ಕಲಬುರಗಿಯಲ್ಲಿ ಮಾಜಿ ಸಚಿವರ ಸಂಬಂಧಿಯ ಭೀಕರ ಕೊಲೆ

ಕಲಬುರಗಿ: ನಗರದ ಹಳೇ ಜೇವರ್ಗಿ ರಸ್ತೆಯ ಪಿ ಅಂಡ್‌ ಟಿ ಕಾಲೊನಿಯಲ್ಲಿ ಗುರುವಾರ ರಾತ್ರಿ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ಅನಿಲ ರಾಠೋಡ ಎಂದು ಗುರುತಿಸಲಾಗಿದೆ. ಅನಿಲ ರಾಠೋಡ ಅವರು ವೆಂಕಟೇಶ್ವರ ಕಾಂಪ್ಲೆಕ್ಸ್‌ನಲ್ಲಿರುವ ತಮ್ಮ ಕಚೇರಿಯಲ್ಲಿದ್ದಾಗ, ಆಟೋದಲ್ಲಿ ಬಂದ ಮೂವರು ದುಷ್ಕರ್ಮಿಗಳ ತಂಡ ಕಚೇರಿ ಒಳಗೆ ನುಗ್ಗಿದೆ. ಮಾರಕಾಸ್ತ್ರಗಳಿಂದ ಅವರ ಮೇಲೆ ಹಲ್ಲೆ ನಡೆಸಿದ್ದು, ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೃತ್ಯ ಎಸಗಿದ ಬಳಿಕ ಹಂತಕರು ಅದೇ ಆಟೋದಲ್ಲಿ ಪರಾರಿಯಾಗಿದ್ದಾರೆ.

ಮೃತ ಅನಿಲ ರಾಠೋಡ್ ಅವರು ರಿಯಲ್ ಎಸ್ಟೇಟ್ ಮತ್ತು ಫೈನಾನ್ಸ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ಅನಿಲ ಅವರು ಸಂಬಂಧದಲ್ಲಿ ಮಾಜಿ ಸಚಿವ ರೇವೂನಾಯಕ ಬೆಳಮಗಿ ಅವರ ಅಳಿಯನಾಗಬೇಕು ಎನ್ನಲಾಗಿದೆ.
ಅವರ ಹತ್ಯೆಗೆ ಹಣಕಾಸಿನ ವಿಚಾರವೇ ಪ್ರಮುಖ ಕಾರಣವಿರಬಹುದು ಎಂದು ಪೊಲೀಸರು ಪ್ರಾಥಮಿಕವಾಗಿ ಅನುಮಾನಿಸಿದ್ದಾರೆ. ವೈಯಕ್ತಿಕ ಅಥವಾ ವ್ಯವಹಾರಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement