₹2,500 ಕೋಟಿ ಸೈಬರ್‌ ವಂಚನೆ ಜಾಲ ಪತ್ತೆ ; ಖಾಸಗಿ ಬ್ಯಾಂಕ್ ಅಧಿಕಾರಿಗಳು ಶಾಮೀಲು, 20 ಆರೋಪಿಗಳ ಬಂಧನ

ರಾಜಕೋಟ್: ಸೈಬರ್ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆಯ ವಿರುದ್ಧ ಸಮರ ಸಾರಿರುವ ಗುಜರಾತ್‌ನ ರಾಜ್‌ಕೋಟ್ ಗ್ರಾಮಾಂತರ ಪೊಲೀಸರು, ಇತಿಹಾಸದಲ್ಲೇ ಅತಿದೊಡ್ಡ ವಂಚನೆ ಜಾಲವನ್ನು ಭೇದಿಸಿದ್ದಾರೆ. ಈ ಜಾಲವು ಆನ್‌ಲೈನ್ ಗೇಮಿಂಗ್ ಮತ್ತು ಜಿಎಸ್‌ಟಿ ಕಳ್ಳತನದ ಮೂಲಕ ಸಂಗ್ರಹವಾದ ಕೋಟ್ಯಂತರ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾಯಿಸುತ್ತಿತ್ತು.
ಇದುವರೆಗೆ 20 ಆರೋಪಿಗಳನ್ನು ಬಂಧಿಸಲಾಗಿದೆ. ಇದರಲ್ಲಿ ಯೆಸ್ ಬ್ಯಾಂಕ್ (Yes Bank), ಆಕ್ಸಿಸ್ ಬ್ಯಾಂಕ್ (Axis Bank) ಮತ್ತು ಎಚ್‌ಡಿಎಫ್‌ಸಿ (HDFC) ಬ್ಯಾಂಕ್‌ಗಳ ಉದ್ಯೋಗಿಗಳು ಸೇರಿದ್ದಾರೆ.
ಆರಂಭದಲ್ಲಿ ₹1,500 ಕೋಟಿ ಎಂದು ಅಂದಾಜಿಸಲಾಗಿದ್ದ ಈ ವಂಚನೆಯ ಮೊತ್ತ, ತನಿಖೆ ಮುಂದುವರಿದಂತೆ ₹2,500 ಕೋಟಿ ದಾಟಿರುವುದು ಬೆಳಕಿಗೆ ಬಂದಿದೆ.
 ಈ ಜಾಲಕ್ಕೆ ಸಂಬಂಧಿಸಿದ 85 ಬ್ಯಾಂಕ್ ಖಾತೆಗಳನ್ನು ಗುರುತಿಸಲಾಗಿದ್ದು, ದೇಶಾದ್ಯಂತ ಇವುಗಳ ವಿರುದ್ಧ ಸುಮಾರು 535 ದೂರುಗಳು ದಾಖಲಾಗಿವೆ.
ಒಳಗಿನವರೇ ಸಂಚುಕೋರರು!
ಈ ವಂಚನೆಯಲ್ಲಿ ಬ್ಯಾಂಕ್ ಅಧಿಕಾರಿಗಳ ಪಾತ್ರ ಬಹಳ ದೊಡ್ಡದಿದೆ ಎಂದು ಎಸ್ಪಿ ವಿಜಯ ಗುರ್ಜರ್ ತಿಳಿಸಿದ್ದಾರೆ. ಬಂಧಿತ ಅಧಿಕಾರಿಗಳಾದ ಮೌಲಿಕ್ ಕಮಾನಿ (ಯೆಸ್ ಬ್ಯಾಂಕ್), ಕಲ್ಪೇಶ ದಂಗಾರಿಯಾ (ಆಕ್ಸಿಸ್ ಬ್ಯಾಂಕ್) ಮತ್ತು ಅನುರಾಗ ಬಲ್ಧಾ (ಎಚ್‌ಡಿಎಫ್‌ಸಿ) ಅವರು ವಂಚಕರಿಗೆ ಸಾಥ್ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇವರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಮತ್ತು ನಕಲಿ ಕೃಷಿ ಸಂಸ್ಥೆಗಳ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಲು ಸಹಾಯ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಬ್ಯಾಂಕ್ ವ್ಯವಸ್ಥೆಯಲ್ಲಿ ದೊಡ್ಡ ಮೊತ್ತದ ಹಣ ವರ್ಗಾವಣೆಯಾದಾಗ ಬರುವ ‘ಅಲರ್ಟ್’ಗಳನ್ನು ಇವರು ತಮ್ಮ ಅಧಿಕಾರ ಬಳಸಿ ಹತ್ತಿಕ್ಕುತ್ತಿದ್ದರು ಹಾಗೂ ಸಂಶಯಾಸ್ಪದ ವ್ಯವಹಾರಗಳು ನಡೆದರೂ, ಅವುಗಳಿಗೆ ನಕಲಿ ದಾಖಲೆಗಳನ್ನು ನೀಡಿ ಆ ಖಾತೆಗಳು ಚಾಲನೆಯಲ್ಲಿರುವಂತೆ ನೋಡಿಕೊಳ್ಳುತ್ತಿದ್ದರು ಎಂಬುದು ಗೊತ್ತಾಗಿದೆ.
ಹಣ ವರ್ಗಾವಣೆ ಹೇಗೆ ನಡೆಯುತ್ತಿತ್ತು?
ವಂಚಕರು ಸಾಮಾನ್ಯ ಜನರ ಗುರುತಿನ ಚೀಟಿಗಳನ್ನು ಬಾಡಿಗೆಗೆ ಪಡೆದು ‘ಮ್ಯೂಲ್ ಅಕೌಂಟ್’ (Mule Accounts)ಗಳನ್ನು ಸೃಷ್ಟಿಸುತ್ತಿದ್ದರು. ಈ ಖಾತೆಗಳ ಮೂಲಕ ಹರಿದು ಬರುತ್ತಿದ್ದ ಹಣವನ್ನು ಹವಾಲಾ ಮೂಲಕ ಅಥವಾ ಕ್ರಿಪ್ಟೋಕರೆನ್ಸಿ ಆಗಿ ಪರಿವರ್ತಿಸಿ ವಿದೇಶಗಳಿಗೆ ಸಾಗಿಸಲಾಗುತ್ತಿತ್ತು.ಡಿಜಿಟಲ್ ಅರೆಸ್ಟ್ (Digital Arrest) ಮತ್ತು ಹೂಡಿಕೆಯ ಹೆಸರಿನಲ್ಲಿ ಜನರಿಗೆ ವಂಚಿಸಿ ದೋಚಿದ ಹಣವನ್ನೆಲ್ಲಾ ಇವರು ಇದೇ ರೀತಿ ವೈಟ್ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ತನಿಖೆ ಮುಂದುವರಿಕೆ
ಈ ಜಾಲವು ಕೇವಲ ಭಾರತಕ್ಕೆ ಸೀಮಿತವಾಗಿರದೆ ಅಂತಾರಾಷ್ಟ್ರೀಯ ಮಟ್ಟದ ನಂಟನ್ನು ಹೊಂದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಸ್ತುತ ಡಿಜಿಟಲ್ ಪುರಾವೆಗಳನ್ನು ಕಲೆಹಾಕುತ್ತಿರುವ ಪೊಲೀಸರು, ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಬ್ಯಾಂಕ್ ಅಧಿಕಾರಿಗಳು ಮತ್ತು ಏಜೆಂಟ್‌ಗಳನ್ನು ಬಂಧಿಸುವ ಸಾಧ್ಯತೆಯಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement