ಕೆಬಿಸಿಯಲ್ಲಿ 50 ಲಕ್ಷ ರೂ. ಗೆದ್ದಿದ್ದ ಮಹಿಳಾ ಅಧಿಕಾರಿ ಭ್ರಷ್ಟಾಚಾರ ಪ್ರಕರಣದಲ್ಲಿ ಅರೆಸ್ಟ್

ಶಿಯೋಪುರ: ಖ್ಯಾತ ಟಿವಿ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್‌ ಪತಿ’ (KBC)ಯಲ್ಲಿ 50 ಲಕ್ಷ ರೂಪಾಯಿ ಗೆದ್ದು ದೇಶಾದ್ಯಂತ ಸುದ್ದಿಯಾಗಿದ್ದ ಮಹಿಳಾ ತಹಶೀಲ್ದಾರ ಅಮಿತಾ ಸಿಂಗ್ ತೋಮರ್ ಅವರನ್ನು ಇದೀಗ 2.5 ಕೋಟಿ ರೂಪಾಯಿಗಳ ಪ್ರವಾಹ ಪರಿಹಾರ ಹಗರಣದ ಆರೋಪದ ಮೇಲೆ ಬಂಧಿಸಲಾಗಿದೆ. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಪೊಲೀಸರು  ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
 2021ರಲ್ಲಿ ಶಿಯೋಪುರ ಜಿಲ್ಲೆಯ ಬರೋಡಾ ತಹಶೀಲ್‌ನಲ್ಲಿ ಸಂಭವಿಸಿದ ಪ್ರವಾಹದ ವೇಳೆ, ನಕಲಿ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುವ ಮೂಲಕ ಸುಮಾರು 2.5 ಕೋಟಿ ರೂಪಾಯಿ ಸರ್ಕಾರಿ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಇವರ ಮೇಲಿದೆ. ಗ್ವಾಲಿಯರ್‌ನ ಚಂದ್ರವದನಿ ನಾಕಾದಲ್ಲಿರುವ ಅಮಿತಾ ಅವರ ನಿವಾಸಕ್ಕೆ ತೆರಳಿದ ಬರೋಡಾ ಎಸ್‌ಡಿಒಪಿ (SDOP) ಅವನೀತ ಶರ್ಮಾ ನೇತೃತ್ವದ ತಂಡ ಇವರನ್ನು ಗುರುವಾರ ಬಂಧಿಸಿದೆ.
ಬಂಧನಕ್ಕೂ ಮುನ್ನ, ಅಂದರೆ ಬುಧವಾರವಷ್ಟೇ ವಿಜಯಪುರದ ತಹಶೀಲ್ದಾರ ಆಗಿದ್ದ ಅಮಿತಾ ಅವರನ್ನು ಜಿಲ್ಲಾಧಿಕಾರಿ ಅರ್ಪಿತ್ ವರ್ಮಾ ಅವರು ಹುದ್ದೆಯಿಂದ ತೆರವುಗೊಳಿಸಿದ್ದರು.
ಅಮಿತಾ ಸಿಂಗ್ ಅವರು ಬಂಧನದಿಂದ ತಪ್ಪಿಸಿಕೊಳ್ಳಲು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಮೇಲಿರುವ ಆರೋಪಗಳ ಗಂಭೀರತೆಯನ್ನು ಪರಿಗಣಿಸಿದ ನ್ಯಾಯಾಲಯಗಳು ಅರ್ಜಿಗಳನ್ನು ತಿರಸ್ಕರಿಸಿದ್ದವು. ಬಂಧನದ ನಂತರ ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸದ್ಯ ನೆರೆಯ ಶಿವಪುರಿ ಜೈಲಿನಲ್ಲಿ ಇರಿಸಲಾಗಿದೆ.
ಈ ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 22 ಪಟ್ವಾರಿಗಳು (ಕಂದಾಯ ಅಧಿಕಾರಿಗಳು) ಮತ್ತು ಒಬ್ಬ ತಹಶೀಲ್ದಾರ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ.
ಈ ಪ್ರಕರಣದಲ್ಲಿ ಒಟ್ಟು 110 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿದ್ದು, ಬರೋಡಾ ಎಸ್‌ಡಿಒಪಿ ಈ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದ್ದಾರೆ.
ಬಂಧನಕ್ಕೂ ಮುನ್ನ ಅಮಿತಾ ಅವರು ಕರ್ತವ್ಯಕ್ಕೆ ಗೈರುಹಾಜರಾಗಿದ್ದರು. ತನಿಖೆ ಚುರುಕುಗೊಳಿಸಿದ ಪೊಲೀಸರು ಅವರ ಇರುವಿಕೆಯನ್ನು ಪತ್ತೆಹಚ್ಚಿ ಗ್ವಾಲಿಯರ್‌ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರ ಅಗರ್ವಾಲ್ ತಿಳಿಸಿದ್ದಾರೆ.
ಅಮಿತಾ ಸಿಂಗ್ ಅವರು ಅಮಿತಾಬ್ ಬಚ್ಚನ್ ನಡೆಸಿಕೊಡುವ ‘ಕೆಬಿಸಿ’ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ 50 ಲಕ್ಷ ರೂಪಾಯಿ ಬಹುಮಾನ ಗೆಲ್ಲುವ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement