ಚಿಕ್ಕಮಗಳೂರು : ಪ್ರವಾಸಕ್ಕೆ ಬಂದಿದ್ದ ಕೇರಳದ ವಿದ್ಯಾರ್ಥಿನಿ ಚಂದ್ರದ್ರೋಣ ಪರ್ವತ ಪ್ರದೇಶದಲ್ಲಿ ನಾಪತ್ತೆ

ಚಿಕ್ಕಮಗಳೂರು : ಕೇರಳದಿಂದ 40 ಜನರ ತಂಡದೊಂದಿಗೆ ಚಿಕ್ಕಮಗಳೂರು ಪ್ರವಾಸಕ್ಕೆ ಬಂದಿದ್ದ 16 ವರ್ಷದ ವಿದ್ಯಾರ್ಥಿನಿ  ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ (Mullayanagiri) ಭಾಗದ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ನಾಪತ್ತೆಯಾಗಿರುವ 10ನೇ ತರಗತಿ ವಿದ್ಯಾರ್ಥಿನಿ ಶ್ರೀನಂದಾ (16) ಎಂದು ಗುರುತಿಸಲಾಗಿದ್ದು, ಕೇರಳದಿಂದ ಬಂದ 40 ಜನರ ತಂಡ ಮಂಗಳವಾರ ಸಂಜೆ 6:30ರ ಸುಮಾರಿಗೆ ಚಂದ್ರದ್ರೋಣ ಪರ್ವತ ಪ್ರದೇಶದ ಮಾಣಿಕ್ಯಧಾರಾ ಜಲಪಾತದ ವೀಕ್ಷಣೆಗೆ ತೆರಳಿದ್ದರು ಎನ್ನಲಾಗಿದೆ. ಈ ವೇಳೆ ಕತ್ತಲಾಗಿತ್ತು, ಈ ವೇಳೆ ಶ್ರೀನಂದನ ನಾಪತ್ತೆಯಾಗಿದ್ದಾಳೆ. ಜೊತೆಗಿದ್ದವರು ಹುಡುಕಾಡಿದರೂ ಪತ್ತೆಯಾಗಿಲ್ಲ.
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕದ 30ಕ್ಕೂ ಹೆಚ್ಚು ಸಿಬ್ಬಂದಿ ಟಾರ್ಚ್ ಹಾಕಿಕೊಂಡು ಮಧ್ಯರಾತ್ರಿವರೆಗೂ ಹುಡುಕಾಡಿದರೂ ಸುಳಿವು ಸಿಗಲಿಲ್ಲ. ಬೆಟ್ಟಗುಡ್ಡಗಳ ಕಾಡಿನ ಪ್ರದೇಶ, ಮಂಜು ಹಾಗೂ ಭಾರೀ ಕತ್ತಲು ಕವಿದಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.
ಇಂದು, ಬುಧವಾರ ಬೆಳಗ್ಗೆ ಮತ್ತೆ  ಶೋಧ ಕಾರ್ಯ ಮುಂದುವರಿಸಿದ್ದಾರೆ. ಅರಣ್ಯ ಇಲಾಖೆ ಡ್ರೋನ್ ಮೂಲಕ ಬಾಲಕಿಯ ಪತ್ತೆಗೆ ಮುಂದಾಗಿದ್ದಾರೆ. ಬಾಲಕಿ ನಾಪತ್ತೆಯಾದ ಸ್ಥಳದಿಂದ ಹೋಗಿರಬಹುದಾದ ಮಾರ್ಗದ ಅಂದಾಜಿನಲ್ಲಿ  ತಂಡಗಳಾಗಿ ಬಾಲಕಿ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ. ಪರ್ವತ ಶ್ರೇಣಿಯ ಗುಪ್ತ ಮಾರ್ಗಗಳನ್ನು ತಿಳಿದಿರುವ ಸ್ಥಳೀಯ ಗ್ರಾಮಸ್ಥರು ಮತ್ತು ಚಾರಣಿಗರು ಹುಡುಕಲು ಸಹಾಯ ಮಾಡಲು ಮುಂದೆ ಬಂದಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement