ರಸ್ತೆ ಬದಿ ಬಟ್ಟೆ ಇಸ್ತ್ರಿ ಮಾಡುವವನಿಗೆ ₹598 ಕೋಟಿ ಐಟಿ ಶಾಕ್ ! ವಜ್ರದ ವ್ಯಾಪಾರ ನಡೆಸಿದ್ದಾಗಿ ನೋಟಿಸ್ !! ಆಗಿದ್ದೇನು..?

ಜೈಪುರ : ರಾಜಸ್ಥಾನದ ಅಜ್ಮೇರ್‌ನಲ್ಲಿ ದೊಡ್ಡ ಹಣಕಾಸು ವಂಚನೆಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ರಸ್ತೆ ಬದಿಯಲ್ಲಿ ಬಟ್ಟೆ ಇಸ್ತ್ರಿ ಮಾಡುವ ವ್ಯಕ್ತಿಯೊಬ್ಬನಿಗೆ ಆದಾಯ ತೆರಿಗೆ ಇಲಾಖೆಯು ₹598 ಕೋಟಿಗಗೂ ಹೆಚ್ಚು ವಹಿವಾಟು ನಡೆಸಿದ್ದರ ಕುರಿತು ನೋಟಿಸ್ ಜಾರಿ ಮಾಡಿದೆ….! ಈತನ ಹೆಸರಿನಲ್ಲಿ ಬರೋಬ್ಬರಿ ₹598 ಕೋಟಿಗೂ ಅಧಿಕ ಮೊತ್ತದ ವಜ್ರದ ವಹಿವಾಟು ನಡೆದಿದೆ ಎಂದು ಹೇಳಿ ಈ ನೋಟಿಸ್‌ ಜಾರಿ ಮಾಡಲಾಗಿದೆ.
ಅಜ್ಮೇರ್‌ನ ರಾಮನಗರ ಪ್ರದೇಶದಲ್ಲಿ ಇಸ್ತ್ರಿ ಗಾಡಿ ನಡೆಸುತ್ತಿರುವ ಜಿತೇಂದ್ರಕುಮಾರ ಎಂಬುವವರಿಗೆ ಏಪ್ರಿಲ್ 1, 2026 ರಂದು ಐಟಿ ಇಲಾಖೆಯಿಂದ ನೋಟಿಸ್ ಬಂದಿದೆ. ತಮ್ಮ ಕನಸಿನಲ್ಲೂ ಯೋಚಿಸದ ಇಷ್ಟು ದೊಡ್ಡ ಮೊತ್ತದ ಹಣಕಾಸಿನ ವಹಿವಾಟಿನ ನೋಟಿಸ್ ನೋಡಿ ಜಿತೇಂದ್ರ ಅವರು ತೀವ್ರ ಆತಂಕಕ್ಕೊಳಗಾಗಿದ್ದಾರೆ.

ವಂಚನೆ ನಡೆದಿದ್ದು ಹೇಗೆ?
ಜಿತೇಂದ್ರ ಅವರ ಪರ ವಕೀಲರಾದ ರಾಕೇಶ ಥಾಡಾ ಅವರ ಪ್ರಕಾರ, ಈ ಬೃಹತ್ ವಂಚನೆಯ ಹಿಂದೆ ಸಂಚು ಅಡಗಿದೆ ಜಿತೇಂದ್ರ ಅವರ ಪ್ಯಾನ್ (PAN) ಕಾರ್ಡ್ ಅನ್ನು ಅಕ್ರಮವಾಗಿ ಬಳಸಿ ಈ ವಹಿವಾಟು ನಡೆಸಲಾಗಿದೆ. ಸುಮಾರು ಎರಡು ವರ್ಷಗಳ ಹಿಂದೆ ಜಿತೇಂದ್ರ ಅವರ ಪ್ಯಾನ್ ಕಾರ್ಡ್ ಕಳೆದುಹೋಗಿತ್ತು. ಇದನ್ನು ಬಳಸಿಕೊಂಡ ಪಾಲಿ ಮೂಲದ ವಜ್ರ ವ್ಯಾಪಾರಿಯೊಬ್ಬ ವಂಚನೆ ಎಸಗಿದ್ದಾನೆ ಎಂದು ಶಂಕಿಸಲಾಗಿದೆ.
ಜಿತೇಂದ್ರ ಹೆಸರಿನಲ್ಲಿ ಖಾಸಗಿ ಬ್ಯಾಂಕ್‌ನಲ್ಲಿ ಖಾತೆ ತೆರೆದು, ಗುಜರಾತಿನ ಸೂರತ್‌ನಲ್ಲಿ ‘ಮೆಸರ್ಸ್ ಮನನ್ ಎಂಟರ್‌ಪ್ರೈಸಸ್’ ಎಂಬ ಸಂಸ್ಥೆಯನ್ನು ಸ್ಥಾಪಿಸಲಾಗಿತ್ತು. ಈ ಸಂಸ್ಥೆಯ ಮೂಲಕ ವಜ್ರ ಮತ್ತು ಆಭರಣಗಳ ವ್ಯಾಪಾರ ನಡೆಸಲಾಗಿದೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

ಬ್ಯಾಂಕ್ ಮ್ಯಾನೇಜರ್ ಶಾಮೀಲು?:
ಇಷ್ಟೊಂದು ದೊಡ್ಡ ಮೊತ್ತದ ವ್ಯವಹಾರಕ್ಕೆ ಅನುವು ಮಾಡಿಕೊಟ್ಟ ಖಾಸಗಿ ಬ್ಯಾಂಕ್ ಮ್ಯಾನೇಜರ್ ಪಾತ್ರದ ಬಗ್ಗೆಯೂ ಐಟಿ ಇಲಾಖೆ ವಿವರಣೆ ಕೇಳಿದ್ದು, ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ವಂಚಕರು ಜಿತೇಂದ್ರ ಅವರ ದಾಖಲೆಗಳನ್ನು ಬಳಸಿ ಜಿಎಸ್‌ಟಿ (GST) ನೋಂದಣಿಯನ್ನು ಕೂಡ ಮಾಡಿಸಿದ್ದರು. ಸದ್ಯ ಅಜ್ಮೇರ್‌ನ ಗಂಜ್ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.
“ನನಗೆ ಈ ಹಣಕಾಸಿನ ವ್ಯವಹಾರದ ಬಗ್ಗೆ ಕಿಂಚಿತ್ತೂ ಅರಿವಿಲ್ಲ. ಕಳೆದ ಒಂದು ವಾರದಿಂದ ಪೊಲೀಸ್ ಠಾಣೆ ಮತ್ತು ವಕೀಲರ ಕಚೇರಿಗೆ ಅಲೆಯುತ್ತಿರುವುದರಿಂದ ನನ್ನ ಜೀವನೋಪಾಯವನ್ನೇ ಕಸಿದುಕೊಂಡಂತಾಗಿದೆ,” ಎಂದು ಜಿತೇಂದ್ರ ನೋವು ತೋಡಿಕೊಂಡಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement