
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರಿನ ಸಮೇತ ಚಾಲಕ ಸುಟ್ಟುಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ವ್ಯಕ್ತಿಯನ್ನು ಕೊಲೆ ಮಾಡಿ, ನಂತರ ಕೃತ್ಯವನ್ನು ಮುಚ್ಚಿಹಾಕಲು ಅರೆಬೈಲ್ ಘಟ್ಟದಲ್ಲಿ ಕಾರು ಸಮೇತ ವ್ಯಕ್ತಿಯನ್ನು ಸುಟ್ಟು ಹಾಕಿ ಇದನ್ನು ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೃತ ವ್ಯಕ್ತಿಯನ್ನು ಬೆಳಗಾವಿ ಮೂಲದ ನಿತೀಶ ಧಾಪಳೆ (35) ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹಳೆ ಹುಬ್ಬಳ್ಳಿಯ ದಾದಾಪೀರ್ ಅಪ್ತಾಬ್ (22), ಅಬ್ದುಲ್ ನಹೀಮ್ (32) ಹಾಗೂ ಮೌಲಾಸಾಬ್ (36) ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನಿತೀಶ್ ಧಾಪಳೆಯನ್ನು ಆತನ ಸಹಚರರು ಕೊಲೆ ಮಾಡಿದ್ದು, ನಂತರ ಯಲ್ಲಾಪುರದ ಅರೆಬೈಲ್ ಘಟ್ಟಕ್ಕೆ ತಂದು ಕಾರು ಸಮೇತ ಸುಟ್ಟು ಹಾಕಿದ್ದರು. ಏಪ್ರಿಲ್ 8 ರಂದು ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಯಲ್ಲಾಪುರದ ತಾಳೆ ಕುಂಬ್ರಿ ಬಸ್ ನಿಲ್ದಾಣದ ಎದುರು ಕಾರೊಂದು ರಸ್ತೆಯ ತಗ್ಗಿನಲ್ಲಿ ಅಪಘಾತಕ್ಕೀಡಾಗಿ ಬೆಂಕಿಗೆ ಸುಟ್ಟುಹೋದ ಸ್ಥಿತಿಯಲ್ಲಿ ಕಂಡುಬಂದಿತ್ತು. ಕಾರಿನಲ್ಲಿದ್ದ ವ್ಯಕ್ತಿ ಸುಟ್ಟು ಕರಕಲಾಗಿದ್ದ. ಮೊದಲು ಅಪಘಾತದ ಸಾವು ಎಂದು ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಆದರೆ ಬೆಳಗಾವಿಯ ಜಗನ್ನಾಥ ಧಾಪಳೆ ಎಂಬವರು ತಮ್ಮ ಮಗನನ್ನು ಕೊಲೆ ಮಾಡಿ ಪ್ರಕರಣದ ದಿಕ್ಕು ತಪ್ಪಿಸಲು ಈ ರೀತಿ ರಸ್ತೆ ಅಪಘಾತದ ಸುಳ್ಳು ಸೃಷ್ಟಿಸಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದರು.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಸೂಚನೆಯಂತೆ, ಯಲ್ಲಾಪುರ ಪೊಲೀಸ್ ನಿರೀಕ್ಷಕ ರಮೇಶ ಹನಾಪುರ ನೇತೃತ್ವದಲ್ಲಿ 2 ಪ್ರತ್ಯೇಕ ತಂಡಗಳನ್ನು ರಚಿಸಲಾಯಿತು. ಕಾರಿನ ಅವಶೇಷಗಳು, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಖಚಿತ ಮಾಹಿತಿಯ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರಿಗೆ ಇದು ವೈಯಕ್ತಿಕ ದ್ವೇಷಕ್ಕಾಗಿ ನಡೆದ ಕೊಲೆ ಹಾಗೂ ಸಾಕ್ಷ್ಯ ನಾಶ ಮಾಡಲು ಶವವನ್ನು ವಾಹನ ಸಮೇತ ಸುಟ್ಟು ಹಾಕಲಾಗಿದೆ ಎಂಬುದು ಕಂಡುಬಂದಿತ್ತು. ನಂತರ ಪ್ರಕರಣದ ಜಾಡು ಹಿಡಿದು ಕಾರ್ಯಾಚರಣೆ ನಡೆಸಿದ ಪೊಲೀಸರು ಹಳೆ ಹುಬ್ಬಳ್ಳಿ ಮೂಲದ ಅಬ್ದುಲ್ ನಹೀಮ್, ಮೌಲಾಸಾಬ ಹಾಗೂ ದಾದಾಪೀರ ಅಪ್ತಾಬ್ ಅವರನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಬಲೆನೊ ಕಾರು, ಬರ್ಗ್‌ಮ್ಯಾನ್ ಮತ್ತು ಆಕ್ಟಿವಾ ಸ್ಕೂಟರ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ