ಹಬ್ಬು ಸಮುದಾಯ ಒಂದು ಜನಾಂಗೀಯ ಅಧ್ಯಯನ ಕೃತಿ ಬಿಡುಗಡೆ

ಕಾರವಾರ: ಅನ್ನ ಹಾಗೂ ಅಕ್ಷರ ತೋರಿಸಿದ ಹಬ್ಬು ಬ್ರಾಹ್ಮಣರ ಕುರಿತು ಎಲ್ಲ ದಾಖಲೆ ಪರಿಶೀಲಿಸಿ ನಮ್ಮಲ್ಲಿ ಯಾವುದೆ ಗೊಂದಲ ಇರದ ಹಾಗೆ ಆರ್.ಎಸ್. ಹಬ್ಬು ಕೃತಿ ನೀಡಿದ್ದಾರೆ ಎಂದು ಪರಿಸರ ತಜ್ಞ ಶಿವಾನಂದ ಕಳವೆ ಅಭಿಪ್ರಾಯಪಟ್ಟರು.
ನಗರದ ರಾಘವೇಂದ್ರ ಮಠದ ಸಭಾಭವನದಲ್ಲಿ ಆರ್.ಎಸ್.ಹಬ್ಬು ಅವರ ʼಹಬ್ಬು ಸಮುದಾಯʼ ಒಂದು ಜನಾಂಗೀಯ ಅಧ್ಯಯನ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕೃಷಿ ಬಿಟ್ಟು ಇಡಿ ಹವ್ಯಕ ತಲೆಮಾರು ನಗರದಲ್ಲಿ ಕಳೆದುಹೋದ ಕಾಲದಲ್ಲಿ ನಾವಿದ್ದೇವೆ. ಮೊದಲು ಕೃಷಿ ಆರಂಭಿಸಿದ ಒಂದು ಸಮುದಾಯದ ಕುರಿತು ಈಗ ಕೃತಿ ಬಂದಿದೆ ಎಂದರು.
ನಾವು ಜಗತ್ತಿನ ಎಲ್ಲದರ ಬಗ್ಗೆ ಓದುತ್ತೇವೆ. ಆದರೆ ನಮ್ಮ ನೆಲದ ಬಗ್ಗೆ ಓದುವುದಿಲ್ಲ. ಅನ್ನದ ಒಳಗಿನ ಸತ್ಯ ಅರ್ಥವಾಗಬೇಕಾದರೆ ಕಾರವಾರದ ಹಬ್ಬುವಾಡಕ್ಕೆ ಬರಬೇಕು. ಹಬ್ಬು ಸಮುದಾಯ ಕಡಿಮೆ ಆಗುತ್ತಿದೆ. ವಯಸ್ಸಾದವರು ಮಾತ್ರ ಹಳ್ಳಿಗಳಲ್ಲಿ ಇದ್ದಾರೆ ಎನ್ನುತ್ತಾರೆ. ಆದರೆ ಎಲ್ಲ ಸಮುದಾಯದಲ್ಲೂ ಇದೇ ಕತೆ ಇದೆ. ಕಾಲದ ಕೊಂಡಿಗಳು ಕಳಚುತ್ತಿದೆ. ಹಬ್ಬುಗಳು ಮಾಧ್ಯಮ, ಶಿಕ್ಷಣ, ಕೃಷಿ, ಎಲ್ಲೆಡೆ ಕೆಲಸ ಮಾಡಿದ್ದಾರೆ. ಇವರ ಸಂಖ್ಯೆ ಕಡಿಮೆಯಾದರೂ ವಿವಿಧ ಕ್ಷೇತ್ರಗಳಿಗೆ ಗಣನೀಯ ಕೊಡುಗೆ ನೀಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ, ಲೇಖಕ ಅಶೋಕ ಹಾಸ್ಯಗಾರ, ಹಬ್ಬು ಸಮುದಾಯ ಜನಗಣತಿಯಲ್ಲಿ ಹಬ್ಬು ಎಂದು ದಾಖಲಿಸಬೇಕು. ಹಬ್ಬುವಾಡ, ಹಬ್ಬುಚಿಟ್ಟೆ ಈ ಹೆಸರನ್ನು ಕಾಪಾಡಿಕೊಳ್ಳಲು ಸ್ಥಳೀಯ ಸಂಸ್ಥೆಗಳಲ್ಲಿ ದಾಖಲಿಸಬೇಕು ಎಂದರು.
ಹಬ್ಬು ಸಮುದಾಯ ಶಿಕ್ಷಣ ಮತ್ತು ಕೃಷಿಯಲ್ಲಿ ತೊಡಗಿಕೊಂಡವರಾಗಿರುವುದರಿಂದ ಹಬ್ಬು ಸಮುದಾಯದ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಯಲ್ಲಿ ಅತ್ಯುತ್ತಮ ವಿದ್ಯಾರ್ಥಿಗೆ ಪದಕಗಳನ್ನು ನೀಡುವಂತಾಗಬೇಕು ಎಂದರು.
ಆರ್.ಎಸ್. ಹಬ್ಬು ಕೃತಿಯ ಕುರಿತು ಮಾಹಿತಿ ನೀಡಿದರು. ಎಂ.ಎಸ್. ಹಬ್ಬು ಪ್ರಾಸ್ತಾವಿಕವಾಗಿ ಮಾತನಾಡಿದರು. ಯಶೋಧಾ ಹೆಗಡೆ ಸ್ವಾಗತಿಸಿದರು. ರಜತ ಹಬ್ಬು ವಂದಿಸಿದರು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement