ವಿಡಿಯೊ | ಸಭೆಯ ನಡುವೆಯೇ ಎಂಟ್ರಿ ಕೊಟ್ಟು ಜಿಲ್ಲಾಧಿಕಾರಿ ಕುರ್ಚಿಯ ಮೇಲೆ ಕುಳಿತ ಮಂಗ

ಉತ್ತರ ಪ್ರದೇಶದ  ಬಾಗಪತ್ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಪರೂಪದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಧಿಕಾರಿಯೊಬ್ಬರ ಪ್ರಾಣಿ ಪ್ರೇಮ ಮತ್ತು ಶಾಂತ ಸ್ವಭಾವ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಬಾಗಪತ್ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ‘ರೈತರ ದಿನಾಚರಣೆ’ ಅಂಗವಾಗಿ ಜಿಲ್ಲಾಧಿಕಾರಿಗಳು ಹಾಗೂ ರೈತರ ನಡುವೆ ಮಹತ್ವದ ಸಭೆ ನಡೆಯುತ್ತಿತ್ತು. ಜಿಲ್ಲಾಧಿಕಾರಿ ಅಸ್ಮಿತಾ ಲಾಲ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸೂರಜಕುಮಾರ ರಾಯ್‌ ಅವರು ರೈತರ ಸಮಸ್ಯೆಗಳನ್ನು ಆಲಿಸುತ್ತಿದ್ದ ಸಂದರ್ಭದಲ್ಲಿ, ಅನಿರೀಕ್ಷಿತ ಅತಿಥಿಯೊಬ್ಬರು ಸಭಾಂಗಣ ಪ್ರವೇಶಿಸಿದರು. ಅದು ಜಿಲ್ಲಾಧಿಕಾರಿ ಅಸ್ಮಿತಾ ಲಾಲ್ ಅವರ ಮುದ್ದಿನ ಲಂಗೂರ್ (ಮಂಗ) ‘ಮಾತೃ’. ಸಭೆಯ ಗಂಭೀರತೆಯ ನಡುವೆ ದಿಢೀರನೆ ಪ್ರವೇಶಿಸಿದ ಮಂಗವನ್ನು ಕಂಡು ಅಧಿಕಾರಿಗಳು ಮತ್ತು ಸಿಬ್ಬಂದಿ ಕ್ಷಣಕಾಲ ಅಚ್ಚರಿಗೊಳಗಾದರು.

ಮಂಗ ನೇರವಾಗಿ ಜಿಲ್ಲಾಧಿಕಾರಿಗಳು ಕುಳಿತಿದ್ದ ಮೇಜಿನ ಬಳಿಗೇ ಸಾಗಿತು. ಈ ವೇಳೆ ಕಿಂಚಿತ್ತೂ ಗಾಬರಿಗೊಳ್ಳದ ಜಿಲ್ಲಾಧಿಕಾರಿ ಅಸ್ಮಿತಾ ಅತ್ಯಂತ ಶಾಂತಚಿತ್ತರಾಗಿ ತಮ್ಮ ಸೀಟಿನಿಂದ ಎದ್ದು ನಿಂತು, ಮಂಗನಿಗೆ “ಇಲ್ಲೇ ಕುಳಿತುಕೋ” ಎಂದು ಸನ್ನೆ ಮಾಡಿದರು. ತಕ್ಷಣವೇ ಆ ಲಂಗೂರು ಜಿಲ್ಲಾಧಿಕಾರಿಗಳ ಕುರ್ಚಿಯ ಮೇಲೆ ಆಸೀನವಾಯಿತು.
ಮೂಕ ಪ್ರಾಣಿಯ ಮೇಲಿನ ಕಾಳಜಿ ಮತ್ತು ಮಾನವೀಯತೆಯನ್ನು ಕಂಡು ಅಲ್ಲಿದ್ದವರು ಬೆರಗಾದರು. ಈ ಅಪರೂಪದ ಕ್ಷಣವನ್ನು ಅಲ್ಲಿ ನೆರೆದಿದ್ದವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ. ಸ್ವಲ್ಪ ಸಮಯದ ನಂತರ, ಅಧಿಕಾರಿಗಳು ಮಂಗವನ್ನು ನಯವಾಗಿ ಎತ್ತಿಕೊಂಡು ಸಭಾಂಗಣದಿಂದ ಹೊರಗೆ ಕರೆದೊಯ್ದರು.

ಯಾರು ಈ ಅಸ್ಮಿತಾ ಲಾಲ್ ?
ಪ್ರಾಣಿ ಪ್ರೇಮದ ಮೂಲಕ ಸುದ್ದಿಯಾಗಿರುವ ಅಸ್ಮಿತಾ ಲಾಲ್ 2015ನೇ ಬ್ಯಾಚ್‌ನ ಐಎಎಸ್ (IAS) ಅಧಿಕಾರಿ. ಅವರು ಮೂಲತಃ ದೆಹಲಿಯವರು. ಪದವಿ ಮುಗಿಸಿದ ನಂತರ ಸಿವಿಲ್ ಸರ್ವಿಸ್ ಪರೀಕ್ಷೆಗೆ ಸಿದ್ಧತೆ ನಡೆಸಿ, ಸೆಪ್ಟೆಂಬರ್ 7, 2015 ರಂದು ಐಎಎಸ್ ಅಧಿಕಾರಿಯಾಗಿ ನೇಮಕಗೊಂಡರು. ಜನವರಿ 18, 2025 ರಿಂದ ಬಾಗಪತ್ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅಸ್ಮಿತಾ ಲಾಲ್ ಅವರು ತಮ್ಮ ಕೆಲಸದ ಶೈಲಿ ಮತ್ತು ಸೂಕ್ಷ್ಮ ಮನೋಭಾವಕ್ಕೆ ಹೆಸರುವಾಸಿಯಾದವರು. ತಮ್ಮ ಮುದ್ದಿನ ಮಂಗ ‘ಮಾತೃ’ವಿನ ಜೊತೆಗಿನ ಇವರ ವಿಡಿಯೋಗಳು ಈ ಹಿಂದೆಯೂ ಸುದ್ದಿಯಾಗಿದ್ದು, ಪ್ರಾಣಿಗಳ ಮೇಲಿನ ಇವರ ಅಪಾರ ಪ್ರೀತಿಯನ್ನು ಸಾಬೀತುಪಡಿಸಿವೆ.

ಪ್ರಮುಖ ಸುದ್ದಿ :-   ಕೇವಲ 23ನೇ ವಯಸ್ಸಿಗೆ 19 ಸರ್ಕಾರಿ ಪರೀಕ್ಷೆ ಪಾಸ್ ! ರಾಷ್ಟ್ರಪತಿಯಿಂದ 'ಅಟ್-ಹೋಮ್' ಗೌರವಕ್ಕೆ ಆಯ್ಕೆಯಾದ ಯುವತಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement