
ವಿಶಾಖಪಟ್ಟಣಂ: ದೇಶವನ್ನೇ ಬೆಚ್ಚಿಬೀಳಿಸಿದ್ದ ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಮಾದರಿಯಲ್ಲೇ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಭೀಕರ ಘಟನೆಯೊಂದು ನಡೆದಿದೆ. ಪತ್ನಿ ತವರಿಗೆ ಹೋದ ಸಮಯದಲ್ಲಿ ಪ್ರೇಯಸಿಯನ್ನು ಮನೆಗೆ ಕರೆಸಿಕೊಂಡಿದ್ದ ನೌಕಾಪಡೆ ಅಧಿಕಾರಿಯೊಬ್ಬ ಆಕೆಯನ್ನು ಹತ್ಯೆ ಮಾಡಿ, ಬಳಿಕ ಆಕೆಯ ದೇಹವನ್ನು ಹಲವು ಭಾಗಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಅಡಗಿಸಿಟ್ಟಿರುವ ಘೋರ ಕೃತ್ಯ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಯನ್ನು ಐಎನ್ಎಸ್ ದೇಗಾದಲ್ಲಿ (INS Dega) ಕಾರ್ಯನಿರ್ವಹಿಸುತ್ತಿರುವ 30 ವರ್ಷದ ನೌಕಾಪಡೆ ಅಧಿಕಾರಿ ಚಿಂತಡ ರವೀಂದ್ರ ಎಂದು ಗುರುತಿಸಲಾಗಿದೆ. ಈತ 2021ರಲ್ಲಿ ‘ಮಿಂಗಲ್’ ಎಂಬ ಡೇಟಿಂಗ್ ಆ್ಯಪ್ ಮೂಲಕ 31 ವರ್ಷದ ಪೊಲಿಪಲ್ಲಿ ಮೌನಿಕಾ ಎಂಬಾಕೆಯ ಪರಿಚಯ ಮಾಡಿಕೊಂಡಿದ್ದ. ಇಬ್ಬರ ನಡುವೆ ಪ್ರೇಮ ಸಂಬಂಧ ಬೆಳೆದಿತ್ತು.
ನಡೆದಿದ್ದೇನು?
ಇತ್ತೀಚೆಗಷ್ಟೇ ರವೀಂದ್ರನ ಪತ್ನಿ ವಿಜಯನಗರಂನಲ್ಲಿರುವ ತನ್ನ ತವರು ಮನೆಗೆ ತೆರಳಿದ್ದರು. ಪತ್ನಿ ಮನೆಯಲ್ಲಿ ಇಲ್ಲದ್ದರಿಂದ ರವೀಂದ್ರ, ಭಾನುವಾರ ಮಧ್ಯಾಹ್ನ ಮೌನಿಕಾಳನ್ನು ತನ್ನ ಮನೆಗೆ ಕರೆಸಿಕೊಂಡಿದ್ದ. ಸಂಜೆ ವೇಳೆ ಇಬ್ಬರ ನಡುವೆ ಹಣಕಾಸಿನ ವಿಚಾರವಾಗಿ ತೀವ್ರ ಜಗಳ ನಡೆದಿದೆ ಎನ್ನಲಾಗಿದೆ. ಈ ವೇಳೆ ಆಕ್ರೋಶಗೊಂಡ ರವೀಂದ್ರನು ಮೌನಿಕಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಲು ಮುಂದಾದ ಆರೋಪಿಯು, ಆನ್‌ಲೈನ್ ಡೆಲಿವರಿ ಆ್ಯಪ್ ಮೂಲಕ ಚಾಕುವನ್ನು ಆರ್ಡರ್ ಮಾಡಿ ತರಿಸಿಕೊಂಡಿದ್ದಾನೆ. ಬಳಿಕ ಮೌನಿಕಾಳ ದೇಹವನ್ನು ತಲೆ, ಕೈ, ಕಾಲು ಮತ್ತು ದೇಹದ ಮಧ್ಯಭಾಗವನ್ನು (Torso) ಹಲವು ತುಂಡುಗಳಾಗಿ ಕತ್ತರಿಸಿದ್ದಾನೆ.
ಕಾಲು ಮತ್ತು ಸೊಂಟದ ಭಾಗವನ್ನು ಟ್ರಾಲಿ ಬ್ಯಾಗ್‌ನಲ್ಲಿ ತುಂಬಿದ್ದ. ಹಾಗೂ ದೇಹದ ಮಧ್ಯಭಾಗವನ್ನು ಮನೆಯಲ್ಲಿದ್ದ ಫ್ರಿಡ್ಜ್‌ನಲ್ಲಿ ಇಟ್ಟಿದ್ದ.
ತಲೆ ಮತ್ತು ಕೈಗಳನ್ನು ಬೇರೊಂದು ಸ್ಥಳಕ್ಕೆ ಕೊಂಡೊಯ್ದು ಸುಟ್ಟು ಹಾಕಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಪೊಲೀಸರ ಮುಂದೆ ಶರಣಾದ ಆರೋಪಿ
ಈ ಭೀಕರ ಕೃತ್ಯವೆಸಗಿದ ಬಳಿಕ ರವೀಂದ್ರ ತಾನೇ ಪೊಲೀಸ್ ಠಾಣೆಗೆ ನಡೆದುಕೊಂಡು ಹೋಗಿ ಶರಣಾಗಿದ್ದಾನೆ. ಮೌನಿಕಾ ತನ್ನಿಂದ 3.5 ಲಕ್ಷ ರೂಪಾಯಿ ಹಣ ಪಡೆದಿದ್ದಳು ಮತ್ತು ಸಂಬಂಧದ ವಿಷಯವನ್ನು ಪತ್ನಿಗೆ ತಿಳಿಸುವುದಾಗಿ ಬೆದರಿಕೆ ಹಾಕುತ್ತಿದ್ದಳು. ಈ ಕಿರುಕುಳ ತಾಳಲಾರದೆ ತಾನು ಕೊಲೆ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. 2024ರಲ್ಲಿ ರವೀಂದ್ರ ಮದುವೆಯಾದ ನಂತರ ಮೌನಿಕಾ ಹತ್ಯೆಯಾದ ದಿನದಂದು ನಡೆದ ಜಗಳ ಸೇರಿದಂತೆ ಇಬ್ಬರ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು ಎಂದು ಅಧಿಕಾರಿ ತಿಳಿಸಿದ್ದಾರೆ.
ಪೊಲೀಸರು ರವೀಂದ್ರನ ಮನೆಗೆ ಬಂದು ಶೋಧ ನಡೆಸಿದಾಗ ಫ್ರಿಡ್ಜ್‌ನಲ್ಲಿ ದೇಹದ ಭಾಗಗಳು ಪತ್ತೆಯಾಗಿವೆ. ಆದರೆ ಮೌನಿಕಾಳ ತಲೆ ಇನ್ನೂ ಪತ್ತೆಯಾಗಿಲ್ಲ. ನಾಪತ್ತೆಯಾಗಿರುವ ದೇಹದ ಭಾಗಗಳಿಗಾಗಿ ವಿಶೇಷ ಪೊಲೀಸ್ ತಂಡ ಹುಡುಕಾಟ ನಡೆಸುತ್ತಿದೆ. ಆರೋಪಿಯ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.



ನಿಮ್ಮ ಕಾಮೆಂಟ್ ಬರೆಯಿರಿ