
ನವದೆಹಲಿ: ಭಾರತೀಯ ರಾಜಕಾರಣದಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ ಐತಿಹಾಸಿಕ ‘ಮಹಿಳಾ ಮೀಸಲಾತಿ ಕಾಯ್ದೆ, 2023’ (ನಾರಿ ಶಕ್ತಿ ವಂದನ್ ಅಧಿನಿಯಮ) ಏಪ್ರಿಲ್ 16, 2026 ರಿಂದ ಜಾರಿಗೆ ಬಂದಿದೆ ಎಂದು ಕೇಂದ್ರ ಕಾನೂನು ಸಚಿವಾಲಯ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಕಾಯ್ದೆ ಜಾರಿಗೆ ಬಂದಿದ್ದರೂ, ಪ್ರಸಕ್ತ ಲೋಕಸಭೆಯಲ್ಲಿ ಈ ಮೀಸಲಾತಿ ಅನ್ವಯವಾಗುವುದಿಲ್ಲ. ಮುಂದಿನ ಜನಗಣತಿಯ ನಂತರ ನಡೆಯಲಿರುವ ಕ್ಷೇತ್ರ ಪುನರ್ ವಿಂಗಡಣೆಯ ಪ್ರಕ್ರಿಯೆ ಮುಗಿದ ಬಳಿಕವಷ್ಟೇ ಮೀಸಲಾತಿಯನ್ನು ಜಾರಿಗೆ ತರಲು ಸಾಧ್ಯ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸಂಸತ್ತಿನಲ್ಲಿ ಈ ಕಾಯ್ದೆಯ ಅನುಷ್ಠಾನದ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಸರ್ಕಾರ ಈ ಅಧಿಸೂಚನೆ ಹೊರಡಿಸಿರುವುದು ಕುತೂಹಲ ಮೂಡಿಸಿದೆ. ತಾಂತ್ರಿಕ ಕಾರಣಗಳಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.

ಪ್ರಮುಖ ಅಂಶಗಳು
“ಸಂವಿಧಾನದ (106ನೇ ತಿದ್ದುಪಡಿ) ಕಾಯ್ದೆ, 2023ರ ಸೆಕ್ಷನ್ 1ರ ಸಬ್-ಸೆಕ್ಷನ್ (2) ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಬಳಸಿ, ಕೇಂದ್ರ ಸರ್ಕಾರವು 2026ರ ಏಪ್ರಿಲ್ 16 ಅನ್ನು ಈ ಕಾಯ್ದೆಯ ನಿಬಂಧನೆಗಳು ಜಾರಿಗೆ ಬರುವ ದಿನಾಂಕವೆಂದು ನಿಗದಿಪಡಿಸಿದೆ” ಎಂದು ಪ್ರಕಟಣೆ ತಿಳಿಸಿದೆ.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಕನಿಷ್ಠ ಮೂರನೇ ಒಂದು ಭಾಗದಷ್ಟು (ಶೇ. 33) ಸ್ಥಾನಗಳನ್ನು ಮೀಸಲಿಡುವುದು ಈ ಕಾಯ್ದೆಯ ಮುಖ್ಯ ಉದ್ದೇಶ.
ಮೂಲ ಚೌಕಟ್ಟಿನ ಪ್ರಕಾರ 2027ರ ನಂತರದ ಜನಗಣತಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆಯ ನಂತರ (ಅಂದರೆ 2034ರಲ್ಲಿ) ಇದು ಜಾರಿಯಾಗಬೇಕಿತ್ತು. ಆದರೆ, 2029ರ ವೇಳೆಗೆ ಇದನ್ನು ಅನುಷ್ಠಾನಗೊಳಿಸಲು ಸರ್ಕಾರ ಈಗ ಲೋಕಸಭೆಯಲ್ಲಿ ಮೂರು ಹೊಸ ಮಸೂದೆಗಳನ್ನು ಮಂಡಿಸಿದೆ.
ಪ್ರಧಾನಿ ಮೋದಿ ಭರವಸೆ
ಮಹಿಳಾ ಮೀಸಲಾತಿ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, 2029ರ ಲೋಕಸಭಾ ಚುನಾವಣೆಯಿಂದಲೇ ಈ ಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಬಲವಾಗಿ ಪ್ರತಿಪಾದಿಸಿದರು.
“ರಾಷ್ಟ್ರದ ಪಯಣದಲ್ಲಿ ಕೆಲವು ಕ್ಷಣಗಳು ಅತ್ಯಂತ ನಿರ್ಣಾಯಕವಾಗಿರುತ್ತವೆ. ಸಮಾಜದ ಚಿಂತನೆ ಮತ್ತು ನಾಯಕತ್ವದ ಸಾಮರ್ಥ್ಯವು ಒಂದಾಗಿ ಇಂತಹ ಅವಕಾಶಗಳನ್ನು ರಾಷ್ಟ್ರೀಯ ಆಸ್ತಿಯನ್ನಾಗಿ ಪರಿವರ್ತಿಸಬೇಕು. ಭಾರತದ ಸಂಸದೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇದು ಅಂತಹ ಒಂದು ಮಹತ್ವದ ಕ್ಷಣವಾಗಿದೆ ಎಂದು ಹೇಳಿದ್ದಾರೆ.
ತಮ್ಮ ಹಕ್ಕುಗಳನ್ನು ವಿರೋಧಿಸಿದವರನ್ನು ಮಹಿಳೆಯರು ಮರೆತಿಲ್ಲ ಎಂದು ನೆನಪಿಸಿದ ಪ್ರಧಾನಿ, ಈ ಐತಿಹಾಸಿಕ ಅವಕಾಶವನ್ನು ಕೈಬಿಡಬೇಡಿ ಎಂದು ಸಂಸದರಲ್ಲಿ ಮನವಿ ಮಾಡಿದರು. ಸದನದಲ್ಲಿ ಸದಸ್ಯರು ಎತ್ತಿರುವ ವಿವಿಧ ಸಮಸ್ಯೆಗಳಿಗೆ ಸರ್ಕಾರವು ವಿವರವಾದ ಉತ್ತರ ನೀಡಲಿದೆ ಎಂದು ಅವರು ಭರವಸೆ ನೀಡಿದರು.


ನಿಮ್ಮ ಕಾಮೆಂಟ್ ಬರೆಯಿರಿ