ಭಾರತದ ಗಾಯಕಿ ಆಶಾ ಭೋಂಸ್ಲೆ ಸ್ಮರಣಾರ್ಥ ಕಾರ್ಯಕ್ರಮ ಬಿತ್ತರಿಸಿದ್ದಕ್ಕೆ ಪಾಕಿಸ್ತಾನದ ಪ್ರಮುಖ ಟಿವಿ ಚಾನೆಲ್‌ಗೆ ಸರ್ಕಾರದ ನೋಟಿಸ್…!

ಮುಂಬೈ: ಎಂಟು ದಶಕಗಳ ಕಾಲ ತನ್ನ ಕಂಠಸಿರಿಯಿಂದ ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದ ಭಾರತೀಯ ಚಿತ್ರ ರಂಗದ ಮಹಾನ್‌ ಹಿನ್ನೆಲೆ ಗಾಯಕಿ, ಪದ್ಮವಿಭೂಷಣ ಆಶಾ ಭೋಂಸ್ಲೆ (ಆಶಾ ತಾಯಿ) ಏಪ್ರಿಲ್ 12ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. ಅವರ ನಿಧನವು ಇಡೀ ರಾಷ್ಟ್ರಕ್ಕೆ ಆಘಾತ ತಂದಿದ್ದು, ಭಾರತೀಯ ಚಿತ್ರರಂಗದ ಒಂದು ಸುವರ್ಣ ಯುಗ ಅಂತ್ಯಗೊಂಡಿದೆ. ಏಪ್ರಿಲ್ 13ರಂದು ಮುಂಬೈನ ಪ್ರಸಿದ್ಧ ಶಿವಾಜಿ ಪಾರ್ಕ್ ಚಿತಾಗಾರದಲ್ಲಿ ಆಶಾ ಭೋಂಸ್ಲೆ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ಆದರೆ ಪಾಕಿಸ್ತಾನದಲ್ಲಿ ಆಶಾ ಭೋಂಸ್ಲೆ ಅವರ ನಿಧನದ ಸುದ್ದಿಯನ್ನು ಬಿತ್ತರಿಸಿದ್ದಕ್ಕಾಗಿ ಪಾಕಿಸ್ತಾನದ ಎಲೆಕ್ಟ್ರಾನಿಕ್ ಮೀಡಿಯಾ ರೆಗ್ಯುಲೇಟರಿ ಅಥಾರಿಟಿ (PEMRA), ಅಲ್ಲಿನ ಖ್ಯಾತ ಸುದ್ದಿ ವಾಹಿನಿಯೊಂದಕ್ಕೆ ‘ಶೋಕಾಸ್’ ನೋಟಿಸ್ ಜಾರಿ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಜಿಯೋ ನ್ಯೂಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಅಜರ್ ಅಬ್ಬಾಸ್, ತಮ್ಮ ‘X’ ಖಾತೆಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಆಶಾ ಭೋಂಸ್ಲೆ ಅವರ ಕುರಿತಾದ ವರದಿ ಮತ್ತು ಹಾಡುಗಳನ್ನು ಪ್ರಸಾರ ಮಾಡಿದ್ದಕ್ಕಾಗಿ PEMRA ತನ್ನ ವಾಹಿನಿಗೆ ನೋಟಿಸ್ ನೀಡಿದೆ ಎಂದು ಅವರು ಆರೋಪಿಸಿದ್ದಾರೆ.
“ಆಶಾ ಭೋಂಸ್ಲೆ ಅವರಂತಹ ಮಹಾನ್ ಕಲಾವಿದರು ನಿಧನರಾದಾಗ ಅವರ ಸಾಧನೆಯನ್ನು ಗೌರವಿಸುವುದು ಮತ್ತು ನೆನಪಿಸಿಕೊಳ್ಳುವುದು ಮಾಧ್ಯಮಗಳ ಸಂಪ್ರದಾಯ. ವಾಸ್ತವವಾಗಿ ನಾವು ಅವರ ಇನ್ನೂ ಹೆಚ್ಚಿನ ಹಾಡುಗಳನ್ನು ಪ್ರಸಾರ ಮಾಡಬೇಕಿತ್ತು. ಆದರೆ ಪಾಕಿಸ್ತಾನದ ಮಾಧ್ಯಮ ನಿಯಂತ್ರಕ ಸಂಸ್ಥೆಯು ಇದನ್ನು ನಿರ್ಬಂಧಿಸಲು ಯತ್ನಿಸುತ್ತಿದೆ. ಕಲೆ ಮತ್ತು ಜ್ಞಾನ ಎಂಬುದು ಇಡೀ ಮಾನವಕುಲದ ಆಸ್ತಿ, ಇದನ್ನು ಗಡಿಗಳ ಒಳಗೆ ಬಂಧಿಸಿಡಲು ಸಾಧ್ಯವಿಲ್ಲ” ಎಂದು ಅವರು ಕಿಡಿಕಾರಿದ್ದಾರೆ.
ಯುದ್ಧ ಮತ್ತು ಸಂಘರ್ಷದ ಸಂದರ್ಭಗಳಲ್ಲಿ ಕಲೆ ಮತ್ತು ಕಲಾವಿದರು ಬಲಿಯಾಗಬಾರದು. ಬುದ್ಧಿಜೀವಿಗಳು ಮತ್ತು ಸಂಗೀತಗಾರರು ಯಾವಾಗಲೂ ದ್ವೇಷ ಮತ್ತು ವಿಭಜನೆಯ ವಿರುದ್ಧ ಧ್ವನಿ ಎತ್ತುವವರು ಮತ್ತು ಜನರನ್ನು ಹತ್ತಿರ ತರುವವರು ಎಂದು ಅಬ್ಬಾಸ್ ಅಭಿಪ್ರಾಯಪಟ್ಟಿದ್ದಾರೆ.

ನೂರ್ ಜಹಾನ್ ಜೊತೆಗಿನ ಬಾಂಧವ್ಯ:
ಆಶಾ ಅವರು ಅವರು ಪಾಕಿಸ್ತಾನದ ಖ್ಯಾತ ಗಾಯಕಿ ನೂರ್ ಜಹಾನ್ ಅವರನ್ನು ಪ್ರೀತಿಯಿಂದ ‘ದೊಡ್ಡಕ್ಕ’ ಎಂದು ಕರೆಯುತ್ತಿದ್ದರು. ಅಲ್ಲದೆ, ಅವರು ನುಸ್ರತ್ ಫತೇ ಅಲಿ ಖಾನ್ ಅವರ ಜೊತೆಯೂ ಕೆಲಸ ಮಾಡಿದ್ದರು ಮತ್ತು ನಾಸಿರ್ ಕಾಜ್ಮಿಯಂತಹ ಶ್ರೇಷ್ಠ ಉರ್ದು ಕವಿಗಳ ಸಾಹಿತ್ಯಕ್ಕೆ ಧ್ವನಿಯಾಗಿದ್ದರು ಎಂಬುದನ್ನು ಅವರು ಪಾಕಿಸ್ತಾನ ಆಡಳಿತಕ್ಕೆ ನೆನಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪಾಕಿಸ್ತಾನಿ ಪತ್ರಕರ್ತ ರೌಫ್ ಕ್ಲಾಸ್ರಾ, ಹಿರಿಯ ಗಾಯಕಿ ಆಶಾ ಭೋಸ್ಲೆ ಬಗ್ಗೆ ವಿಷಯವನ್ನು ತೋರಿಸಿದ್ದಕ್ಕಾಗಿ PEMRA ಹೇಗೆ ನೋಟಿಸ್ ನೀಡುತ್ತದೆ ಎಂದು ಪ್ರಶ್ನಿಸಿದ್ದಾರೆ. “ಆಶಾ ಅವರು ತಮ್ಮ ಮಧುರ ಧ್ವನಿಯಿಂದ ಉಪಖಂಡದ ಹಲವು ತಲೆಮಾರುಗಳನ್ನು ರಂಜಿಸಿದ್ದಾರೆ. ಅವರು ಗೌರವಕ್ಕೆ ಅರ್ಹರು” ಎಂದು ಅವರು ಬರೆದಿದ್ದಾರೆ.
8 ದಶಕಗಳ ವೃತ್ತಿಜೀವನದಲ್ಲಿ ಆಶಾ ಭೋಂಸ್ಲೆ ಅವರು 12,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ‘ಅಭಿ ನಾ ಜಾವೋ ಛೋಡ್ ಕರ್’ ನಂತಹ ಸುಪ್ರಸಿದ್ಧ ಗೀತೆಗಳ ಮೂಲಕ ಅವರು ಎಂದೆಂದಿಗೂ ಅಮರರಾಗಿದ್ದಾರೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement