ಖ್ಯಾತ ಉದ್ಯಮಿ, ರೇಮಂಡ್ ಸಮೂಹ ಸಂಸ್ಥೆಗಳ ಮಾಜಿ ಅಧ್ಯಕ್ಷ ವಿಜಯಪತ್ ಸಿಂಘಾನಿಯಾ ನಿಧನ

ಮುಂಬೈ: ಭಾರತದ ಖ್ಯಾತ ಉದ್ಯಮಿ, ರೇಮಂಡ್ ಗ್ರೂಪ್‌ನ ಮಾಜಿ ಅಧ್ಯಕ್ಷ ಮತ್ತು ಪದ್ಮಭೂಷಣ ಪುರಸ್ಕೃತ ವಿಜಯಪತ್ ಸಿಂಘಾನಿಯಾ ಅವರು ಶನಿವಾರ ಸಂಜೆ ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಉದ್ಯಮ, ವಿಮಾನಯಾನ ಮತ್ತು ಜವಳಿ ಉದ್ಯಮಕ್ಕೆ ಅಪಾರ ಕೊಡುಗೆ ನೀಡಿದ್ದ ಅವರು, ದಾರ್ಶನಿಕ ಉದ್ಯಮಿ ಮತ್ತು ಲೋಕೋಪಕಾರಿ ಎಂದು ಗುರುತಿಸಿಕೊಂಡಿದ್ದರು.
ಅವರ ಪುತ್ರ ಹಾಗೂ ರೇಮಂಡ್ ಗ್ರೂಪ್‌ನ ಅಧ್ಯಕ್ಷ ಗೌತಮ ಸಿಂಘಾನಿಯಾ ಅವರು ಎಕ್ಸ್ (ಟ್ವಿಟರ್) ಮೂಲಕ ಈ ಸುದ್ದಿಯನ್ನು ಖಚಿತಪಡಿಸಿದ್ದು, ಓಂ ಶಾಂತಿ” ಎಂದು ಸಂತಾಪ ಸೂಚಿಸಿದ್ದಾರೆ.
ಕುಟುಂಬದ ಪ್ರಕಟಣೆಯ ಪ್ರಕಾರ, ಭಾನುವಾರ (ಮಾರ್ಚ್ 29, 2026) ಮಧ್ಯಾಹ್ನ 3:00 ನಂತರ ಚಂದನವಾಡಿ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ.

ವಿಜಯಪತ್ ಸಿಂಘಾನಿಯಾ: ಒಂದು ಸ್ಮರಣೀಯ ಪಯಣ
1930 ರ ದಶಕದ ಅಂತ್ಯದಲ್ಲಿ ಜನಿಸಿದ ಇವರು, ರೇಮಂಡ್ ಗ್ರೂಪ್ ಅನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು 1980ರಲ್ಲಿ ರೇಮೆಂಡ್ ಸಂಸ್ಥೆಯ ಚುಕ್ಕಾಣಿ ಹಿಡಿದಿದ್ದರು. ಸೂಟಿಂಗ್ ಫ್ಯಾಬ್ರಿಕ್ಸ್ ಮತ್ತು ಪುರುಷರ ಉಡುಪುಗಳ ಕ್ಷೇತ್ರದಲ್ಲಿ ರೇಮಂಡ್ ಅನ್ನು ಅಗ್ರಸ್ಥಾನಕ್ಕೇರಿಸಿದರು. ಸಿಂಥೆಟಿಕ್ ಫ್ಯಾಬ್ರಿಕ್ಸ್, ಡೆನಿಮ್, ಉಕ್ಕು, ಸಿಮೆಂಟ್, ಕೈಗಾರಿಕಾ ಉತ್ಪನ್ನ ಇತ್ಯಾದಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಇವತ್ತು ಅವರ ಉದ್ಯಮ ವಿಸ್ತರಿಸಿದೆ.
ವಿಜಯಪತ್ ಸಿಂಘಾನಿಯಾ ಅವರು ಕೇವಲ ಉದ್ಯಮಿಯಷ್ಟೇ ಆಗಿರಲಿಲ್ಲ, ನುರಿತ ಪೈಲಟ್ ಕೂಡ ಆಗಿದ್ದರು. ಅವರು 5,000ಕ್ಕೂ ಅಧಿಕ ಗಂಟೆಗಳ ಫ್ಲೈಯಿಂಗ್ ಮಾಡಿದ್ದಾರೆ. 67ರ ವಯಸ್ಸಿನಲ್ಲಿ ಹಾಟ್ ಏರ್ ಬಲೂನ್​ನಲ್ಲಿ 69,000 ಅಡಿ ಎತ್ತರಕ್ಕೆ ಹೋಗಿ ವಿಶ್ವದಾಖಲೆ ಬರೆದಿದ್ದಾರೆ. 1988ರಲ್ಲಿ ಲಂಡನ್​ನಿಂದ ದೆಹಲಿವರೆಗೆ ಒಬ್ಬರೇ ಮೈಕ್ರೋಲೈಟ್ ಫ್ಲೈಟ್​ನಲ್ಲಿ 23 ದಿನದಲ್ಲಿ ಪ್ರಯಾಣಿಸಿದ್ದಾರೆ. ಇವರ ಸಾಧನೆಯನ್ನು ಗೌರವಿಸಿ ಭಾರತೀಯ ವಾಯುಪಡೆಯು ಇವರಿಗೆ ಗೌರವಾನ್ವಿತ ‘ಏರ್ ಕಮೋಡೋರ್’ ಪದವಿ ನೀಡಿತ್ತು.

ಇವರು ಮುಂಬೈನ ‘ಶೆರಿಫ್’ ಆಗಿಯೂ ಸೇವೆ ಸಲ್ಲಿಸಿದ್ದರು. ಸಮಾಜ ಮತ್ತು ಉದ್ಯಮ ರಂಗಕ್ಕೆ ಇವರು ನೀಡಿದ ಅಪ್ರತಿಮ ಕೊಡುಗೆಗಾಗಿ ಭಾರತ ಸರ್ಕಾರ ಇವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪುರಸ್ಕಾರ ನೀಡಿ ಗೌರವಿಸಿತ್ತು.
2000ನೇ ಇಸವಿಯವರೆಗೆ ರೇಮಂಡ್ ಗ್ರೂಪ್ ಅಧ್ಯಕ್ಷರಾಗಿದ್ದ ಇವರು, ನಂತರ ತಮ್ಮ ಜವಾಬ್ದಾರಿಯನ್ನು ಪುತ್ರ ಗೌತಮ ಸಿಂಘಾನಿಯಾ ಅವರಿಗೆ ಹಸ್ತಾಂತರಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ತಂದೆ-ಮಗನ ನಡುವೆ ಕಾನೂನು ಸಂಘರ್ಷಗಳು ನಡೆದಿದ್ದರೂ, ನಂತರದ ದಿನಗಳಲ್ಲಿ ಅದೆಲ್ಲವೂ ಸುಖಾಂತ್ಯಗೊಂಡಿತ್ತು.

ಪ್ರಮುಖ ಸುದ್ದಿ :-   ತೃಣಮೂಲ ಬಂಡಾಯ ಸಂಸದರನ್ನು ಯಾಕೆ ಆಹ್ವಾನಿಸಿದ್ದೀರಿ ? : ಸರ್ವಪಕ್ಷ ಸಭೆಗೆ ಕೆಲಕಾಲ ಬಹಿಷ್ಕರಿಸಿದ ವಿಪಕ್ಷಗಳು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement