ಮಥುರಾ: ಯಮುನಾ ನದಿಯಲ್ಲಿ ಪ್ರವಾಸಿಗರ ದೋಣಿ ಮುಳುಗಿ 10 ಸಾವು

ಮಥುರಾ: ಉತ್ತರ ಪ್ರದೇಶದ ಮಥುರಾದಲ್ಲಿ ಭೀಕರ ದೋಣಿ ದುರಂತವೊಂದು ಸಂಭವಿಸಿದೆ. ಶುಕ್ರವಾರ ಮಧ್ಯಾಹ್ನ ಯಮುನಾ ನದಿಯಲ್ಲಿ ಪ್ರವಾಸಿಗರಿದ್ದ ದೋಣಿ ಮಗುಚಿ ಬಿದ್ದ ಪರಿಣಾಮ ಹತ್ತು ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ. ಮೃತರನ್ನು ಪಂಜಾಬ್‌ ಲುಧಿಯಾನ ಮೂಲದವರು ಎಂದು ಗುರುತಿಸಲಾಗಿದ್ದು, ಇವರಲ್ಲಿ ಏಳು ಮಹಿಳೆಯರು ಮತ್ತು ಮೂವರು ಪುರುಷರು ಸೇರಿದ್ದಾರೆ.
ಪಂಜಾಬ್‌ನಿಂದ ವೃಂದಾವನದ ದರ್ಶನಕ್ಕೆಂದು ಬಂದಿದ್ದ ಸುಮಾರು 30 ಪ್ರವಾಸಿಗರ ತಂಡವು ದೋಣಿ ವಿಹಾರ ಕೈಗೊಂಡಿತ್ತು. ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಪ್ರಸಿದ್ಧ ಬಂಕೆ ಬಿಹಾರಿ ದೇವಸ್ಥಾನದಿಂದ ಸುಮಾರು 2.5 ಕಿ.ಮೀ ದೂರದಲ್ಲಿರುವ ಕೆಸಿ ಘಾಟ್ ಬಳಿ ಈ ಅಪಘಾತ ಸಂಭವಿಸಿದೆ. ಚಲಿಸುತ್ತಿದ್ದ ದೋಣಿಯು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಪಾಂಟೂನ್ (ತಾತ್ಕಾಲಿಕ) ಸೇತುವೆಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದೋಣಿ ನಡುನೀರಲ್ಲೇ ಮಗುಚಿ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ತೀವ್ರಗೊಂಡ ರಕ್ಷಣಾ ಕಾರ್ಯಾಚರಣೆ:
ಘಟನೆ ಸಂಭವಿಸಿದ ತಕ್ಷಣ ಸ್ಥಳೀಯರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ರಕ್ಷಣೆಗೆ ಧಾವಿಸಿದ್ದಾರೆ. ಪ್ರಸ್ತುತ ಸ್ಥಳದಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF), ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ (PAC), ಭಾರತೀಯ ಸೇನೆಯ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.
“ಪ್ರಾಥಮಿಕ ಮಾಹಿತಿಯ ಪ್ರಕಾರ, ದೋಣಿ ಸೇತುವೆಗೆ ಡಿಕ್ಕಿ ಹೊಡೆದಿದ್ದೇ ಈ ದುರಂತಕ್ಕೆ ಕಾರಣವಾಗಿದೆ. ಈವರೆಗೆ 10 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸುಮಾರು 16-17 ಜನರನ್ನು ರಕ್ಷಿಸಲಾಗಿದೆ. ಇನ್ನೂ ಕೆಲವರು ನಾಪತ್ತೆಯಾಗಿದ್ದು, ಶೋಧ ಕಾರ್ಯ ತೀವ್ರಗೊಂಡಿದೆ,” ಎಂದು ಮಥುರಾ ಡಿಐಜಿ ಶೈಲೇಶಕುಮಾರ ಪಾಂಡೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಜಿಲ್ಲಾಧಿಕಾರಿ ಚಂದ್ರಪ್ರಕಾಶ ಸಿಂಗ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದು, ನಾಪತ್ತೆಯಾದವರಿಗಾಗಿ ಗಾಜಿಯಾಬಾದ್‌ನಿಂದ ವಿಶೇಷ ಎನ್‌ಡಿಆರ್‌ಎಫ್ ತಂಡವನ್ನು ಕರೆಸಿಕೊಳ್ಳಲಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಮುಖ ಸುದ್ದಿ :-   ʼವಂದೇ ಮಾತರಂ'ಗೆ ಅವಮಾನಿಸಿದರೆ ಜೈಲು ಶಿಕ್ಷೆ: ಸಂಸತ್ತಿನಲ್ಲಿ ಮಸೂದೆ ಮಂಡಿಸಲಿರುವ ಅಮಿತ್ ಶಾ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement