ಚಂಡೀಗಢದ ಪಂಜಾಬ್ ಬಿಜೆಪಿ ಕಚೇರಿ ಬಳಿ ಸ್ಫೋಟ

ಚಂಡೀಗಢ: ಚಂಡೀಗಢದ ಸೆಕ್ಟರ್ 37ರಲ್ಲಿರುವ ಪಂಜಾಬಿನ ಬಿಜೆಪಿ ರಾಜ್ಯ ಕಚೇರಿಯ ಪಾರ್ಕಿಂಗ್ ಪ್ರದೇಶದಲ್ಲಿ ಬುಧವಾರ ಸಂಜೆ ಸ್ಫೋಟ ಸಂಭವಿಸಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಸಾವು-ನೋವು ಅಥವಾ ಗಾಯಗಳಾದ ಬಗ್ಗೆ ವರದಿಯಾಗಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ, ಇಬ್ಬರು ವ್ಯಕ್ತಿಗಳು ಈ ಕೃತ್ಯದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಒಬ್ಬ ವ್ಯಕ್ತಿ ಕೈಯಲ್ಲಿ ಹೆಲ್ಮೆಟ್ ಹಿಡಿದಿದ್ದರೆ, ಮತ್ತೊಬ್ಬ ವಿಡಿಯೋ ಚಿತ್ರೀಕರಿಸುತ್ತಿದ್ದಾನೆ. ಈ ವೇಳೆ ಪ್ಲಾಸ್ಟಿಕ್‌ನಿಂದ ಮಾಡಿದ ಗ್ರೆನೇಡ್ ಮಾದರಿಯ ವಸ್ತುವನ್ನು ಕಚೇರಿಯ ಆವರಣಕ್ಕೆ ಎಸೆಯಲಾಗಿದೆ.
ಆದರೆ, ಸ್ಫೋಟಕವನ್ನು ಎಸೆದ ಜಾಗವು ಸಿಸಿಟಿವಿ ಕ್ಯಾಮೆರಾಗಳ ಕಣ್ಣಿಗೆ ಬೀಳದ ‘ಬ್ಲೈಂಡ್ ಸ್ಪಾಟ್’ (Blind spot) ನಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೂ, ಕಚೇರಿಯ ಮುಂದಿರುವ ಪೆಟ್ರೋಲ್ ಬಂಕ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅದರಲ್ಲಿ ವ್ಯಕ್ತಿಯೊಬ್ಬ ಓಡುತ್ತಿರುವುದು ಪತ್ತೆಯಾಗಿದೆ. ಈತನೇ ಸ್ಫೋಟಕ ಎಸೆದ ಆರೋಪಿ ಇರಬಹುದು ಎಂದು ಶಂಕಿಸಲಾಗಿದೆ.

ಪೊಲೀಸ್ ಅಧಿಕಾರಿಗಳ ಹೇಳಿಕೆ
ಘಟನೆಯ ಬಗ್ಗೆ ಮಾಹಿತಿ ನೀಡಿದ ಚಂಡೀಗಢ ಎಸ್‌ಎಸ್‌ಪಿ (SSP) ಕನ್ವರದೀಪ್ ಕೌರ್ ಅವರು, ಸಂಜೆ ಸುಮಾರು 5 ಗಂಟೆಗೆ ಬಿಜೆಪಿ ಕಚೇರಿ ಬಳಿ ಸ್ಫೋಟದ ಸದ್ದು ಕೇಳಿಬಂದಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಇದು ಸಣ್ಣ ಪ್ರಮಾಣದ ಮತ್ತು ಕಚ್ಚಾ ಮಾದರಿಯ (Crude type) ಸ್ಫೋಟಕವಾಗಿದೆ. ಇದು ತಾಂತ್ರಿಕವಾಗಿ ಅತ್ಯಾಧುನಿಕವಾದ ಸ್ಫೋಟಕವಲ್ಲ ಎಂದು ಕಂಡುಬಂದಿದೆ. ಘಟನಾ ಸ್ಥಳಕ್ಕೆ ಚಂಡೀಗಢ ಪೊಲೀಸರು, ಕ್ರೈಂ ಬ್ರಾಂಚ್, ಕ್ರೈಂ ಸೆಲ್ ತಂಡಗಳ ಜೊತೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯದ (CFSL) ತಂಡಗಳು ಭೇಟಿ ನೀಡಿ ತನಿಖೆ ಆರಂಭಿಸಿವೆ.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

ವಿಧಿವಿಜ್ಞಾನ ತಜ್ಞರು ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿದ್ದು, ಸ್ಫೋಟಕ್ಕೆ ಬಳಸಲಾದ ವಸ್ತುಗಳ ಬಗ್ಗೆ ಹೆಚ್ಚಿನ ಪರೀಕ್ಷೆ ನಡೆಸುತ್ತಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಬಿಜೆಪಿ ಕಚೇರಿಯ ಸುತ್ತಮುತ್ತ ಕೇಂದ್ರೀಯ ಮೀಸಲು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಮತ್ತು ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಪ್ರಸ್ತುತ ಇಡೀ ಪ್ರದೇಶವು ಪೊಲೀಸರ ಕಣ್ಗಾವಲಿನಲ್ಲಿದ್ದು, ತಪ್ಪಿತಸ್ಥರನ್ನು ಪತ್ತೆಹಚ್ಚಲು ತೀವ್ರ ಶೋಧ ಕಾರ್ಯ ನಡೆಯುತ್ತಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement