ತೆಹ್ರಾನ್/ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ತುತ್ತತುದಿಗೆ ತಲುಪಿದ್ದು, ಜಗತ್ತು ಮತ್ತೊಂದು ಮಹಾಯುದ್ಧದ ಭೀತಿಯಲ್ಲಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ಭೀಕರ ದಾಳಿಯ ಎಚ್ಚರಿಕೆ ನೀಡಿದ್ದು, ಇದಕ್ಕೆ ಪ್ರತಿಯಾಗಿ ಇರಾನ್ ತಿರುಗೇಟು ನೀಡುವುದಾಗಿ ಎಚ್ಚರಿಸಿದೆ.
ಇದರ ಬೆನ್ನಲ್ಲೇ ಇರಾನ್‌ನಲ್ಲಿರುವ ಭಾರತೀಯರಿಗೆ ಭಾರತೀಯ ರಾಯಭಾರ ಕಚೇರಿಯು ತುರ್ತು ಸಲಹೆ (Advisory) ನೀಡಿದೆ.
ಮುಂದಿನ 48 ಗಂಟೆಗಳ ಕಾಲ ಭಾರತೀಯರು ಎಲ್ಲಿದ್ದಾರೋ ಅಲ್ಲೇ ಇರಬೇಕು.
ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಬಾರದು.
ವಿದ್ಯುತ್ ಸ್ಥಾವರಗಳು, ಮಿಲಿಟರಿ ನೆಲೆಗಳು ಮತ್ತು ಬಹುಮಹಡಿ ಕಟ್ಟಡಗಳ ಮೇಲಿನ ಮಹಡಿಗಳಿಂದ ದೂರವಿರಬೇಕು.
ಹೋಟೆಲ್‌ಗಳಲ್ಲಿ ಉಳಿದುಕೊಂಡಿರುವವರು ರಾಯಭಾರ ಕಚೇರಿಯ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ರಾಯಭಾರ ಕಚೇರಿಯು ಬಾರತೀಯ ನಾಗರಿಕರಿಗೆ ಸೂಚಿಸಿದೆ.
ಪರಿಸ್ಥಿತಿ ಕ್ಷಣಕ್ಷಣಕ್ಕೂ ಬದಲಾಗುತ್ತಿರುವುದರಿಂದ ಇರಾನ್‌ನಲ್ಲಿರುವ ಭಾರತೀಯರು ಸ್ಥಳೀಯ ರಾಯಭಾರ ಕಚೇರಿಯ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಲು ಸೂಚಿಸಲಾಗಿದೆ.
ಟ್ರಂಪ್ ನೀಡಿದ ಅಂತಿಮ ಗಡುವು
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ‘ಟ್ರುತ್ ಸೋಶಿಯಲ್’ ಖಾತೆಯಲ್ಲಿ ಅತ್ಯಂತ ಭಯಾನಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. “ಇಂದು ರಾತ್ರಿ ಇಡೀ ನಾಗರಿಕತೆಯೇ ನಾಶವಾಗಲಿದೆ, ಅದು ಮತ್ತೆ ಎಂದಿಗೂ ಮರಳಿ ಬರುವುದಿಲ್ಲ. ಇದು ಸಂಭವಿಸುವುದು ನನಗೂ ಇಷ್ಟವಿಲ್ಲ, ಆದರೆ ಇದು ಬಹುಶಃ ನಡೆಯಲಿದೆ ಎಂದು ಬರೆದಿದ್ದಾರೆ.
ಹಾರ್ಮುಜ್ ಜಲಸಂಧಿಯನ್ನು (Strait of Hormuz) ತೆರೆಯಲು ಮಂಗಳವಾರ ರಾತ್ರಿ 8 ಗಂಟೆಯವರೆಗೆ (EST) ಇರಾನ್‌ಗೆ ಟ್ರಂಪ್ ಕಾಲಾವಕಾಶ ನೀಡಿದ್ದಾರೆ. ಇಲ್ಲದಿದ್ದರೆ ಇರಾನ್‌ನ ಪ್ರತಿಯೊಂದು ಸೇತುವೆ ಮತ್ತು ವಿದ್ಯುತ್ ಸ್ಥಾವರಗಳನ್ನು ಧ್ವಂಸ ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ. ಇದನ್ನು ‘ಯುದ್ಧಾಪರಾಧ’ ಎಂದು ತಜ್ಞರು ಕರೆದಿದ್ದರೂ, ಟ್ರಂಪ್ ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
“ಸೈಕೋಪಾತ್ ಬೆದರಿಕೆಗೆ ಹೆದರುವುದಿಲ್ಲ” ಇರಾನ್ ತಿರುಗೇಟು
ಟ್ರಂಪ್ ಬೆದರಿಕೆಗೆ ಪ್ರತಿಕ್ರಿಯಿಸಿರುವ ಇರಾನ್, “ಪ್ರಾಚೀನ ಇರಾನ್ ನಾಗರಿಕತೆಯಿಂದ ನೀವು ಮತ್ತು ನಿಮ್ಮ ಮಿತ್ರರಾಷ್ಟ್ರಗಳು ಮರೆಯಲಾಗದ ಹೊಡೆತವನ್ನು ಅನುಭವಿಸುವಿರಿ” ಎಂದು ಹೇಳಿದೆ. ಟರ್ಕಿಯಲ್ಲಿರುವ ಇರಾನ್ ರಾಯಭಾರ ಕಚೇರಿಯು ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿ, “ಅಲೆಕ್ಸಾಂಡರ್ ಇದನ್ನು ಸುಟ್ಟನು, ಮಂಗೋಲರು ಲೂಟಿ ಮಾಡಿದರು, ಇತಿಹಾಸವೇ ಇದನ್ನು ಪರೀಕ್ಷಿಸಿದೆ. ಇರಾನ್ ಇಂದಿಗೂ ಇದೆ. ಒಬ್ಬ ಸೈಕೋಪಾತ್‌ನ ಬೆದರಿಕೆ ಇದನ್ನು ಅಂತ್ಯಗೊಳಿಸಲು ಸಾಧ್ಯವಿಲ್ಲ” ಎಂದು ಕಿಡಿಕಾರಿದೆ.


ನಿಮ್ಮ ಕಾಮೆಂಟ್ ಬರೆಯಿರಿ