ಭೀಕರ ರಸ್ತೆ ಅಪಘಾತ : ಲಾರಿ-ಬಸ್ ಡಿಕ್ಕಿ, 14 ಪ್ರಯಾಣಿಕರು ಸಜೀವ ದಹನ, 23 ಮಂದಿಗೆ ಗಾಯ

ಅಮರಾವತಿ : ಆಂಧ್ರಪ್ರದೇಶದ ಮಾರ್ಕಾಪುರಂ ಜಿಲ್ಲೆಯ ರಾಯವರಂ ಬಳಿ ಗುರುವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 14 ಜನರು ಸಜೀವ ದಹನವಾಗಿದ್ದು, 23 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಪ್ರಯಾಣಿಕರಿದ್ದ ಖಾಸಗಿ ಬಸ್ ಮತ್ತು ಟಿಪ್ಪರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಎರಡೂ ವಾಹನಗಳಲ್ಲಿ ಬೆಂಕಿ ಹೊತ್ತಿಕೊಂಡು ಈ ದುರಂತ ಸಂಭವಿಸಿದೆ.
ತೆಲಂಗಾಣದ ಜಗಿತ್ಯಾಲದಿಂದ ನೆಲ್ಲೂರು

ಜಿಲ್ಲೆಯ ಕಾಲಿಗಿರಿಗೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಸುಮಾರು 35 ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ. ಜಲ್ಲಿ ತುಂಬಿದ್ದ ಟಿಪ್ಪರ್ ಲಾರಿ-ಮತ್ತು ಬಸ್ ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿಯ ರಭಸಕ್ಕೆ ಬೆಂಕಿ ತಕ್ಷಣವೇ ಹರಡಿದ್ದು, ಇಡೀ ಬಸ್ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದೆ.
ಬಸ್ಸಿನ ಹಿಂಭಾಗದ ಸೀಟುಗಳಲ್ಲಿ ಕುಳಿತಿದ್ದ ಪ್ರಯಾಣಿಕರು ಹೊರಬರಲಾರದೆ ಬೆಂಕಿಯಲ್ಲಿ ಬೆಂದು ಮೃತಪಟ್ಟಿದ್ದಾರೆ.
ಮಾರ್ಕಾಪುರಂ ಪೊಲೀಸ್ ವರಿಷ್ಠಾಧಿಕಾರಿ (SP) ವಿ. ಹರ್ಷವರ್ಧನ ರಾಜು ಅವರು ಮಾಹಿತಿ ನೀಡಿ, “ಅಪಘಾತದಲ್ಲಿ 14 ಜನರು ಮೃತಪಟ್ಟಿದ್ದಾರೆ. ಚಾಲಕ ಸೇರಿದಂತೆ ಗಾಯಗೊಂಡ 23 ಜನರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ,” ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಸಿಜೆಪಿ ‘ಚಲೋ ಸಂಸತ್’ ಮೆರವಣಿಗೆಗೆ ತಡೆ: ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಪ್ರಯೋಗ, ಲಾಠಿ ಚಾರ್ಜ್‌

ಕೆಲವು ಮೃತದೇಹಗಳು ಇನ್ನೂ ಬಸ್ಸಿನೊಳಗೆ ಸಿಲುಕಿಕೊಂಡಿದ್ದು, ಅವುಗಳನ್ನು ಹೊರತೆಗೆಯಲು ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.
ಸಿಎಂ ಚಂದ್ರಾಬಾಬು ನಾಯ್ಡು ಸಂತಾಪ:
ಈ ಭೀಕರ ಘಟನೆಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಾಬಾಬು ನಾಯ್ಡು ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಅವರು, ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ, ಅಪಘಾತದ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement