80 ವರ್ಷ, 20ಕ್ಕೂ ಹೆಚ್ಚು ಭಾಷೆಗಳು, 12000ಕ್ಕೂ ಹೆಚ್ಚು ಹಾಡುಗಳು…:’ಪ್ರೀತಿಯ ಭಾಷೆ’ಯಾಗಿದ್ದ ಆಶಾ ಭೋಂಸ್ಲೆ

ಮುಂಬೈ: ಚೇಷ್ಟೆಯ ಭಾವದಿಂದ  ವಿಷಾದದ ಭಾವಕ್ಕೆ ಕ್ಷಣಮಾತ್ರದಲ್ಲಿ ಹೊರಳಬಲ್ಲ, ಎಂಬತ್ತರ ಹರೆಯದಲ್ಲೂ ಇಪ್ಪತ್ತರ ತಾರುಣ್ಯದ ಕಂಠವನ್ನು ಉಳಿಸಿಕೊಂಡಿದ್ದ ಭಾರತೀಯ ಸಂಗೀತದ ಅಪ್ರತಿಮ ಗಾಯಕಿ ಆಶಾ ಭೋಂಸ್ಲೆ (92) ಭಾನುವಾರ ನಿಧನರಾದರು. 20 ಮತ್ತು 21ನೇ ಶತಮಾನದ ಭಾರತೀಯ ಚಿತ್ರಸಂಗೀತದ ಇತಿಹಾಸವನ್ನು ತನ್ನ ಧ್ವನಿಯ ಮೂಲಕ ದಾಖಲಿಸಿದ್ದ ಅವರು, ಏಪ್ರಿಲ್ 12ರಂದು ಭೌತಿಕ ಜಗತ್ತಿನಿಂದ ಮರೆಯಾದರು.
ಹೃದಯ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಆಶಾ ಅವರನ್ನು ಶನಿವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕೆಲವು ತಿಂಗಳುಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಆಸ್ಪತ್ರೆಗೆ ದಾಖಲಾದಾಗ ಅವರ ಸ್ಥಿತಿ ಗಂಭೀರವಾಗಿದ್ದರಿಂದ ತಕ್ಷಣವೇ ಐಸಿಯುಗೆ (ICU) ಸ್ಥಳಾಂತರಿಸಲಾಗಿತ್ತು. ಭಾನುವಾರ ಮಧ್ಯಾಹ್ನ ಅವರ ಪುತ್ರ ಆನಂದ ಭೋಂಸ್ಲೆ ಅವರು ತಾಯಿಯ ನಿಧನದ ಸುದ್ಧಿಯನ್ನು ಖಚಿತಪಡಿಸಿದರು.
ಎಂಟು ದಶಕಗಳ ಸುದೀರ್ಘ ಪಯಣ
ಸುಮಾರು 80 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಆಶಾ ಅವರು 20ಕ್ಕೂ ಹೆಚ್ಚು ಭಾಷೆಗಳಲ್ಲಿ ಅಂದಾಜು 12,000 ರಿಂದ 13,000 ಹಾಡುಗಳನ್ನು ಹಾಡಿದ್ದಾರೆ. ಈ ಮೂಲಕ ಅವರು ವಿಶ್ವದ ಅತ್ಯಂತ ಸಮೃದ್ಧ ಗಾಯಕಿಯರಲ್ಲಿ ಒಬ್ಬರಾಗಿದ್ದಾರೆ. ಹಿಂದಿ, ಮರಾಠಿ, ಬಂಗಾಳಿ, ಕನ್ನಡ, ತಮಿಳು ಸೇರಿದಂತೆ ಹಲವಾರು ಭಾಷೆಗಳಲ್ಲಿ ಅವರು ಹಾಡಿದ್ದು, ಅವರ ಧ್ವನಿ ಭೌಗೋಳಿಕ ಮತ್ತು ತಲೆಮಾರುಗಳ ಗಡಿಗಳನ್ನು ಮೀರಿ ಬೆಳೆದಿತ್ತು.
ಜೀವನದ ಆರಂಭ ಮತ್ತು ಸಂಘರ್ಷ
ಸೆಪ್ಟೆಂಬರ್ 8, 1933 ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜನಿಸಿದ ಆಶಾ, ಖ್ಯಾತ ಮಂಗೇಶ್ಕರ ಕುಟುಂಬದ ದೀನಾನಾಥ ಮಂಗೇಶ್ಕರ ಅವರ ಐವರು ಮಕ್ಕಳಲ್ಲಿ ಎರಡನೆಯವರು. ಅವರ ಹಿರಿಯ ಸಹೋದರಿ ಲತಾ ಮಂಗೇಶ್ಕರ ಅವರು ಭಾರತದ ಸಾರ್ವಕಾಲಿಕ ಶ್ರೇಷ್ಠ ಹಿನ್ನೆಲೆ ಗಾಯಕಿಯರಲ್ಲಿ ಒಬ್ಬರು. 1942ರಲ್ಲಿ ತಂದೆಯ ನಿಧನದ ನಂತರ ಕುಟುಂಬದ ಆರ್ಥಿಕ ಹೊರೆಯನ್ನು ಹೊತ್ತುಕೊಳ್ಳಲು ಆಶಾ ಅವರು ಕೇವಲ 10ನೇ ವಯಸ್ಸಿನಲ್ಲಿ ಹಿನ್ನೆಲೆ ಗಾಯಕಿಯಾಗಿ ವೃತ್ತಿಜೀವನ ಆರಂಭಿಸಿದರು.
ವೃತ್ತಿಜೀವನದ ಮಹತ್ವದ ಮೈಲಿಗಲ್ಲುಗಳು
1943ರಲ್ಲಿ ಮರಾಠಿ ಚಿತ್ರ ‘ಮಾಜಾ ಬಾಲ್’ ಮೂಲಕ ಗಾಯನ ಆರಂಭಿಸಿದ ಅವರು, 1948ರಲ್ಲಿ ‘ಚುನಾರಿಯಾ’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
1957ರಲ್ಲಿ ಓ.ಪಿ. ನಯ್ಯರ್ ಅವರ ಸಂಗೀತ ನಿರ್ದೇಶನದ ‘ನಯಾ ದೌರ್’ ಚಿತ್ರದ “ಉಡೇ ಜಬ್ ಜಬ್ ಜುಲ್ಫೇ ತೇರಿ” ಹಾಡು ಅವರಿಗೆ ದೊಡ್ಡ ಬ್ರೇಕ್ ನೀಡಿತು.
ಆರ್.ಡಿ. ಬರ್ಮನ್ ಜೊತೆಗಿನ ಸುವರ್ಣಯುಗ
60 ಮತ್ತು 70ರ ದಶಕದಲ್ಲಿ ಆರ್.ಡಿ. ಬರ್ಮನ್ (ಪಂಚಮ್ ದಾ) ಜೊತೆಗೂಡಿ ಅವರು ಮಾಡಿದ ಪ್ರಯೋಗಗಳು ಹೊಸ ಅಲೆ ಸೃಷ್ಟಿಸಿದವು. “ದಮ್ ಮಾರೋ ದಮ್”, “ಚುರಾ ಲಿಯಾ ಹೈ ತುಮ್ನೇ”, “ಪಿಯಾ ತು ಅಬ್ ತೋ ಆಜಾ” ಅಂತಹ ಹಾಡುಗಳು ಇಂದಿಗೂ ಜನಪ್ರಿಯ.
“ಆಜಾ ಆಜಾ ಮೈ ಹೂ ಪ್ಯಾರ್ ತೇರಾ” (ತೀಸ್ರಿ ಮಂಜಿಲ್), “ಓ ಹಸೀನಾ ಜುಲ್ಫೊನ್ ವಾಲಿ,” “ಪಿಯಾ ತು ಅಬ್ ತೋ ಆಜಾ” (ಕಾರವಾನ್), “ದಮ್ ಮಾರೋ ದಮ್” (ಹರೇ ರಾಮ ಹರೇ ಕೃಷ್ಣ), ಮತ್ತು “ಚುರಾ ಲಿಯಾ ಹೈ ತುಮ್ನೆ” (ಯಾದೋಂ ಕಿ ಬಾರಾತ್) ನಂತಹ ಹಾಡುಗಳು ಸಾಂಸ್ಕೃತಿಕ ಹೆಗ್ಗುರುತುಗಳಾದವು.
“ಗರಿಬೋಂ ಕಿ ಸುನೋ” (ದಸ್ ಲಾಖ್, 1966) ಗಾಗಿ ಅವರ ಮೊದಲ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದರು.
ಆಶಾ ಭೋಂಸ್ಲೆ ಕೇವಲ ಪಾಪ್ ಅಥವಾ ಫಾಸ್ಟ್ ಹಾಡುಗಳಿಗೆ ಸೀಮಿತವಾಗಲಿಲ್ಲ. 80ರ ದಶಕದಲ್ಲಿ ಗಜಲ್ ಮತ್ತು ಅರೆ-ಶಾಸ್ತ್ರೀಯ ಸಂಗೀತಕ್ಕೆ ಹೊರಳುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದರು. ‘ಉಮ್ರಾವ್ ಜಾನ್’ ಚಿತ್ರದ “ದಿಲ್ ಚೀಜ್ ಕ್ಯಾ ಹೈ” ಮತ್ತು ‘ಇಜಾಜತ್’ ಚಿತ್ರದ “ಮೇರಾ ಕುಚ್ ಸಾಮಾನ್” ಹಾಡುಗಳಿಗಾಗಿ ಅವರು ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಗುಲಾಮ್ ಅಲಿ ಮತ್ತು ಹರಿಹರನ್ ಅವರಂತಹ ಕಲಾವಿದರೊಂದಿಗಿನ ಅವರ ಹಾಡುಗಳು ಅವರ ಸಂಗೀತವನ್ನು  ಮತ್ತಷ್ಟು ವಿಸ್ತರಿಸಿತು. ವಯಸ್ಸಾದ ನಂತರವೂ ಅವರು ಹಾಡಿದ ರಂಗೀಲಾ (1995) ನಂತಹ ಸಿನೆಮಾದ ಹಾಡುಗಳು ಗಲ್ಲಾಪೆಟ್ಟಿಗೆಯನ್ನು ಕೊಳ್ಳೆಹೊಡೆದವು.
ಆಶಾ ಭೋಸ್ಲೆ ಇಲ್ಲದಿದ್ದರೆ, ಹೆಲೆನ್‌ಗೆ ಈ ಮಟ್ಟಿನ ಪ್ರಾಮುಖ್ಯತೆ ಇರುತ್ತಿರಲಿಲ್ಲವೇನೋ? ಓ ಹಸೀನಾ ಜುಲ್ಫೋನ್‌ವಾಲಿ, ಆ ಜಾನೆ ಜಾನ್, ಯೇ ಮೇರಾ ದಿಲ್‌ ಮೊದಲಾದ ಹಾಡುಗಳಿಗೆ, ಆಶಾ ಭೋಸ್ಲೆ ಅವರ ಧ್ವನಿ ಇರದಿದ್ದರೆ ಹೆಲೆನ್‌ರ  ನೃತ್ಯ ಚಲನೆಗಳನ್ನು ಊಹಿಸಿಕೊಳ್ಳುವುದು ಅಸಾಧ್ಯ ಎಂಬಷ್ಟರ ಮಟ್ಟಿಗೆ ಆಶಾ ಅವರ ಹಾಡುಗಳು ಜನಪ್ರಿಯತೆ ಪಡೆದಿದ್ದವು.
ಜವಾನಿ ಜಾನೆ ಮನ್ ಮತ್ತು ದಮ್ ಮಾರೋ ದಮ್‌ ಪಾಪ್‌ ಹಾಡಿನಿಂದ ಹಿಡಿದು,   ಚುರಾ ಲಿಯಾ ಹೈ ತುಮ್ನೆ ಜೋ ದಿಲ್ ಕೋ, ಪಿಯಾ ತು ಅಬ್ ತೋ ಆಜಾ, ಅಭಿ ನ ಜಾವೋ ಛೋಡ್ ಕರ್, ಇನ್ ಆಂಖೋನ್ ಕಿ ಮಸ್ತಿ, ಆಗೇ ಭಿ ಜಾನೆ ನ ತು, ಏಕ್ ಮೈ ಔರ್ ಏಕ್ ತು ಮುಂತಾದ ಪ್ರೇಮಗೀತೆಗಳ ಪ್ರಕಾರ ಹಾಡುಗಳ ವೈವಿಧ್ಯತೆ ಅವರ ಮಾಂತ್ರಿಕ ಧ್ವನಿಗೆ ಸಾಕ್ಷಿಯಾಗಿತ್ತು.
ಹಿನ್ನೆಲೆ ಗಾಯನದ ಹೊರತಾಗಿ, ಅವರು ಮಾಯ್ (2013) ಚಿತ್ರದಲ್ಲಿ ನಟನೆ ಮಾಡಿದರು. 2020 ರಲ್ಲಿ ತಮ್ಮ YouTube ಚಾನೆಲ್ ಅನ್ನು ಪ್ರಾರಂಭಿಸಿದರು. ಅವರು ವಯಸ್ಸಾದ ಮೇಲೆಯೂ ಲೈವ್‌ ಕಾರ್ಯಕ್ರಮಗಳನ್ನು ನೀಡುತ್ತಲೇ ಇದ್ದರು, ಅದರಲ್ಲಿ 2023 ರಲ್ಲಿ ತಮ್ಮ 90 ನೇ ಜನ್ಮದಿನದ ಅಂಗವಾಗಿ ದುಬೈನಲ್ಲಿ ನಡೆದ ಪ್ರಮುಖ ಕಾರ್ಯಕ್ರಮವೂ ಸೇರಿದೆ.
ಪ್ರಶಸ್ತಿಗಳು- ಗೌರವಗಳು
ಸಂಗೀತ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಗೌರವಿಸಿ ಭಾರತ ಸರ್ಕಾರ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (2000) ಮತ್ತು ಪದ್ಮವಿಭೂಷಣ (2008) ನೀಡಿ ಗೌರವಿಸಿದೆ. ಅಲ್ಲದೆ ಮಹಾರಾಷ್ಟ್ರ ಭೂಷಣ, ಏಳು ಫಿಲ್ಮ್‌ಫೇರ್ ಪ್ರಶಸ್ತಿಗಳು ಹಾಗೂ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಗೌರವಕ್ಕೂ ಅವರು ಪಾತ್ರರಾಗಿದ್ದಾರೆ.
ವೈಯಕ್ತಿಕ ಜೀವನ ಮತ್ತು ಆಸಕ್ತಿಗಳು
ಆಶಾ ಅವರು ತಮ್ಮ ಕುಟುಂಬದ ವಿರೋಧದ ನಡುವೆಯೂ 16ನೇ ವಯಸ್ಸಿನಲ್ಲಿ ಮನೆಯಿಂದ ಓಡಿಹೋಗಿ ಗಣಪತರಾವ್ ಭೋಂಸ್ಲೆ ಅವರನ್ನು ಮದುವೆಯಾದರು. ಅವರಿಗೆ ಹೇಮಂತ, ಆನಂದ ಮತ್ತು ವರ್ಷ ಎಂಬ ಮೂವರು ಮಕ್ಕಳಿದ್ದಾರೆ. ನಂತರ  ನಂತರ 1960ರಲ್ಲಿ ಬೇರ್ಪಟ್ಟರು. ನಂತರ ಅವರು ಸಂಗೀತ ನಿರ್ದೇಶಕ ಆರ್.ಡಿ. ಬರ್ಮನ್ ಅವರನ್ನು ವಿವಾಹವಾದರು. ಸಂಗೀತದ ಹೊರತಾಗಿ ಅಡುಗೆ ಮತ್ತು ರೆಸ್ಟೋರೆಂಟ್ ಉದ್ಯಮದಲ್ಲೂ ಅವರು ಆಸಕ್ತಿ ಹೊಂದಿದ್ದರು.
90ನೇ ವಯಸ್ಸಿನಲ್ಲೂ ದುಬೈನಲ್ಲಿ ಲೈವ್ ಕಾನ್ಸರ್ಟ್ ನೀಡಿದ್ದ ಆಶಾ ಭೋಂಸ್ಲೆ ಅವರು ಕೊನೆಯವರೆಗೂ ಸಂಗೀತದೊಂದಿಗಿನ ಬಾಂಧವ್ಯವನ್ನು ಕಡಿದುಕೊಳ್ಳಲಿಲ್ಲ. ಅವರ ನಿಧನದೊಂದಿಗೆ ಭಾರತೀಯ ಸಂಗೀತ ಲೋಕದ ಒಂದು ಸುವರ್ಣ ಅಧ್ಯಾಯ ಅಂತ್ಯಗೊಂಡಂತಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement