ನೇಪಾಳ ಮಾಜಿ ಪ್ರಧಾನಿ ಕೆ.ಪಿ. ಓಲಿ ಬಂಧನ: ಪ್ರಧಾನಿಯಾಗಿ ಬಾಲೇಂದ್ರ ಶಾ ಪದಗ್ರಹಣದ ಮರುದಿನವೇ ಕ್ರಮ

ಕಠ್ಮಂಡು: ನೇಪಾಳದ ರಾಜಕೀಯದಲ್ಲಿ ಶನಿವಾರ ಬೆಳಗ್ಗೆ ಭಾರಿ ಸಂಚಲನ ಉಂಟಾಗಿದ್ದು, ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. 2025ರ ಸೆಪ್ಟೆಂಬರ್‌ನಲ್ಲಿ ನಡೆದ ‘ಜೆನ್-ಜಿ’ (Gen Z) ಪ್ರತಿಭಟನೆಯನ್ನು ಹಿಂಸಾತ್ಮಕವಾಗಿ ಹತ್ತಿಕ್ಕಿದ ಮತ್ತು ಆ ಸಂದರ್ಭದಲ್ಲಿ ನಡೆದ ಸಾವು-ನೋವುಗಳಿಗೆ ಕಾರಣರಾದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ಗಾಯಕ-ರಾಜಕಾರಣಿ ಬಾಲೇಂದ್ರ ಶಾ ಅವರು ನೇಪಾಳದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಈ ಬೆಳವಣಿಗೆ ನಡೆದಿದೆ.
ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಮತ್ತು ನೇಪಾಳಿ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಗೃಹ ಸಚಿವ ರಮೇಶ ಲೇಖಕ ಅವರನ್ನು ಭಕ್ತಪುರದಲ್ಲಿರುವ ಅವರ ನಿವಾಸಗಳಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
 2025ರ ಸೆಪ್ಟೆಂಬರ್‌ನಲ್ಲಿ ಭ್ರಷ್ಟಾಚಾರ, ನಿರುದ್ಯೋಗ ಮತ್ತು ರಾಜಕೀಯ ಅಸ್ಥಿರತೆಯ ವಿರುದ್ಧ ಯುವಜನತೆ ‘ಜೆನ್-ಜಿ ಕ್ರಾಂತಿ’ ಹೆಸರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ವೇಳೆ ನಡೆದ ಪೊಲೀಸ್ ದಮನಕಾಂಡದಲ್ಲಿ 76 ಜನರು ಮೃತಪಟ್ಟು, 2,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದ ಕುರಿತು ತನಿಖೆ ನಡೆಸಿದ ಉನ್ನತ ಮಟ್ಟದ ಆಯೋಗವು, ನಾಲ್ಕು ಬಾರಿ ನೇಪಾಳದ  ಪ್ರಧಾನಿಯಾಗಿದ್ದ ಮತ್ತು ನೇಪಾಳ ಕಮ್ಯುನಿಸ್ಟ್ ಪಕ್ಷದ (ಯುನೈಟೆಡ್ ಮಾರ್ಕ್ಸ್ವಾದಿ-ಲೆನಿನಿಸ್ಟ್) ನಾಯಕ ಓಲಿ ಅವರ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸು ಮಾಡಿದೆ. ಪ್ರತಿಭಟನೆಯ ಮೊದಲ ದಿನವೇ 19 ಯುವಕರ ಸಾವಿಗೆ ಕಾರಣವಾದ ಗುಂಡಿನ ದಾಳಿಯನ್ನು ತಡೆಯಲು ವಿಫಲರಾದ ಕಾರಣಕ್ಕೆ 74 ವರ್ಷದ ಓಲಿ ಅವರೇ ಜವಾಬ್ದಾರರು ಎಂದು ವರದಿ ತಿಳಿಸಿದೆ.
ಒಂದು ವೇಳೆ ನ್ಯಾಯಾಲಯದಲ್ಲಿ ಅಪರಾಧ ಸಾಬೀತಾದಲ್ಲಿ, ಓಲಿ ಮತ್ತು ರಮೇಶ್ ಲೇಖಕ ಅವರಿಗೆ ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.
ತಮ್ಮ ಬಂಧನ ಮತ್ತು ತನಿಖಾ ವರದಿಯನ್ನು ಕೆ.ಪಿ. ಶರ್ಮಾ ಓಲಿ ತೀವ್ರವಾಗಿ ಖಂಡಿಸಿದ್ದಾರೆ. “ಈ ವರದಿಯು ನಿರ್ಲಕ್ಷ್ಯದಿಂದ ಕೂಡಿದೆ, ಇದು ನನ್ನ ವ್ಯಕ್ತಿತ್ವ ಹರಣ ಮತ್ತು ದ್ವೇಷದ ರಾಜಕಾರಣದ ಪ್ರತಿಫಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾರ್ಚ್ 5ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಓಲಿ ಅವರು ತಮ್ಮ ಭದ್ರಕೋಟೆಯಾಗಿದ್ದ ಝಾಪಾ-5 ಕ್ಷೇತ್ರದಲ್ಲಿ ರಾಷ್ಟ್ರೀಯ ಸ್ವತಂತ್ರ ಪಾರ್ಟಿಯ (RSP) ಬಾಲೇಂದ್ರ ಶಾ ವಿರುದ್ಧ ಹೀನಾಯ ಸೋಲನ್ನು ಅನುಭವಿಸಿದ್ದರು. ಸದ್ಯ ಬಾಲೇಂದ್ರ ಶಾ ದೇಶದ ಚುಕ್ಕಾಣಿ ಹಿಡಿದ ಬೆನ್ನಲ್ಲೇ ಈ ಕಾನೂನು ಕ್ರಮಗಳು ಜರುಗಿವೆ.
ಮಾಜಿ ಪೊಲೀಸ್ ಮುಖ್ಯಸ್ಥ ಚಂದ್ರಕುಬರ ಖಾಪುಂಗ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲು ಸಮಿತಿ ಶಿಫಾರಸು ಮಾಡಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement