
ನವದೆಹಲಿ: ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯ ಹಾದಿಯಲ್ಲಿರುವ ಭಾರತವು ಈಗ ಜಾಗತಿಕ ಮಟ್ಟದಲ್ಲಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ದೇಶದ ರಕ್ಷಣಾ ರಫ್ತು ಇತಿಹಾಸದಲ್ಲೇ ಹಿಂದೆಂದೂ ಕಾಣದ ಮಟ್ಟಕ್ಕೆ ಅದು ಏರಿಕೆಯಾಗಿದ್ದು, 2025-26ರ ಹಣಕಾಸು ವರ್ಷದಲ್ಲಿ ಒಟ್ಟು ರಕ್ಷಣಾ ರಫ್ತು ಪ್ರಮಾಣ 38,424 ಕೋಟಿ ರೂಪಾಯಿಗಳನ್ನು ತಲುಪುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.
ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶಗಳು ಭಾರತದ ಈ ಕ್ಷಿಪ್ರ ಬೆಳವಣಿಗೆಯನ್ನು ಸಾಬೀತುಪಡಿಸಿವೆ. 2016-17ರಲ್ಲಿ ಕೇವಲ ₹1,522 ಕೋಟಿ ಇದ್ದ ರಕ್ಷಣಾ ರಫ್ತು, ಹತ್ತು ವರ್ಷಗಳ ಅವಧಿಯಲ್ಲಿ ಸುಮಾರು 25 ಪಟ್ಟು ವೃದ್ಧಿಸಿದೆ. 2018-19ರಲ್ಲಿ ಮೊದಲ ಬಾರಿಗೆ ₹10,000 ಕೋಟಿಯ ಗಡಿ ದಾಟಿದ್ದ ರಫ್ತು ವಲಯವು, ಕೋವಿಡ್ ಸಮಯದಲ್ಲಿ ಸ್ವಲ್ಪ ಕುಸಿತ ಕಂಡರೂ ನಂತರದ ವರ್ಷಗಳಲ್ಲಿ ಭಾರಿ ಚೇತರಿಕೆ ಕಂಡಿದೆ. ಅದರಲ್ಲೂ 2023-24ರಿಂದ 2025-26ರ ನಡುವೆ ರಫ್ತು ₹21,083 ಕೋಟಿಯಿಂದ ₹38,424 ಕೋಟಿಗೆ ಏರಿರುವುದು ಗಮನಾರ್ಹ.
ಭಾರತದ ಶಸ್ತ್ರಾಸ್ತ್ರ ಖರೀದಿ ಮಾಡುವ ರಾಷ್ಟ್ರಗಳು
2016 ರಿಂದ 2025ರ ಅವಧಿಯ ದತ್ತಾಂಶದ ಪ್ರಕಾರ, ಭಾರತದ ರಕ್ಷಣಾ ಸಾಮಗ್ರಿಗಳನ್ನು ಅತಿ ಹೆಚ್ಚು ಖರೀದಿಸಿದ ರಾಷ್ಟ್ರಗಳಲ್ಲಿ ಮ್ಯಾನ್ಮಾರ್ (ಶೇ. 28) ಮೊದಲ ಸ್ಥಾನದಲ್ಲಿದೆ. ಉಳಿದಂತೆ ಫಿಲಿಪೈನ್ಸ್ (ಶೇ. 19) ಮತ್ತು ಅರ್ಮೇನಿಯಾ (ಶೇ. 15) ರಾಷ್ಟ್ರಗಳು ಪ್ರಮುಖ ಖರೀದಿದಾರರಾಗಿವೆ. ಈ ಮೂರು ದೇಶಗಳೇ ಭಾರತದ ರಫ್ತು ಮಾರುಕಟ್ಟೆಯ ಶೇ. 60ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿವೆ.
ಅಲ್ಲದೆ, ನೆರೆಹೊರೆಯ ರಾಷ್ಟ್ರಗಳಾದ ಶ್ರೀಲಂಕಾ (ಶೇ. 13), ಮಾರಿಷಸ್ (ಶೇ. 8.3), ಸೀಶೆಲ್ಸ್ (ಶೇ. 6) ಮತ್ತು ವಿಯೆಟ್ನಾಂ (ಶೇ. 5.5) ದೇಶಗಳು ಭಾರತದ ರಕ್ಷಣಾ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಿವೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ, ಮೊರಾಕ್ಕೋ ಮತ್ತು ಮಾಲ್ಡೀವ್ಸ್ ದೇಶಗಳಿಗೂ ಭಾರತವು ರಕ್ಷಣಾ ಸಾಮಗ್ರಿಗಳನ್ನು ಪೂರೈಸುತ್ತಿದೆ.
ಹಡಗು ಮತ್ತು ಕ್ಷಿಪಣಿಗಳೇ ರಫ್ತಿನ ಜೀವಾಳ
ಭಾರತ ರಫ್ತು ಮಾಡುತ್ತಿರುವ ಸಾಮಗ್ರಿಗಳಲ್ಲಿ ನೌಕದಳಕ್ಕೆ ಸಂಬಂಧಿಸಿದ ಯುದ್ಧನೌಕೆ ಮತ್ತು ಹಡಗುಗಳು ಶೇ. 55 ರಷ್ಟು ಸಿಂಹಪಾಲು ಹೊಂದಿವೆ. ಉಳಿದಂತೆ ಫಿರಂಗಿ ವ್ಯವಸ್ಥೆಗಳು-ಶೇ. 13, ಕ್ಷಿಪಣಿಗಳು-ಶೇ. 12, ಸೆನ್ಸರ್ ಮತ್ತು ಕಣ್ಗಾವಲು ವ್ಯವಸ್ಥೆ-ಶೇ. 9, ವಿಮಾನಗಳು-ಶೇ. 6, ವಾಯು ರಕ್ಷಣಾ ವ್ಯವಸ್ಥೆ- ಶೇ. 5.3, ಶಸ್ತ್ರಸಜ್ಜಿತ ವಾಹನಗಳು-ಶೇ. 0.3ರಷ್ಟಿದೆ.



ನಿಮ್ಮ ಕಾಮೆಂಟ್ ಬರೆಯಿರಿ