ಮೈಸೂರು : ಆಟವಾಡುತ್ತಿದ್ದ ಸಂದರ್ಭದಲ್ಲಿ ಅಕಸ್ಮಾತ್ ಆಗಿ ಒಣಗಿದ ದಾಸವಾಳದ ಹೂವನ್ನು ನುಂಗಿದ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡಹೆಜ್ಜೂರು ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ದೊಡ್ಡಹೆಜ್ಜೂರಿನ ಸುದರ್ಶನ ಮತ್ತು ನವ್ಯ ದಂಪತಿಯ ಎರಡನೇ ಪುತ್ರ ಚಿನ್ಮಯಿಗೌಡ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ. ಮಗು ತನ್ನ ಅಣ್ಣನೊಂದಿಗೆ ಮನೆಯ ಹೊಸಲಿನಲ್ಲಿ ಆಟವಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಅಲ್ಲಿ ಇರಿಸಲಾಗಿದ್ದ ದಾಸವಾಳದ ಹೂವಿನ ತುಂಡನ್ನು ಮಗು ಬಾಯಿಗೆ ಹಾಕಿಕೊಂಡಿದೆ. ತನ್ನ ಅಣ್ಣ ಅದನ್ನು ಕಿತ್ತುಕೊಳ್ಳುತ್ತಾನೆಂಬ ಭಯದಿಂದ ಮಗು ಒಣಗಿದ ಹೂವನ್ನು ನುಂಗಿದ್ದರಿಂದ ಅದು ಗಂಟಲಿನಲ್ಲಿ ಸಿಲುಕಿ ಮಗುವಿಗೆ ಉಸಿರಾಟದ ತೊಂದರೆ ಉಂಟಾಯಿತು. ತಕ್ಷಣವೇ ಹನಗೋಡಿನ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ ಎಂದು ಹೇಳಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ