ತಂದೆ-ಮಗ ಲಾಕಪ್ ಡೆತ್ ಪ್ರಕರಣ : ತಮಿಳುನಾಡಿನ 9 ಪೊಲೀಸ್ ಸಿಬ್ಬಂದಿಗೆ ಮರಣದಂಡನೆ

ಮಧುರೈ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ತಮಿಳುನಾಡಿನ ಶಾಂತಕುಲಂ ಪೊಲೀಸ್‌ ಕಸ್ಟಡಿಯಲ್ಲಿದ್ದಾಗಲೇ ತಂದೆ-ಮಗ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಧುರೈನ ಒಂದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು 9 ಪೊಲೀಸರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕೊಲೆ ಮತ್ತು ಸಾಕ್ಷ್ಯ ನಾಶದ ಆರೋಪದಡಿ ಈ ಸಿಬ್ಬಂದಿಯನ್ನು ನ್ಯಾಯಾಧೀಶರು ಮಾರ್ಚ್ 23 ರಂದು ದೋಷಿಗಳೆಂದು ಪ್ರಕಟಿಸಿದ್ದರು. ಇಂದು, ಸೋಮವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗಿದೆ. ಘಟನೆ ನಡೆದು ಸುಮಾರು 6 ವರ್ಷಗಳ ಬಳಿಕ ತೀರ್ಪು ಪ್ರಕಟಕೊಂಡಿದೆ.
2020ರ ಜೂನ್ ತಿಂಗಳಲ್ಲಿ ಕೋವಿಡ್‌ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮೊಬೈಲ್ ಅಂಗಡಿ ತೆರೆದಿದ್ದಾರೆ ಎಂಬ ಕ್ಷುಲ್ಲಕ ಕಾರಣಕ್ಕೆ ತೂತುಕುಡಿಯ ಸಾಥಾನ್‌ಕುಲಂನ ಜಯರಾಜ ಮತ್ತು ಅವರ ಪುತ್ರ ಬೆನ್ನಿಕ್ಸ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಜೂನ್ 18 ರಂದು ಪೊಲೀಸರು ಜಯರಾಜ ಅವರನ್ನು ಬಲವಂತವಾಗಿ ಠಾಣೆಗೆ ಕರೆದೊಯ್ದಿದ್ದರು, ನಂತರ ಅವರ ಮಗ ಬೆನ್ನಿಕ್ಸ್ ಅವರನ್ನೂ ಬಂಧಿಸಲಾಗಿತ್ತು.

ಲಾಕ್‌ಡೌನ್ ಉಲ್ಲಂಘನೆಯಂತಹ ಸಣ್ಣ ವಿಚಾರಕ್ಕೆ ಆರಂಭವಾದ ಈ ಘಟನೆ, ಪೊಲೀಸರ ಮಿತಿಮೀರಿದ ವರ್ತನೆಯಿಂದಾಗಿ ಭೀಕರ ಸಾವಿನಲ್ಲಿ ಅಂತ್ಯವಾಯಿತು. ಗಂಭೀರವಾಗಿ ಗಾಯಗೊಂಡಿದ್ದ ಬೆನ್ನಿಕ್ಸ್‌ ಜೂನ್‌ 22ರಂದು ಮತ್ತು ಜಯರಾಜ ಜೂನ್‌ 23ರಂದು ಮೃತಪಟ್ಟರು. ಬಳಿಕ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಲಾಯಿತು.
ಜಯರಾಜ ಮತ್ತು ಬೆನ್ನಿಕ್ಸ್ ಅವರ ಸಾವು ನೈಸರ್ಗಿಕ ಅಥವಾ ಅನಾರೋಗ್ಯದಿಂದ ಸಂಭವಿಸಿದ್ದಲ್ಲ, ಬದಲಾಗಿ ಪೊಲೀಸ್ ಕಸ್ಟಡಿಯಲ್ಲಿ ನಡೆದ ಭೀಕರ ಹಲ್ಲೆಯಿಂದಲೇ ಸಂಭವಿಸಿದೆ ಎಂದು ನ್ಯಾಯಾಲಯ ಗಮನಿಸಿದೆ.
ಸಂತ್ರಸ್ತರ ದೇಹದ ಮೇಲಿದ್ದ ಗಂಭೀರ ಗಾಯಗಳು ಮತ್ತು ವಿಧಿವಿಜ್ಞಾನ ವರದಿಯನ್ನು ಆಧರಿಸಿ, ಪೊಲೀಸರು ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿರುವುದು ಸಾಬೀತಾಗಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಟಿಎಂಸಿ ಬಂಡಾಯ ಸಂಸದರು ಎನ್‌ಸಿಪಿಐ ಜೊತೆ ವಿಲೀನ ; ದಿಢೀರ್‌ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾದ ಅಪರಿಚಿತ ಪಕ್ಷ...! ಇದರ ಬಗ್ಗೆ ಗೊತ್ತೆ..?

ಸಾರ್ವಜನಿಕ ಆಕ್ರೋಶ ಮತ್ತು ಮದ್ರಾಸ್ ಹೈಕೋರ್ಟ್ ಮಧ್ಯಪ್ರವೇಶದ ನಂತರ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ಇನ್ಸ್‌ಪೆಕ್ಟರ್ ಶ್ರೀಧರ್ ಮತ್ತು ಸಬ್-ಇನ್‌ಸ್ಪೆಕ್ಟರ್‌ಗಳಾದ ಬಾಲಕೃಷ್ಣನ್ ಮತ್ತು ರಘುಗಣೇಶ್ ಸೇರಿದಂತೆ ಆರೋಪಿಗಳ ವಿರುದ್ಧ 2,027 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿತ್ತು.
ಕಳೆದ 5 ವರ್ಷಗಳಿಂದ ನಡೆದ ಸುದೀರ್ಘ ವಿಚಾರಣೆಯಲ್ಲಿ 50ಕ್ಕೂ ಹೆಚ್ಚು ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಒಂಬತ್ತು ಪೊಲೀಸ್‌ ಸಿಬ್ಬಂದಿ ಈ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದರು ಎಂದು ನ್ಯಾಯಾಲಯ ತೀರ್ಮಾನಿಸಿದೆ. ಹಾಗೂ ಅವರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement