ ಷರತ್ತನ್ನು ವಿಧಿಸಿದ್ದರು. ತಂಡಕ್ಕಾಗಿ ಆಡುವ ಪ್ರತಿ ವರ್ಷಕ್ಕೆ 0.75% ಮಾಲೀಕತ್ವದ ಪಾಲನ್ನು (Equity Share) ತಮಗೆ ನೀಡಬೇಕು ಎಂಬುದು ಅವರ ಬೇಡಿಕೆಯಾಗಿತ್ತು. 2008 ರಲ್ಲಿ ಮೊದಲ ಋತುವಿನಲ್ಲಿ ರಾಜಸ್ತಾನ ರಾಯಲ್ಸ್ ಪ್ರಶಸ್ತಿಯನ್ನು ಸಹ ಗೆದ್ದಿತ್ತುವಾರ್ನ್ ಒಟ್ಟು 4 ಸೀಸನ್ಗಳ ಕಾಲ ತಂಡಕ್ಕಾಗಿ ಆಡಿದ್ದರು. ನಂತರ ಅವರ ಒಟ್ಟು ಪಾಲು 3% ಕ್ಕೆ ಏರಿಕೆಯಾಯಿತು.ಆ ಸಮಯದಲ್ಲಿ ಅವರಿಗೆ ಪ್ರತಿ ಸೀಸನ್ಗೆ ಸುಮಾರು 2.34 ಕೋಟಿ ರೂಪಾಯಿ ಸಂಬಳ ನೀಡಲಾಗುತ್ತಿತ್ತು.
“ಅವರು ನನ್ನನ್ನು ನಾಯಕ ಮತ್ತು ಕೋಚ್ ಆಗಿ ಕೆಲಸ ಮಾಡಲು ಕೇಳಿದ್ದರು. ತಂಡವನ್ನು ನನ್ನದೇ ಶೈಲಿಯಲ್ಲಿ ಮುನ್ನಡೆಸುವ ಸಂಪೂರ್ಣ ಸ್ವಾತಂತ್ರ್ಯ ನನಗಿತ್ತು,” ಎಂದು ವಾರ್ನ್ ಹಿಂದೆ ದಿ ಹೆರಾಲ್ಡ್ ಸನ್ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು.
15,000 ಕೋಟಿಗೆ ಮಾರಾಟವಾದ ತಂಡ ; ಬದಲಾದ ಅದೃಷ್ಟ
2008ರಲ್ಲಿ ಮನೋಜ್ ಬದಲೆ ನೇತೃತ್ವದ ಎಮರ್ಜಿಂಗ್ ಮೀಡಿಯಾ ಈ ತಂಡವನ್ನು ಕೇವಲ USD 67 ಮಿಲಿಯನ್ಗೆ ಖರೀದಿಸಿತ್ತು. ಆದರೆ ಇತ್ತೀಚೆಗೆ, ಅಮೆರಿಕ ಮೂಲದ ಕಲ್ ಸೋಮನಿ ನೇತೃತ್ವದ ಕಂಪನಿಯು ರಾಜಸ್ಥಾನ್ ರಾಯಲ್ಸ್ ತಂಡವನ್ನು ಬರೋಬ್ಬರಿ 1.63 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು 15,290 ಕೋಟಿ ರೂಪಾಯಿ) ಮೊತ್ತಕ್ಕೆ ಖರೀದಿಸಿದೆ. ಈ ಬೃಹತ್ ಮೊತ್ತದ ಆಧಾರದ ಮೇಲೆ, ಶೇನ್ ವಾರ್ನ್ ಅವರ ಬಳಿ ಇದ್ದ 3% ಪಾಲಿನ ಮೌಲ್ಯವು ಈಗ ಸುಮಾರು ₹460 ಕೋಟಿಗಳಾಗಲಿದೆ.
ವಾರ್ನ್ ಅವರ ದೂರದೃಷ್ಟಿಯಿಂದಾಗಿ 18 ವರ್ಷಗಳ ಹಿಂದೆ ಅವರು ಹಾಕಿದ ಒಂದು ಸಹಿ ಇಂದು ಅವರ ಕುಟುಂಬಕ್ಕೆ ಆರ್ಥಿಕವಾಗಿ ಈಗ ಬಹಳಷ್ಟು ಭದ್ರತೆಯನ್ನು ಖಚಿತಪಡಿಸಿದೆ. ಐಪಿಎಲ್ 2026ರ ಸೀಸನ್ ಮುಕ್ತಾಯದ ನಂತರ ವಾರ್ನ್ ಕುಟುಂಬವು ಈ ಶೇರ್ ಅನ್ನು ಮಾರಾಟ ಮಾಡಿ ಹಣವನ್ನು ಪಡೆಯಲು ಅರ್ಹವಾಗಲಿದೆ. ಆದರೆ ಈ ಸಂಪೂರ್ಣ ವ್ಯವಹಾರಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅನುಮೋದನೆ ನೀಡಬೇಕಿದೆ.
ದುರದೃಷ್ಟವಶಾತ್, 2022ರಲ್ಲಿ ನಿಧನರಾದ ಶೇನ್ ವಾರ್ನ್ ಇಂದು ನಮ್ಮೊಂದಿಗಿಲ್ಲ. ಆದರೆ ಕ್ರಿಕೆಟ್ ಮೈದಾನದಲ್ಲಿ ಅಸಾಧ್ಯವಾದುದನ್ನು ಸಾಧ್ಯವಾಗಿಸುತ್ತಿದ್ದ ಈ ಮಾಂತ್ರಿಕ ಸ್ಪಿನ್ನರ್, ಮೈದಾನದ ಹೊರಗೂ ಅಷ್ಟೇ ಬುದ್ಧಿವಂತಿಕೆಯಿಂದ ತನ್ನ ಕುಟುಂಬದ ಭವಿಷ್ಯವನ್ನು ರೂಪಿಸಿ ಹೋಗಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ