ಗುಜರಾತಿಗಳು ಅನಕ್ಷರಸ್ಥರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ : ಕೇರಳದ ಚುನಾವಣಾ ರ್ಯಾಲಿಯಲ್ಲಿ ಗುಜರಾತ್ ಜನತೆಯ ಕುರಿತು ತಾವು ನೀಡಿದ್ದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಹೇಳಿಕೆಗೆ “ವಿಷಾದ” ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ತಮ್ಮ ಮಾತುಗಳನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಖರ್ಗೆ, “ಕೇರಳದ ಚುನಾವಣಾ ಭಾಷಣದಲ್ಲಿ ನಾನು ನೀಡಿದ ಕೆಲವು ಹೇಳಿಕೆಗಳನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸಲಾಗುತ್ತಿದೆ. ಆದರೂ, ಈ ಬೆಳವಣಿಗೆಯ ಬಗ್ಗೆ ನಾನು ಪ್ರಾಮಾಣಿಕವಾಗಿ ವಿಷಾದಿಸುತ್ತೇನೆ,” ಎಂದು ಬರೆದಿದ್ದಾರೆ.
“ಗುಜರಾತ್ ಜನರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ನನಗಿರಲಿಲ್ಲ. ಅವರ ಬಗ್ಗೆ ನನಗೆ ಯಾವಾಗಲೂ ಅಪಾರ ಗೌರವವಿದೆ ಮತ್ತು ಮುಂದೆಯೂ ಇರಲಿದೆ” ಎಂದು ಅವರು ಒತ್ತಿ ಹೇಳಿದ್ದಾರೆ.
ವಿವಾದಕ್ಕೆ ಕಾರಣವಾದ ಹೇಳಿಕೆ 
ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ವಿರುದ್ಧ ವಾಗ್ದಾಳಿ ನಡೆಸುವ ಸಂದರ್ಭದಲ್ಲಿ ಖರ್ಗೆ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು.
“ಕೇರಳದ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸಬೇಡಿ. ಅವರು ತುಂಬಾ ಬುದ್ಧಿವಂತರು ಮತ್ತು ವಿದ್ಯಾವಂತರು. ಮೋದಿ ಜೀ ಮತ್ತು ವಿಜಯನ್ ಅವರೇ, ನೀವು ಗುಜರಾತ್ ಅಥವಾ ಇತರ ಕಡೆಗಳಲ್ಲಿ ಅನಕ್ಷರಸ್ಥರನ್ನು ಮೂರ್ಖರನ್ನಾಗಿಸಬಹುದು, ಆದರೆ ಕೇರಳದ ಜನರನ್ನು ಅಲ್ಲ,” ಎಂದು ಖರ್ಗೆ ಹೇಳಿದ್ದರು.
ಖರ್ಗೆ ಅವರ ಈ ಹೇಳಿಕೆಯು ಗುಜರಾತ್ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಇದು ಇಡೀ ಗುಜರಾತ್‌ ರಾಜ್ಯದ ಜನತೆಗೆ ಮಾಡಿದ ಅವಮಾನ ಎಂದು ಬಿಜೆಪಿ ಬಣ್ಣಿಸಿದೆ.
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು,  ಖರ್ಗೆ ಅವರ ಮಾತುಗಳು “ಅತ್ಯಂತ ಆಕ್ಷೇಪಾರ್ಹ ಮತ್ತು ದುರದೃಷ್ಟಕರ”. ಇದು ಕೋಟ್ಯಂತರ ಗುಜರಾತಿಗಳ ಘನತೆಗೆ ಕುಂದು ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 ಬಿಜೆಪಿ ವಕ್ತಾರ ಪ್ರದೀಪ ಭಂಡಾರಿ, ಕಾಂಗ್ರೆಸ್ “ಒಡೆದು ಆಳುವ” ನೀತಿಯನ್ನು ಅನುಸರಿಸುತ್ತಿದೆ. ಬ್ರಿಟಿಷರ ಕಾಲದ ಎ.ಒ. ಹ್ಯೂಮ್ ಸ್ಥಾಪಿಸಿದ ಪಕ್ಷವು ಭಾರತೀಯರನ್ನೇ ಪರಸ್ಪರ ಎತ್ತಿಕಟ್ಟುವ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ಕೇರಳದಲ್ಲಿ ಚುನಾವಣೆ ನಡೆಯಲಿರುವ ಈ ಸಂದರ್ಭದಲ್ಲಿ ಖರ್ಗೆ ಅವರ ಈ ಹೇಳಿಕೆ ಮತ್ತು ನಂತರದ ವಿಷಾದ ವ್ಯಕ್ತಪಡಿಸುವಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement