
ಲಕ್ನೋ: ಲೋಕಸಭೆಯ ವಿಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬ್ರಿಟಿಷ್ ಪೌರತ್ವದ ಆರೋಪಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸುವಂತೆ ಕೋರಿ ಬಿಜೆಪಿ ಕಾರ್ಯಕರ್ತರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ, ಅಲಹಾಬಾದ್ ಹೈಕೋರ್ಟ್ ಸೋಮವಾರ ಅರ್ಜಿದಾರರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಾಲಯದ ಕಾರ್ಯವೈಖರಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಾಕುವ ಮೂಲಕ ನ್ಯಾಯಾಲಯದ ಘನತೆಗೆ ಚ್ಯುತಿ ತರಲಾಗಿದೆ ಎಂದು ಕಿಡಿಕಾರಿದ ನ್ಯಾಯಮೂರ್ತಿಗಳು, ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ (Recusal).
ಲಕ್ನೋ ಪೀಠದ ನ್ಯಾಯಮೂರ್ತಿ ಸುಭಾಷ ವಿದ್ಯಾರ್ಥಿ ಅವರು ಅರ್ಜಿದಾರ ವಿಘ್ನೇಶ ಶಿಶಿರ ಅವರ ಆನ್ಲೈನ್ ಪೋಸ್ಟ್ಗಳು ಮತ್ತು ಮಾಧ್ಯಮ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಈ ಹಿಂದೆ ಇದೇ ಪೀಠವು ಈ ವಿಷಯದಲ್ಲಿ ರಾಹುಲ್ ಗಾಂಧಿಯವರಿಗೆ ನೋಟಿಸ್ ನೀಡುವ ಸೂಚನೆ ನೀಡಿದ ನಂತರ ಇದು ನಡೆದಿದೆ.

ವಿಚಾರಣೆಯ ಸಂದರ್ಭದಲ್ಲಿ, ವಿಘ್ನೇಶ ಶಿಶಿರ್ ಅವರು ನ್ಯಾಯಾಲಯದ ಬಗ್ಗೆ ಸಾರ್ವಜನಿಕವಾಗಿ “ಅಸಮಾಧಾನ” ವ್ಯಕ್ತಪಡಿಸಿರುವುದು ಮತ್ತು ತಮಗೆ ಅನ್ಯಾಯವಾಗುತ್ತಿದೆ ಎಂದು ಹೇಳಿಕೊಂಡಿರುವುದನ್ನು ನ್ಯಾಯಾಲಯ ಗಮನಿಸಿತು. ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸುಭಾಷ ವಿದ್ಯಾರ್ಥಿ, “ನಮ್ಮ ಬೆನ್ನಿನ ಹಿಂದೆ ಕೆಸರು ಎರಚುವುದು ಎಷ್ಟು ಸಮರ್ಥನೀಯ? ನ್ಯಾಯಾಲಯದ ವಿರುದ್ಧ ಮಾತನಾಡುವುದು ಸರಿಯೇ? ನೀವು ಮಾಧ್ಯಮಗಳಲ್ಲಿ ಎಂತಹ ಹೇಳಿಕೆಗಳನ್ನು ನೀಡುತ್ತಿದ್ದೀರಿ… ನೀವು ನ್ಯಾಯಾಲಯವನ್ನು ನಿಮ್ಮ ರಾಜಕೀಯ ಅಖಾಡದ ಭಾಗವಾಗಿ ಮಾಡುತ್ತಿದ್ದೀರಿ,” ಎಂದು ಅಸಮಾಧಾನ ವ್ಯಕ್ತಪಡಿಸಿದರು ಎಂದು ಲೈವ್ ಲಾ ಉಲ್ಲೇಖಿಸಿದೆ. ಅಲ್ಲದೆ, ಈ ಪ್ರಕರಣದ ವಿಚಾರಣೆ ನಡೆಸಿದ್ದಕ್ಕಾಗಿ ತಾವು ವಿಷಾದಿಸುವುದಾಗಿ ಅವರು ತಿಳಿಸಿದರು.
ಸಾಮಾಜಿಕ ಜಾಲತಾಣದ ನಡವಳಿಕೆ:
ಪ್ರಕರಣವು ಇದೇ ಪೀಠದ ಮುಂದೆ ಮುಂದುವರಿಯಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಶಿಶಿರ್ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿದ್ದರು ಮತ್ತು ಈ ವಿಷಯದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಮಧ್ಯಸ್ಥಿಕೆ ಕೋರಿದ್ದರು. ಇಂತಹ ನಡವಳಿಕೆಯು ನ್ಯಾಯಾಲಯದ ಮೇಲೆ ಸಂಶಯ ವ್ಯಕ್ತಪಡಿಸುವಂತಿದ್ದು, ಅದರ ಘನತೆಗೆ ಹಾನಿ ಉಂಟುಮಾಡುತ್ತದೆ ಎಂದು ಪೀಠವು ಹೇಳಿತು.
ವಿಚಾರಣೆಯ ಸಂದರ್ಭದಲ್ಲಿ ಸರ್ಕಾರಿ ವಕೀಲರು ಮತ್ತು ಭಾರತದ ಡೆಪ್ಯುಟಿ ಸಾಲಿಸಿಟರ್ ಜನರಲ್ ಇಬ್ಬರೂ ಅರ್ಜಿದಾರರ ಸಾಮಾಜಿಕ ಜಾಲತಾಣದ ಪೋಸ್ಟ್ಗಳು ಅಸಮರ್ಥನೀಯ ಎಂದು ಒಪ್ಪಿಕೊಂಡರು.
ಏಪ್ರಿಲ್ 17 ರಂದು ಇದೇ ಪೀಠವು ಮುಕ್ತ ನ್ಯಾಯಾಲಯದಲ್ಲಿ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಲು ಸೂಚನೆ ನೀಡಿತ್ತು. ಆದರೆ ಏಪ್ರಿಲ್ 18 ರಂದು ಆದೇಶದ ಪ್ರತಿಯನ್ನು ಅಪ್ಲೋಡ್ ಮಾಡುವಾಗ, ರಾಹುಲ್ ಗಾಂಧಿ ಅವರಿಗೆ ತಮ್ಮ ವಾದ ಮಂಡಿಸಲು ಅವಕಾಶ ನೀಡಬೇಕಾಗಬಹುದು ಎಂದು ಅಭಿಪ್ರಾಯಪಟ್ಟು, ತನ್ನದೇ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು.
ರಾಹುಲ್ ಗಾಂಧಿ ಅವರು ಬ್ರಿಟಿಷ್ ಪೌರತ್ವವನ್ನು ಹೊಂದಿದ್ದಾರೆ ಎಂದು ಸಾಬೀತುಪಡಿಸಲು ಬ್ರಿಟಿಷ್ ಸರ್ಕಾರದಿಂದ ಪಡೆದ ದಾಖಲೆಗಳು ಮತ್ತು ಇಮೇಲ್ ಸಂವಹನಗಳು ತಮ್ಮ ಬಳಿ ಇವೆ ಎಂದು ಶಿಶಿರ್ ಈ ಹಿಂದೆ ವಾದಿಸಿದ್ದರು. ಒಂದು ವೇಳೆ ಇದು ಸಾಬೀತಾದರೆ ರಾಹುಲ್ ಗಾಂಧಿ ಅವರು ಭಾರತದಲ್ಲಿ ಚುನಾವಣೆ ಎದುರಿಸಲು ಅಥವಾ ಲೋಕಸಭಾ ಸದಸ್ಯರಾಗಿ ಮುಂದುವರಿಯಲು ಅನರ್ಹರಾಗುತ್ತಾರೆ ಎಂಬುದು ಅರ್ಜಿದಾರರ ವಾದವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ