
ಶ್ರೀನಗರ : ಶ್ರೀನಗರ-ಲೇಹ್ ಹೆದ್ದಾರಿಯ ಜೋಜಿಲಾ ಪಾಸ್ ಬಳಿ ಶುಕ್ರವಾರ ಸಂಭವಿಸಿದ ಭೀಕರ ಹಿಮಪಾತಕ್ಕೆ (Avalanche) ಕನಿಷ್ಠ ಏಳು ಜನರು ಮೃತಪಟ್ಟಿದ್ದು, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಹಿಮದ ರಾಶಿಯ ಅಡಿಯಲ್ಲಿ ಹಲವು ಪ್ರಯಾಣಿಕ ವಾಹನಗಳು ಸಿಲುಕಿಕೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ.
ಲಡಾಖ್ ಭಾಗದ ಜೋಜಿಲಾ ಪಾಸ್‌ನಲ್ಲಿ ಹಠಾತ್ ಹಿಮ ಕುಸಿತ ಉಂಟಾದ ಪರಿಣಾಮ, ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳ ಮೇಲೆ ಟನ್ ಗಟ್ಟಲೆ ಹಿಮ ಬಿದ್ದಿದೆ. ಘಟನೆಯ ಬೆನ್ನಲ್ಲೇ ಹೆದ್ದಾರಿಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಹಿಮ ತೆರವುಗೊಳಿಸಲು ಮತ್ತು ಸಿಲುಕಿರುವವರನ್ನು ರಕ್ಷಿಸಲು ಅಧಿಕಾರಿಗಳು ಬೃಹತ್ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ:
ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ಮತ್ತು ಪೊಲೀಸರ ತಂಡಗಳು ಸ್ಥಳದಲ್ಲಿ ಬೀಡುಬಿಟ್ಟಿವೆ. ಹಿಮದ ಅಡಿಯಲ್ಲಿ ಯಾರಾದರೂ ಸಿಲುಕಿದ್ದಾರೆಯೇ ಎಂದು ಪತ್ತೆ ಹಚ್ಚಲು ಅತ್ಯಾಧುನಿಕ ಉಪಕರಣಗಳೊಂದಿಗೆ ಶೋಧ ಕಾರ್ಯ ನಡೆಸಲಾಗುತ್ತಿದೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಸಾಮಾಜಿಕ ಜಾಲತಾಣ ‘X’ ನಲ್ಲಿ ಈ ದುರಂತವನ್ನು ಖಚಿತಪಡಿಸಿದ್ದಾರೆ. “ಜೋಜಿಲಾ ಪಾಸ್‌ನಲ್ಲಿ ಸಂಭವಿಸಿದ ಹಿಮಪಾತದಲ್ಲಿ 7 ಜನರು ಮೃತಪಟ್ಟಿರುವುದು ಮತ್ತು 5 ಜನರು ಗಾಯಗೊಂಡಿರುವುದು ತಿಳಿದು ತೀವ್ರ ಬೇಸರವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳಿಗೆ ಅಗತ್ಯವಿರುವ ಎಲ್ಲಾ ನೆರವು ನೀಡಲಾಗುತ್ತಿದೆ,” ಎಂದು ಅವರು ಬರೆದಿದ್ದಾರೆ.
ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ ಅವರು ಪರಿಸ್ಥಿತಿಯನ್ನು ಖುದ್ದಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, “ಕಾರ್ಗಿಲ್‌ನ ಜಿಲ್ಲಾಧಿಕಾರಿ (DC) ಮತ್ತು ಎಸ್‌ಎಸ್‌ಪಿ ಅವರಿಗೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಲು ಸೂಚಿಸಿದ್ದೇನೆ. ವಿಪತ್ತು ಪರಿಹಾರ ಪಡೆಗಳು ಮತ್ತು ಬಿಆರ್‌ಒ (BRO) ಸೇರಿದಂತೆ ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ,” ಎಂದು ತಿಳಿಸಿದ್ದಾರೆ.
https://x.com/WeatherMonitors/status/2037555638608503108
https://x.com/ChaudharyParvez/status/2037570568686649505
ಜೋಜಿಲಾ ಪಾಸ್ ಶ್ರೀನಗರ ಮತ್ತು ಲೇಹ್ ನಡುವಿನ 434 ಕಿಮೀ ಉದ್ದದ ಈ ರಸ್ತೆಯು ಲಡಾಖ್ ಅನ್ನು ಸಂಪರ್ಕಿಸುವ ಏಕೈಕ ಪ್ರಮುಖ ಮಾರ್ಗವಾಗಿದೆ. ಇದು ಸಮುದ್ರ ಮಟ್ಟದಿಂದ 11,575 ಅಡಿ ಎತ್ತರದಲ್ಲಿದೆ. ಹವಾಮಾನ ವೈಪರೀತ್ಯ ಮತ್ತು ಭಾರಿ ಹಿಮಪಾತದಿಂದಾಗಿ ಚಳಿಗಾಲದಲ್ಲಿ ಈ ರಸ್ತೆಯನ್ನು ಪ್ರತಿ ವರ್ಷ ಮುಚ್ಚಲಾಗುತ್ತದೆ.
ಈ ಹವಾಮಾನದ ಸವಾಲುಗಳನ್ನು ಎದುರಿಸಲು ಪ್ರಸ್ತುತ ಜೋಜಿಲಾ ಪಾಸ್‌ನಲ್ಲಿ ಬೃಹತ್ ಸುರಂಗ ಮಾರ್ಗದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದು 14.2 ಕಿಮೀ ಉದ್ದದ, 9.5 ಮೀಟರ್ ಅಗಲದ ಸಿಂಗಲ್ ಟ್ಯೂಬ್ ಸುರಂಗವಾಗಿದೆ. ಸುಮಾರು 12,000 ಅಡಿ ಎತ್ತರದಲ್ಲಿ ನಿರ್ಮಾಣವಾಗುತ್ತಿರುವ ಇದು ಪೂರ್ಣಗೊಂಡರೆ ಏಷ್ಯಾದಲ್ಲೇ ಅತಿ ಉದ್ದದ ಸುರಂಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಇದು ಲಡಾಖ್ ಮತ್ತು ಭಾರತದ ಇತರ ಭಾಗಗಳ ನಡುವೆ ವರ್ಷದ 365 ದಿನಗಳೂ ಸುರಕ್ಷಿತ ಸಂಪರ್ಕ ಕಲ್ಪಿಸಲಿದೆ.



ನಿಮ್ಮ ಕಾಮೆಂಟ್ ಬರೆಯಿರಿ